ಮಹಾಮಾರಿ ಕರೋನಾದ ರುದ್ರನರ್ತನ ತಡೆಯುವ ಅಂತಿಮ ಪ್ರಯತ್ನವಾಗಿ ಭಾರತ ಮುಂದಿನ 21 ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಘೋಷಿಸಿದೆ.
ವೈರಾಣು ಸೋಂಕು ವ್ಯಾಪಕವಾಗುತ್ತಿರುವ ಹೊತ್ತಿನಲ್ಲಿ ದೇಶದ ಮಹತ್ವದ ನಿರ್ಧಾರ ಇದಾಗಿದ್ದು, ಕಳೆದ ವಾರಾಂತ್ಯದ ಹೊತ್ತಿಗೆ ಭಾನುವಾರ ಒಂದು ದಿನದ ಮಟ್ಟಿಗೆ ಜನತಾ ಕರ್ಫ್ಯೂ ಘೋಷಣೆ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರು, ಎರಡು ದಿನದ ಅಂತರದಲ್ಲಿ ಮತ್ತೊಮ್ಮೆ ದೇಶದ ಜನರನ್ನುದ್ದೇಶಿಸಿ ಮಾತನಾಡುತ್ತಾ, 21 ದಿನಗಳ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಿದರು.
ಕಳೆದ ಒಂದೆರಡು ದಿನಗಳ ಈಚೆಗೆ ದೇಶದ ಕರೋನಾ ಸೋಂಕಿತರ ಸಂಖ್ಯೆಯಲ್ಲಿ ಆಗುತ್ತಿರುವ ಆಘಾತಕಾರಿ ಪ್ರಮಾಣದ ಏರಿಕೆ ಮತ್ತು ಈಗಾಗಲೇ ಸೋಂಕು ಜನಸಮುದಾಯದ ನಡುವೆ ವ್ಯಾಪಕವಾಗಿ ಹರಡಿರುವು ಭೀತಿಯ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರ ಈ ಘೋಷಣೆ ಮಹತ್ವ ಪಡೆದಿದ್ದು, ದೇಶದ ನಾಗರಿಕರು ತಮ್ಮ ಜೀವ ಮತ್ತು ದೇಶದ ಉಳಿವಿನ ಹಿನ್ನೆಲೆಯಲ್ಲಿ ಇಂತಹ ಕ್ರಮಕ್ಕೆ ಸಂಪೂರ್ಣ ಸಹಕಾರ ನೀಡುವುದು ಅನಿವಾರ್ಯ. ಇಲ್ಲದೇ ಹೋದರೆ ದೇಶ 21 ವರ್ಷಗಳಷ್ಟು ಹಿಂದೆ ಸರಿಯಲಿದೆ ಮತ್ತು ಅಪಾರ ಪ್ರಾಣಹಾನಿಗೆ ಸಾಕ್ಷಿಯಾಗಬೇಕಾಗಬಹುದು. ಆ ಹಿನ್ನೆಲೆಯಲ್ಲಿ ಸರ್ಕಾರ ಕಠಿಣ ಕ್ರಮಕೈಗೊಂಡಿದ್ದು, ಎಲ್ಲರೂ ತಮ್ಮತಮ್ಮ ಮನೆಯ ಒಳಗೇ ಇರಬೇಕು, ಮನೆಯಿಂದ ಹೊರಬಂದರೆ ಪರಿಸ್ಥಿತಿ ಊಹಿಸಲೂ ಆಗದು ಎಂದೂ ಪ್ರಧಾನಿ ಆತಂಕ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಕರ್ನಾಟಕ, ಕೇರಳ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳು ಬಹುತೇಕ ಲಾಕ್ ಡೌನ್ ಜಾರಿಗೊಳಿಸಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಕರ್ಫ್ಯೂ ಸಹ ಜಾರಿಯಲ್ಲಿದೆ. ಇದೀಗ ಕೇಂದ್ರ ಸರ್ಕಾರ ರಾಷ್ಟ್ರವ್ಯಾಪಿ ಲಾಕ್ ಡೌನ್ ಘೋಷಿಸುವ ಮೂಲಕ ಮಾರಕ ರೋಗದ ನಿಯಂತ್ರಣಕ್ಕೆ ಐತಿಹಾಸಿಕ ಹೆಜ್ಜೆ ಇಟ್ಟಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಒಂದೇ ಈಗ ನಮ್ಮ ಮುಂದಿರುವ ಮಾರ್ಗ. ಆ ಹಿನ್ನೆಲೆಯಲ್ಲಿ ಈ 21 ದಿನಗಳ ಕಾಲ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ತಮ್ಮನ್ನೂ ಸೇರಿ ಎಲ್ಲರಿಗೂ ಅನ್ವಯವಾಗುತ್ತದೆ ಎಂದೂ ಮೋದಿ ಹೇಳಿದ್ದಾರೆ.
ಈ ನಡುವೆ, ಕರೋನಾ ವಿರುದ್ಧದ ಸಮರಕ್ಕೆ ದೇಶದ ವೈದ್ಯಕೀಯ ರಂಗ ಅಗತ್ಯ ಪ್ರಮಾಣದಲ್ಲಿ ಸಜ್ಜಾಗಿಲ್ಲ. ವೈದ್ಯಕೀಯ ಸಿಬ್ಬಂದಿಗೆ ಬೇಕಾದ ವೈಯಕ್ತಿಕ ಸುರಕ್ಷಾ ಸಾಧನಗಳು(ಪಿಪಿಇ), ರೋಗಿಗಳಿಗೆ ಅಗತ್ಯ ವೆಂಟಿಲೇಟರ್, ಟೆಸ್ಟಿಂಗ್ ಕಿಟ್ ಮುಂತಾದ ಸೌಲಭ್ಯಗಳನ್ನು ಕೂಡಲೇ ಒದಗಿಸಲಾಗುವುದು ಎಂದಿರುವ ಪ್ರಧಾನಿ, ದೇಶದ ಆರೋಗ್ಯ ಮತ್ತು ವೈದ್ಯಕೀಯ ವ್ಯವಸ್ಥೆಯನ್ನು ಕರೋನಾ ವಿರುದ್ಧದ ಹೋರಾಟಕ್ಕೆ ಸಜ್ಜುಗೊಳಿಸಲು 15 ಸಾವಿರ ಕೋಟಿ ರೂ.ಗಳನ್ನು ಈಗಾಗಲೇ ಸರ್ಕಾರ ತೆಗೆದಿರಿಸಿದೆ ಎಂದೂ ಹೇಳಿದ್ದಾರೆ.
ಇಷ್ಟು ದಿನ ಚೀನಾ, ಇಟಲಿ, ಇರಾನ್, ಸ್ಪೇನ್ ಗಳಲ್ಲಿ ಕರೋನಾ ವೈರಾಣು ರೋಗದ ರುದ್ರನರ್ತನ ನೋಡಿ ಹುಬ್ಬೇರಿಸುತ್ತಿದ್ದ ಭಾರತೀಯರು ಇದೀಗ ನಿಧಾನಕ್ಕೆ ಭೂತಬಡಿದಂತಾಗಿದ್ದಾರೆ. ದಿನದಿಂದ ದಿನಕ್ಕೇ ಏರುತ್ತಲೇ ಇರುವ ಮಹಾಮಾರಿ ಸೋಂಕಿತರ ಸಂಖ್ಯೆ ಮತ್ತು ಜೀವಬಲಿಗಳು ಮತ್ತು ಸೋಂಕು ತಡೆ ಮತ್ತು ರೋಗ ನಿಯಂತ್ರಣಕ್ಕೆ ಆಡಳಿತ ವ್ಯವಸ್ಥೆಗಳು ಪರದಾಡುತ್ತಿರುವುದು ಜನಸಾಮಾನ್ಯರನ್ನು ಬೆಚ್ಚಿಬೀಳಿಸಿದೆ. ಆ ಹಿನ್ನೆಲೆಯಲ್ಲಿ ಮೋದಿಯವರ ಮಾತುಗಳ ಬಗ್ಗೆ ದೇಶದ ಜನತೆ ಹಲವು ನಿರೀಕ್ಷೆ ಹೊಂದಿದ್ದರು. ಮುಖ್ಯವಾಗಿ ದೇಶದ ಆರೋಗ್ಯ ವ್ಯವಸ್ಥೆಯನ್ನು ಅಗಾಧ ಪ್ರಮಾಣದ ಸವಾಲಿಗೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ಯಾವ ಕ್ರಮ ಘೋಷಿಸಲಿದ್ದಾರೆ ಎಂಬ ಕುತೂಹಲವಿತ್ತು. ಇದೀಗ 15 ಸಾವಿರ ಕೋಟಿ ರೂ. ಅನುದಾನ ಘೋಷಣೆ ಸಮಾಧಾನ ತಂದಿದೆ. ಜೊತೆಗೆ ಸೋಂಕು ಹರಡುವಿಕೆ ತಡೆಯ ನಿಟ್ಟಿನಲ್ಲಿ ಸಾಮಾಜಿಕ ಅಂತರವೊಂದೇ ಪರಿಣಾಮಕಾರಿ ಮಾರ್ಗ ಎಂಬ ಹಿನ್ನೆಲೆಯಲ್ಲಿ 21 ದಿನಗಳ ಲಾಕ್ ಡೌನ್ ಘೋಷಣೆ ಕೂಡ ಮಹತ್ವದ ಹೆಜ್ಜೆಯೇ.
ಆದರೆ, ಈ ಕ್ರಮಗಳು ಕೂಡ ತೀರಾ ತಡವಾಯಿತು ಮತ್ತು ಸದ್ಯದ ಪರಿಸ್ಥಿತಿಯಲ್ಲಿ ತೀರಾ ಅಲ್ಪವೂ ಎಂಬ ಮಾತುಗಳೂ ಕೇಳಿಬರುತ್ತಿವೆ. ಮುಖ್ಯವಾಗಿ ಸಾಮಾಜಿಕ ಅಂತರ ಕಾಯುವ ನಿಟ್ಟಿನಲ್ಲಿ ಲಾಕ್ ಡೌನ್ ನಂತಹ ಕ್ರಮಗಳನ್ನು ಕನಿಷ್ಟ ಹದಿನೈದು ದಿನಗಳ ಮುಂಚೆಯೇ ಘೋಷಿಸಬೇಕಿತ್ತು. ಮತ್ತು ಮುಖ್ಯವಾಗಿ ವಿದೇಶಗಳಿಂದ ಜನತೆ ದೇಶವನ್ನು ಪ್ರವೇಶಿಸುವುದಕ್ಕೆ ಸಂಪೂರ್ಣ ತಡೆ ಒಡ್ಡಬೇಕಿತ್ತು. ಆ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಸರ್ಕಾರ ತೋರಿದೆ ವಿಳಂಬ ಧೋರಣೆಗೆ ಈಗ ಇಡೀ ದೇಶ ಬೆಲೆ ತೆರಬೇಕಾಗಿದೆ ಎಂಬ ಅಸಮಾಧಾನ ಕೇಳಿಬರುತ್ತಿದೆ.
ಜೊತೆಗೆ ಇಂತಹ ಲಾಕ್ ಡೌನ್ ಕ್ರಮದಿಂದಾಗಿ ಹೊತ್ತಿನ ಊಟವನ್ನೂ ಕಳೆದಕೊಳ್ಳುವ, ಜೀವನ್ಮರಣದ ಸವಾಲು ಎದುರಿಸುವ ಕಡುಬಡವರು, ಕೂಲಿಕಾರರು, ಶ್ರಮಿಕರ ನಿತ್ಯದ ಊಟೋಪಚಾರ ಮತ್ತು ಬದುಕು ಸಾಗಿಸುವ ಕನಿಷ್ಠ ವೆಚ್ಚಗಳನ್ನು ಭರಿಸಲು ಸರ್ಕಾರ ವಿಶೇಷ ನೆರವು ಯೋಜನೆಗಳನ್ನು ಘೋಷಿಸಬೇಕಿತ್ತು. ಕನಿಷ್ಠ ಅವರಿಗೆ ಮೂರು ಹೊತ್ತಿನ ಊಟ ಮತ್ತು ದಿನನಿತ್ಯದ ಅನಿವಾರ್ಯ ಕಚ್ಚುವೆಚ್ಚಕ್ಕೆ ನೆರವು ನೀಡಲು ಆಹಾರ ಮತ್ತು ಹಣಕಾಸು ಬೆಂಬಲದ ಕ್ರಮಗಳನ್ನು ಘೋಷಿಸಬೇಕಿತ್ತು. ಆ ನಿರೀಕ್ಷೆ ಹುಸಿಯಾಗಿದೆ. ಹಾಗೇ ದೇಶದ ಇಂತಹ ಸಂಕಷ್ಟದ ಹೊತ್ತಿನಲ್ಲಿ ದೇಶದ ಶ್ರೀಮಂತ ಉದ್ಯಮಿಗಳು, ಬೃಹತ್ ಕಾರ್ಪೊರೇಟ್ ಸಂಸ್ಥೆಗಳು, ಶ್ರೀಮಂತ ದೇವಾಲಯ, ಮಠ, ಮಂದಿರ ಸೇರಿ ಧಾರ್ಮಿಕ ಕೇಂದ್ರಗಳು ಜನರ ನೆರವಿಗೆ ಬರಬೇಕು, ಕನಿಷ್ಠ ವೈದ್ಯಕೀಯ ಕೊರತೆ ನೀಗಲು ಕೈಜೋಡಿಸಬೇಕು ಎಂಬ ಕರೆಯನ್ನು ಕೂಡ ಪ್ರಧಾನಿ ಮೋದಿಯವರಿಂದ ನಿರೀಕ್ಷಿಸಲಾಗಿತ್ತು. ಆ ವಿಷಯದಲ್ಲಿ ಕೂಡ ಮೋದಿಯವರು ಏನನ್ನೂ ಪ್ರಸ್ತಾಪಿಸದೆ, ದೇಶದ ತೆರಿಗೆ ವಿನಾಯ್ತಿ, ಇಲ್ಲಿನ ನೆಲ-ಜಲ, ಜನರ ದುಡಿಮೆಯಿಂದ ಬೆಳೆದ ಶ್ರೀಮಂತ ಜನರು ಮತ್ತು ಧಾರ್ಮಿಕ ಕೇಂದ್ರಗಳಿಗೆ ಇಲ್ಲಿನ ಜನರ ಸಂಕಷ್ಟಕ್ಕೆ ಸ್ಪಂದಿಸುವ ಕನಿಷ್ಠ ಮಾನವೀಯ ಕಾಳಜಿ ಬೇಡವೇ ಎಂಬ ಪ್ರಶ್ನೆಗೆ ಅವಕಾಶ ನೀಡದಂತಾಗಿದೆ.
ಜೊತೆಗೆ, ಇಂತಹ ಸಂಕಷ್ಟದ ಹೊತ್ತಲ್ಲಿ ಪರಿಸ್ಥಿತಿಯನ್ನು ರಾಷ್ಟ್ರೀಯ ತುರ್ತು ಎಂದು ಪರಿಗಣಿಸಿ ದೇಶದ ಎಲ್ಲಾ ಬಗೆಯ ಆರೋಗ್ಯ ಸೇವೆಯನ್ನು ಸರ್ಕಾರದ ಸ್ವಾಧೀನಕ್ಕೆ ಪಡೆಯುವ ತಾತ್ಕಾಲಿಕ ಕ್ರಮವನ್ನು ಕೂಡ ನಿರೀಕ್ಷಿಸಲಾಗಿತ್ತು. ಆದರೆ ಆ ಬಗ್ಗೆ ಕೂಡ ಮೋದಿಯವರು ಮೌನವಹಿಸಿದ್ದಾರೆ. ಕನಿಷ್ಠ ಕರೋನಾ ಸೋಂಕು ಪತ್ತೆಯ ಪರೀಕ್ಷೆಯ ದರವನ್ನು (ಖಾಸಗೀ ಲ್ಯಾಬ್ಗಳಲ್ಲಿ) ಕಡಿತ ಮಾಡುವ ಘೋಷಣೆಯನ್ನು ಕೂಡ ಮಾಡಲಿಲ್ಲ.
ಹಾಗಾಗಿ ಸೋಂಕು ತಡೆಯ ನಿಟ್ಟಿನಲ್ಲಿ ಮೋದಿಯವರ ಘೋಷಣೆ ಬಹುದೊಡ್ಡ ಹೆಜ್ಜೆಯಾಗಿದ್ದು, ಜನತೆಯಲ್ಲಿ ನಿರಾಳತೆ ಮೂಡಿಸಿದ್ದರೂ, ವೈದ್ಯಕೀಯ ವೆಚ್ಚದಂತಹ ವಿಷಯದಲ್ಲಿ ಸರ್ಕಾರದಿಂದ ನಿರೀಕ್ಷಿಸಿದ್ದ ಹಲವು ದೃಢ ಹೆಜ್ಜೆಗಳು ನಿಜವಾಗಲೇ ಇಲ್ಲ!