ಕರೋನಾ ವಿರುದ್ಧದ ಹೋರಾಟದ ಭಾಗವಾಗಿ ಕೇಂದ್ರ ಸರ್ಕಾರ ಗುರುವಾರ ಬಹುನಿರೀಕ್ಷಿತ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದು, ಸೋಂಕು ನಿಯಂತ್ರಣದ ಭಾಗವಾಗಿ ಕೈಗೊಂಡಿರುವ ಸಂಪೂರ್ಣ ಲಾಕ್ ಡೌನ್ ಕಾರಣದಿಂದಾಗಿ ದುಡಿಮೆ ಕಳೆದುಕೊಳ್ಳುವ ದುರ್ಬಲ ವರ್ಗದ ಜನರ ನೆರವಿಗೆ ಸರ್ಕಾರ ಸ್ಪಂದಿಸಿದಂತಾಗಿದೆ.
ಈ ನಡುವೆ ದೇಶದಲ್ಲಿ ಕರೋನಾ ಸೋಂಕಿತರ ಸಂಖ್ಯೆ 700ರ ಗಡಿ ತಲಿಪಿದ್ದು, ಕೇವಲ ಮೂರು ದಿನದಲ್ಲೇ ದುಪ್ಪಟ್ಟಾಗಿದೆ. ಆ ಹಿನ್ನೆಲೆಯಲ್ಲಿ ದೇಶವ್ಯಾಪಿ ಲಾಕ್ ಡೌನ್ ಘೋಷಣೆ ಮಾಡಿದ ಎರಡು ದಿನಗಳ ಬಳಿಕ, ನಾಗರಿಕರ ಕೂಗಿಗೆ ಸ್ಪಂದಿಸಿರುವ ಸರ್ಕಾರ ಕೊನೆಗೂ ಪ್ಯಾಕೇಜ್ ಘೋಷಣೆ ಮಾಡಿದೆ. ಆದರೆ, ಬರೋಬ್ಬರಿ 1.70 ಲಕ್ಷ ಕೋಟಿ ಮೊತ್ತದ ಪ್ಯಾಕೇಜನ್ನು ಸಾಮಾಜಿಕ ಅಂತರ ಕಟ್ಟುನಿಟ್ಟಾಗಿ ಕಾಯ್ದುಕೊಳ್ಳಬೇಕಾದ ಈ ಹೊತ್ತಿನಲ್ಲಿ ನಿಜವಾದ ಅರ್ಹ ಫಲಾನುಭವಿಗಳಿಗೆ ತಲುಪಿಸುವುದು ಸರ್ಕಾರದ ಮುಂದಿರುವ ಸವಾಲು.
ಏಕೆಂದರೆ, ಈ ಹಿಂದೆ ಕರ್ನಾಟಕದ್ದೇ ಉದಾಹರಣೆ ತೆಗೆದುಕೊಳ್ಳುವುದಾದರೆ; ಭೀಕರ ಪ್ರವಾಹಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನೀಡಿದ ಪರಿಹಾರ ಮೊತ್ತದಲ್ಲಿ ಸಾವಿರಾರು ಕೋಟಿ ರೂ. ನಕಲಿ ಫಲಾನುಭವಿಗಳಿಗೆ, ಆಳುವ ಪಕ್ಷದ ಕಾರ್ಯಕರ್ತರಿಗೆ ಹೋಗಿದೆ. ಅರ್ಹ ಫಲಾನುಭವಿಗಳಲ್ಲಿ ಹಲವರಿಗೆ ಸರ್ಕಾರದ ನೆರವು ತಲುಪಿಲ್ಲ ಎಂಬ ವ್ಯಾಪಕ ದೂರುಗಳು ಕೇಳಿಬಂದಿದ್ದವು. ಜೊತೆಗೆ ಸಕಾಲದಲ್ಲಿ; ಅತ್ಯಂತ ತುರ್ತಾಗಿ ಈ ಹಣಕಾಸು ನೆರವನ್ನು ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲದೆ ಪರದಾಡುತ್ತಿರುವ ಕಡುಬಡವರಿಗೆ, ನಿರ್ಗತಿಕರಿಗೆ ತಲುಪಿಸುವ ವ್ಯವಸ್ಥೆಯಾಗಬೇಕಿದೆ. ಇಲ್ಲದೇ ಹೋದರೆ, ಒಂದು ಕಡೆ ಕರೋನಾ ಮಹಾಮಾರಿಯ ಮಾರಣಹೋಮ ನಡೆದರೆ, ಅದಕ್ಕೆ ಸಮಾನಾಂತರವಾಗಿ ಹಸಿವಿನಿಂದ, ಬರಿಗೈಲಿ, ಖಾಲಿ ಹೊಟ್ಟೆಯಲ್ಲಿ ಬದುಕನ್ನು ಎದುರಿಸಲಾಗದೆ ಎದೆಗುಂದಿ ಆತ್ಮಹತ್ಯೆಯಂತಹ ವಿಮುಖ ದಾರಿ ಹಿಡಿಯುವರಿಂದಾಗಿ ಮತ್ತೊಂದು ರೀತಿಯ ಮಾರಣಹೋಮಕ್ಕೆ ದೇಶ ಸಾಕ್ಷಿಯಾಗಬೇಕಾಗಬಹುದು.
ವೈದ್ಯಕೀಯ ಸಿಬ್ಬಂದಿಗೆ ತಲಾ 50 ಲಕ್ಷ ವಿಮಾ ಸೌಲಭ್ಯ ಹೊರತುಪಡಿಸಿ ಉಳಿದಂತೆ ಈಗಾಗಲೇ ಇರುವ ವಿವಿಧ ಬಡವರು ಮತ್ತು ಕಾರ್ಮಿಕರ ಕಲ್ಯಾಣ ಯೋಜನೆಗಳೂ, ರೈತಪರ ಕಾರ್ಯಕ್ರಮಗಳ ಮೂಲಕವೇ ಈ ಪ್ಯಾಕೇಜ್ ತಲುಪಿಸುವ ಯೋಜನೆಯನ್ನು ಸರ್ಕಾರ ಹೊಂದಿದೆ. ಆದರೆ, ಈಗಾಗಲೇ ಇರುವ ಜನ್ ಧನ್ ಖಾತೆಗಳು, ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಕೂಲಿ ಖಾತೆಗಳು, ಪಡಿತರ ಚೀಟಿಗಳಲ್ಲಿ ಸಾಕಷ್ಟು ಅನರ್ಹರು ನುಸುಳಿದ್ದಾರೆ ಎಂಬುದು ಸರ್ಕಾರಿ ಅಂಕಿಅಂಶಗಳೇ ಹೇಳುವ ಸತ್ಯ. ಆದರೆ, ಈ ಹೊತ್ತಲ್ಲಿ ಅರ್ಹರನ್ನು ಮಾತ್ರ ಗುರುತಿಸಿ ನೆರವು ತಲುಪಿಸುವುದು ದುಸ್ತರ. ಹಾಗಾಗಿ ವ್ಯಾಪಕ ಪ್ರಚಾರ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ನಿಜವಾಗಿಯೂ ಅರ್ಹರಿಗೆ ಅದರಲ್ಲೂ ಇಂತಹ ಯಾವುದೇ ಯೋಜನೆ- ಕಾರ್ಯಕ್ರಮಗಳಡಿ ಇನ್ನೂ ಅಧಿಕೃತವಾಗಿ ಸೇರ್ಪಡೆಯಾಗದೇ ಇರುವ ವಸತಿರಹಿತ, ಅಧಿಕೃತ ವಿಳಾಸರಹಿತ, ಬ್ಯಾಂಕ್ ಖಾತೆರಹಿತ ಕಡುಬಡವರು ಮತ್ತು ನಿರ್ಗತಿಕರಿಗೆ ಈ ಪ್ಯಾಕೇಜ್ ನೆರವಿಗೆ ಬರುವಂತೆ ಮಾಡಲು ಅನರ್ಹರು ಮತ್ತು ಅನ್ಯ ಲಾಭಗಳ ಉದ್ದೇಶಕ್ಕಾಗಿ ಇಂತಹ ಜನಕಲ್ಯಾಣ ಯೋಜನೆಗಳಲ್ಲಿ ನೋಂದಾಯಿಸಿಕೊಂಡಿರುವವರು, ಮುಖ್ಯವಾಗಿ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರು ಮತ್ತು ಅವರ ಆಪ್ತರು ಈ ಸಂದರ್ಭದಲ್ಲಿ ಸ್ವಯಂ ಪ್ರೇರಿತರಾಗಿ ಈ ಪ್ಯಾಕೇಜ್ ನೆರವು ಕೈಬಿಡುವ ಮನಸ್ಸು ಮಾಡಬೇಕಿದೆ ಮತ್ತು ಅದಕ್ಕೆ ಸರ್ಕಾರ ಪ್ರೇರೇಪಣೆ ನೀಡಬೇಕಿದೆ.
ಜೊತೆಗೆ, ಈಗಾಗಲೇ ನಾಲ್ಕು ದಿನಗಳಿಂದ ಕೆಲಸವಿಲ್ಲದೆ, ದುಡಿಮೆ ಇಲ್ಲದೆ, ಹೈರಾಣಾಗಿರುವ ದಿನಗೂಲಿ ಕೆಲಸಗಾರರು, ಕಡುಬಡವರ ನೆರವಿಗೆ ಬರುವುದರಲ್ಲಿ ಸರ್ಕಾರ ವಿಳಂಬ ಮಾಡಿದೆ. ಜೊತೆಗೆ ದಿಢೀರ್ ಲಾಕ್ ಡೌನ್ ನಿಂದಾಗಿ ನಗರಪ್ರದೇಶಗಳಲ್ಲಿ ಅಂದಂದಿನ ದುಡಿಮೆ ಅಂದು ಕಂಡುಕೊಳ್ಳುತ್ತಾ ಜೀವನ ನಡೆಸುತ್ತಿದ್ದ ಕಾರ್ಮಿಕ ವರ್ಗ ಅಕ್ಷರಶಃ ಬೀದಿಗೆ ಬಿದ್ದಿದೆ. ಬಹಳಷ್ಟು ಸಂದರ್ಭದಲ್ಲಿ ಹೋಟೆಲ್, ಪಿಜಿ, ಹಾಸ್ಟೆಲುಗಳು ಮತ್ತು ಕಾರ್ಮಿಕ ವಸತಿ ಕಾಲನಿಗಳೂ ಮುಚ್ಚಿರುವುದರಿಂದ, ಉದ್ಯಮ ಮತ್ತು ಕಾರ್ಖಾನೆಗಳು ಬಾಗಿಲು ಎಳೆದಿರುವುದರಿಂದ ಸಹಜವಾಗೇ ಗ್ರಾಮೀಣ ಮೂಲದ ಕೋಟ್ಯಂತರ ಮಂದಿ ವಲಸೆ ಕಾರ್ಮಿಕರು ವಾಪಸು ಹಳ್ಳಿಗಳ ಕಡೆ ಮುಖಮಾಡಿದ್ದಾರೆ. ಈಗಾಗಲೇ ಲಕ್ಷಾಂತರ ಮಂದಿ ಪೇಟೆ ತೊರೆದು ಹಳ್ಳಿಗೆ ಹೋಗಿದ್ದಾರೆ. ಇನ್ನೂ ಕೆಲವರು ನಡೆದುಕೊಂಡು, ಸರಕು ಸಾಗಣೆ ವಾಹನಗಳಲ್ಲಿ ಮೂಲ ಹಳ್ಳಿಗಳತ್ತ ಪ್ರಯಾಣಿಸುತ್ತಿದ್ದಾರೆ. ಇದರಿಂದಾಗಿಯೂ ನಿಜಕ್ಕೂ ಸರ್ಕಾರದ ಪ್ಯಾಕೇಜಿಗೆ ಅರ್ಹರಾದ ಇಂಥವರು ತಮ್ಮ ಅಧಿಕೃತ ವಿಳಾಸ, ಬ್ಯಾಂಕ್ ಖಾತೆಗಳನ್ನೇ ಮುಂದುವರಿಸುತ್ತಾರೆಯೇ? ಅಥವಾ ಹಳ್ಳಿಗೆ ಹೋದ ಬಳಿಕ ಈ ಖಾತೆಗಳನ್ನು ಬಳಸಲಾರದ ಸ್ಥಿತಿಗೆ ತಲುಪುತ್ತಾರೆಯೇ ಎಂಬುದು ಗೊತ್ತಿಲ್ಲ.
ಒಂದು ಕಡೆ ಅವರ ನಿತ್ಯದ ಬದುಕಿಗೆ ಆಸರೆ ಏನು, ಹಸಿವು ನೀಗಿಸಲು ಏನು ಮಾಡುತ್ತಾರೆ? ದುಡಿಮೆ ಏನು? ಭವಿಷ್ಯದ ಬದುಕು ಹೇಗೆ? ಎಂಬ ಗಂಭೀರ ಪ್ರಶ್ನೆಗಳಿವೆ. ಮತ್ತೊಂದು ಕಡೆ ಹೀಗೆ ನಗರಗಳಿಂದ ಗ್ರಾಮೀಣ ಭಾರತಕ್ಕೆ ಹೋದ ಈ ಅಮಾಯಕರು, ತಮಗೇ ಅರಿವಿಲ್ಲದೆ ತಮ್ಮೊಂದಿಗೆ ಮಾರಕ ಕರೋನಾ ವೈರಸ್ ಹೊತ್ತು ಓಯ್ದಿದ್ದರೆ ಅದು ಹಳ್ಳಿಗಳಲ್ಲಿ ಸೃಷ್ಟಿಸಬಹುದಾದ ಸೋಂಕಿನ ಅಗಾಧತೆ, ಮತ್ತು ಅದನ್ನು ನಿಭಾಯಿಸುವ ಸವಾಲಿನ ಪ್ರಶ್ನೆಯೂ ಇದೆ!
ಸೋಂಕು ನಿಯಂತ್ರಣದ ಅನಿವಾರ್ಯ ಕ್ರಮವಾಗಿ ಪ್ರಧಾನಿ ಮೋದಿಯವರು ಲಾಕ್ ಡೌನ್ ಘೋಷಿಸದೇ ಪರ್ಯಾಯ ದಾರಿಗಳಿರಲಿಲ್ಲ ಎಂಬುದು ಎಷ್ಟು ನಿಜವೋ, ಭಾರತದಂತಹ ವಲಸೆ ಕಾರ್ಮಿಕರ, ಆರ್ಥಿಕವಾಗಿ ತೀರಾ ದುರ್ಬಲ ದುಡಿಯುವ ವರ್ಗದವರ ಮೇಲೆಯೇ ಶೇ.90ರಷ್ಟು ಅಲವಂಬಿತವಾಗಿರುವ ಉದ್ಯಮ ಮತ್ತು ಕೈಗಾರಿಕಾ ಚಟುವಟಿಕೆಗಳ ಸ್ವರೂಪದಿಂದಾಗಿ ಅಂತಹ ಕ್ರಮ ಸೃಷ್ಟಿಸಿರುವ ಅನಾಹುತಗಳ ಸರಣಿಯೇ ಆರಂಭವಾಗಿದೆ ಎಂಬುದು ಕೂಡ ಸತ್ಯವೇ.
ಆ ಹಿನ್ನೆಲೆಯಲ್ಲಿ ದೇಶದ ಹಲವು ಅರ್ಥಶಾಸ್ತ್ರಜ್ಞರು ಮತ್ತು ಸಮಾಜಶಾಸ್ತ್ರಜ್ಞರು ಸರ್ಕಾರದ ಈ ಪ್ಯಾಕೇಜನ್ನು ಸ್ವಾಗತಿಸಿದ್ದರೂ, ಅದು ಸದ್ಯದ ಲಾಕ್ ಡೌನ್ ನ ಅಗಾಧತೆಯ ಎದುರು ತೀರಾ ಚಿಕ್ಕ ಮೊತ್ತ ಮತ್ತು ನಿಜವಾಗಿಯೂ ಬಡವರಿಗೆ ಆ ಮೊತ್ತ ಬರೋಬ್ಬರಿ ಒಂದು ತಿಂಗಳ ಕಾಲದ ಕುಟುಂಬ ನಿರ್ವಹಣೆಗೆ ಎಷ್ಟರಮಟ್ಟಿಗೆ ನೆರವಾಗಲಿದೆ? ಅವರಿಗೆ ಕನಿಷ್ಠ ಎರಡು ಹೊತ್ತಿನ ಗಂಜಿ ಹೊಂದಿಸಲು ಕೂಡ ಆ ಮೊತ್ತ ಸಾಕಾಗುವುದೆ ಎಂಬುದನ್ನು ಸರ್ಕಾರ ಯೋಚಿಸಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಹದಿನಾಲ್ಕನೇ ಹಣಕಾಸು ಆಯೋಗದ ಸದಸ್ಯ ಹಾಗೂ ಆರ್ಥಿಕ ತಜ್ಞ, ಎಂ ಗೋವಿಂದ್ ರಾವ್, ಅವರು ‘ದ ಕ್ವಿಂಟ್’ಗೆ ನೀಡಿದ ಹೇಳಿಕೆಯಲ್ಲಿ, ‘ಸರ್ಕಾರ ಈ ಪ್ಯಾಕೇಜ್ ಉದ್ದೇಶಿಸಿರುವುದಕ್ಕಿಂತ ವಾಸ್ತವವಾಗಿ ಲಾಕ್ ಡೌನ್ ಬಿಕ್ಕಟ್ಟು ಬಹಳ ಬೃಹತ್ತಾಗಿದೆ. ಸರ್ಕಾರ ಬಿಕ್ಕಟ್ಟಿನ ಅಗಾಧತೆ ಅಂದಾಜಿಸುವಲ್ಲಿ ಎಡವಿದೆ. ಉದ್ಯೋಗ ಖಾತ್ರಿ ಕೂಲಿ ಹೆಚ್ಚಳದಂತಹ ಪ್ಯಾಕೇಜಿನ ಹಲವು ಕ್ರಮಗಳು ಈಗಾಗಲೇ ಸರ್ಕಾರ ಬಜೆಟ್ಟಿನಲ್ಲಿ ಯೋಚಿಸಿದ್ದವುಗಳೇ. ಹಾಗಾಗಿ ಅಂತಿಮವಾಗಿ ಅದು ಸರ್ಕಾರ ಹೇಳಿದಂತೆ 1.70 ಲಕ್ಷ ಕೋಟಿ ಮೊತ್ತದಷ್ಟು ಬೃಹತ್ ಅಲ್ಲ ಎಂಬುದು ಕೂಡ ಗಮನಿಸಬೇಕಾದ ಸಂಗತಿ. ಬಡವರು ಮತ್ತು ಕಾರ್ಮಿಕ ವರ್ಗದ ಜೊತೆಗೆ ಅವರಿಗೆ ಭವಿಷ್ಯದಲ್ಲಿ ಉದ್ಯೋಗ ಕೊಡುವ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮ ಚಟುವಟಿಕೆಗಳ ಬಗ್ಗೆಯೂ ಸರ್ಕಾರ ಈ ಸಂದರ್ಭದಲ್ಲಿ ಯೋಚಿಸಬೇಕಿತ್ತು” ಎಂದಿದ್ದಾರೆ.
ಜೆಎನ್ ಯು ವಿವಿ ಪ್ರಾಧ್ಯಾಪಕ ಮತ್ತು ಅಭಿವೃದ್ಧಿ ಅರ್ಥಶಾಸ್ತ್ರಜ್ಞ ಜಯತಿ ಘೋಷ್ ಕೂಡ, “ಈ ಲಾಕ್ ಡೌನ್ ದೇಶದ ಇಡೀ ಆರ್ಥಿಕ ವ್ಯವಸ್ಥೆಗೆ ಕೊಟ್ಟಿರುವ ಪೆಟ್ಟಿನ ಅಗಾಧತೆಯ ಬಗ್ಗೆ ಕೇಂದ್ರ ಸರ್ಕಾರಕ್ಕೆ ಸರಿಯಾದ ಗ್ರಹಿಕೆಯೇ ಸಿಕ್ಕಿಲ್ಲ. ಮಹಿಳಾ ಜನ್ ಧನ್ ಖಾತೆಗೆ ಕೇವಲ 500 ರೂ. ವರ್ಗಾವಣೆ ಮಾಡುವಂತಹ ಕನಿಷ್ಠ ಕೊಡುಗೆಗಳು ಬರಿಗೈ ಆಗಿರುವ ಜನರ ಬದುಕಿನಲ್ಲಿ ಯಾವ ನೆಮ್ಮದಿಯನ್ನೂ ತರಲಾರವು ಎಂಬುದು ಕಟುವಾಸ್ತವ. ಅದರ ಬದಲಾಗಿ ಸರ್ಕಾರ, ಆ ಖಾತೆಗಳಿಗೆ ಕನಿಷ್ಠ ಕೂಲಿಯ ಮೊತ್ತದಷ್ಟಾದರೂ ಹಣವನ್ನು ವರ್ಗಾವಣೆ ಮಾಡಬೇಕಿತ್ತು” ಎಂದಿದ್ದಾರೆ.
ಆದರೆ, ಇಂತಹ ಪರಿಸ್ಥಿತಿಯಲ್ಲಿ ಕೂಡ ಕೇಂದ್ರ ಸರ್ಕಾರ ತತಕ್ಷಣಕ್ಕೆ ಜನರ ನೆರವಿಗೆ ಬರಲು ವಹಿಸಿದ ವಿಳಂಬ ಧೋರಣೆ ಮತ್ತು ಅಂತಿಮವಾಗಿ ಘೋಷಣೆ ಮಾಡಿದರೂ ಒಟ್ಟಾರೆ ಬಿಕ್ಕಟ್ಟಿನ ಎದುರಿನ ತೀರಾ ಬಕಾಸುರ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಷ್ಟು ಮೊತ್ತದ ಪ್ಯಾಕೇಜ್ ನೀಡಿರುವುದು ದೇಶದ ಖಜಾನೆ ಖಾಲಿಯಾಗಿದೆ ಎಂಬ ಸಂದೇಶ ರವಾನಿಸಿದೆ. ಆ ಹಿನ್ನೆಲೆಯಲ್ಲಿಯೇ ಈ 1.70 ಲಕ್ಷ ಕೋಟಿ ಪ್ಯಾಕೇಜಿನಲ್ಲಿ ಸಾಕಷ್ಟು ದೊಡ್ಡ ಮೊತ್ತವನ್ನು ಖನಿಜ ನಿಧಿ, ಕಾರ್ಮಿಕ ನಿಧಿ ಮತ್ತಿತರ ಮೂಲಗಳಿಂದ ಹಣ ಹೊಂದಾಣಿಕೆಗೆ ಯೋಚಿಸಿದೆ ಮತ್ತು ಈಗಾಗಲೇ ಚಾಲ್ತಿಯಲ್ಲಿರುವ ಹಲವು ಯೋಜನೆಗಳಿಂದಲೂ ಹಣ ಹೊಂದಾಣಿಕೆ ಮಾಡಲಾಗಿದೆ. ಹಾಗಾಗಿಯೇ ಕರೋನಾ ಹಿನ್ನೆಲೆಯಲ್ಲಿ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಅಮೆರಿಕ, ಫ್ರಾನ್ಸ್, ಇಟಲಿ, ಜರ್ಮನಿ, ಸ್ಪೇನ್, ಚೀನಾ ಮಾದರಿಯಲ್ಲಿ ಏಕಕಾಲಕ್ಕೆ ಸೋಂಕು ತಡೆಗೂ ಮತ್ತು ಆರ್ಥಿಕ ಕುಸಿತ ತಡೆಗೂ ಯೋಜನೆ ರೂಪಿಸಿ, ತ್ವರಿತ ಗತಿಯಲ್ಲಿ ಕಾರ್ಯರೂಪಕ್ಕೆ ತರುವಲ್ಲಿ ಸರ್ಕಾರ ಎಡವಿದೆ ಎಂಬ ಮಾತುಗಳು ಕೇಳಿಬಂದಿವೆ.
ಆರಂಭದಲ್ಲೇ ಬೊಕ್ಕಸ ಬರಿದಾದರೆ, ಭವಿಷ್ಯದಲ್ಲಿ ಸೋಂಕು ಇನ್ನಷ್ಟು ವಿಸ್ತರಣೆಯಾಗಿ ತಿಂಗಳುಗಟ್ಟಲೆ ದೇಶದ ಉದ್ಯಮ ಮತ್ತು ವ್ಯವಹಾರ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡರೆ ಉಂಟಾಗಬಹುದಾದ ಆರ್ಥಿಕ ಪತನವನ್ನು ತಡೆಯಲು ಈ ಸರ್ಕಾರ ಶಕ್ತವಾಗಿದೆಯೇ ಎಂಬ ಆತಂಕ ಕೂಡ ಈಗ ಎದುರಾಗಿದೆ!