ಕರೋನಾ ವೈರಾಣು ರೋಗ ತಡೆಯ ನಿರ್ಣಾಯಕ ಯತ್ನವಾಗಿ ಘೋಷಿಸಿರುವ 21 ದಿನಗಳ ಲಾಕ್ ಡೌನ್ ಇದೀಗ ಏಳನೇ ದಿನಕ್ಕೆ ಕಾಲಿಟ್ಟಿದೆ. ಮಾರಕ ಸಾಂಕ್ರಾಮಿಕ ಮಹಾಮಾರಿಯ ತಡೆಯುವ ಸರ್ಕಾರದ ದಿಢೀರ್ ಕ್ರಮದಿಂದಾಗಿ ಇಡೀ ವಿಶ್ವದಲ್ಲೇ ಅತ್ಯಂತ ಭೀಕರ ಮತ್ತು ಭಯಂಕರ ಲಾಕ್ ಡೌನ್ ಭಾರತದ್ದು ಎಂಬ ಕುಖ್ಯಾತಿಗೆ ಪಾತ್ರವಾಗಿದೆ.
ನಗರ ವ್ಯಾಪಾರ ವಹಿವಾಟು ಚಟುವಟಿಕೆ ಬಂದ್ ಆಗುತ್ತಿದ್ದಂತೆ ದಿಕ್ಕುತೋಚದಂತಾದ ಗ್ರಾಮೀಣ ವಲಸಿಗರು, ಅನ್ನ ಮತ್ತು ಆಶ್ರಯಕ್ಕಾಗಿ ಹಳ್ಳಿಯತ್ತ ವಾಪಸು ಹೊರಟಾಗ ಅವರಿಗೆ ಕನಿಷ್ಠ ಸಂಚಾರ ಮತ್ತು ಆಹಾರ ವ್ಯವಸ್ಥೆ ಕಲ್ಪಿಸುವ ಕಾಳಜಿ ತೋರದ ಸರ್ಕಾರಗಳ ಮತಿಗೇಡಿತನದಿಂದಾಗಿ ಜಗತ್ತಿನ ಇತಿಹಾಸದಲ್ಲೇ ಅತ್ಯಂತ ಅಮಾನವೀಯ ವಲಸೆಗಳಲ್ಲಿ ಒಂದಾಗಿ ಈ ದಾರುಣ ಪ್ರಯಾಣ ದಾಖಲಾಗಿಹೋಗಿದೆ.
ಜಗತ್ತಿನ ಅತಿ ಜನದಟ್ಟಣೆಯ, ಕೂಲಿಕಾರ್ಮಿಕರು, ಬಡವರೇ ಬಹುಸಂಖ್ಯಾತರಾಗಿರುವ ದುಡಿಯುವ ವರ್ಗ ಹೊಂದಿರುವ, ಅನಕ್ಷರತೆ ಮತ್ತು ಅಸ್ಥಿರತೆಯ ಅಸಂಘಟಿತ ಕಾರ್ಮಿಕರನ್ನು ಹೊಂದಿರುವ ದೇಶದ ಆರ್ಥಿಕತೆಯ ಬೆನ್ನುಲುಬು ಮತ್ತು ಅದಕ್ಕೆ ಬೀಳುವ ಪೆಟ್ಟಿನ ಪರಿಣಾಮದ ಲವಲೇಶದ ಅರಿವೂ ಇಲ್ಲದ ನಾಯಕನೊಬ್ಬ ದೇಶದ ಚುಕ್ಕಾಣಿ ಹಿಡಿದರೆ ಮತ್ತು ಅಂತಹ ನಾಯಕನ ಆಡಳಿತದಲ್ಲಿ ಕರೋನಾದಂತಹ ಭೀಕರ ಮಹಾಮಾರಿ ಅಪ್ಪಳಿಸಿದೆ ಏನಾಗಬಹುದು ಎಂಬುದಕ್ಕೆ ಭಾರತದ ಕಳೆದ ಏಳು ದಿನಗಳ ಲಾಕ್ ಡೌನ್ ಒಂದು ಪಾಠವಾಗಿ ಚರಿತ್ರೆಗೆ ಸೇರಿದೆ.
ಈ ನಡುವೆ, ಇಷ್ಟೆಲ್ಲಾ ಬಡವರ ಬದುಕಿನ ಬಲಿ ತೆಗೆದುಕೊಂಡ ಮತ್ತು ಜನಸಾಮಾನ್ಯರು ಬೆಲೆ ತೆತ್ತ ಈ ಲಾಕ್ ಡೌನ್ ನಿಜಕ್ಕೂ ಪ್ರಯೋಜನಕಾರಿಯಾಗಿದೆಯೇ ಎಂಬ ಪ್ರಶ್ನೆಗಳೂ ಎದ್ದಿವೆ. ಕಳೆದ ಏಳು ದಿನಗಳ ಸೋಂಕಿತರ ಪ್ರಮಾಣ ಮತ್ತು ಸಾವಿನ ಪ್ರಮಾಣದ ಅಧಿಕೃತ ಅಂಕಿ-ಅಂಶಗಳನ್ನು ಗಮನಿಸಿದರೆ ಈ ಲಾಕ್ ಡೌನ್ ಫಲಕೊಡುತ್ತಿರುವಂತೆ ಕಾಣುತ್ತಿದೆ. ನಾಲ್ಕು ದಿನಗಳ ಹಿಂದೆ ಇದ್ದ ದೈನಿಕ ಸೋಂಕಿತರ ಪ್ರಮಾಣಕ್ಕೆ ಹೋಲಿಸಿದರೆ ಕಳೆದ ಎರಡು ದಿನಗಳಿಂದ ಸಾಕಷ್ಟು ಇಳಿಕೆ ಕಂಡುಬಂದಿದೆ. ಸಾವಿನ ಸಂಖ್ಯೆ ಕೂಡ ಈ ಮೊದಲು ಹಲವು ತಜ್ಞರು ಊಹಿಸಿದಂತೆ ಭಾರೀ ಏರಿಕೆ ಕಂಡಿಲ್ಲ ಎಂಬುದು ಗಮನಾರ್ಹ.
ಹಾಗೆ ನೋಡಿದರೆ, ಕಳೆದ ವಾರ ಹಲವು ಜಾಗತಿಕ ಮಟ್ಟದ ತಜ್ಞರು, ಭಾರತದಲ್ಲಿ ಈಗಾಗಲೇ ಕರೋನಾ ಸೋಂಕು ಸಮುದಾಯದ ಮಟ್ಟಕ್ಕೆ ಹೋಗಿದೆ. ಆದರೆ, ವ್ಯಾಪಕ ಪರೀಕ್ಷೆಗಳನ್ನು ನಡೆಸದೇ ಇರುವುದರಿಂದ ವಾಸ್ತವವಾಗಿ ಸೋಂಕಿತರ ಪತ್ತೆ ಮಾಡಲಾಗುತ್ತಿಲ್ಲ. ಆದರೆ, ಮಾರ್ಚ್ 27ರ ಬಳಿಕ ಸೋಂಕಿತರು ಮತ್ತು ಸಾವುಗಳ ಸಂಖ್ಯೆ ದಿಢೀರ್ ಸ್ಫೋಟಗೊಳ್ಳಲಿದೆ. ಆಗ ದೇಶದ ಸೋಂಕು ನಿರ್ವಹಣೆಯ ಲೋಪಗಳು ಬಹಿರಂಗವಾಗಲಿವೆ ಎಂದು ಭವಿಷ್ಯ ನುಡಿದಿದ್ದರು. ಆದರೆ, ಇದೀಗ ಅಂತಹ ಯಾವ ಯಾವುದೇ ದಿಢೀರ್ ಏರಿಕೆ ವರದಿಯಾಗಿಲ್ಲ ಮತ್ತು ಅದಕ್ಕೆ ಬದಲಾಗಿ ಸೋಂಕಿತರ ಪ್ರಮಾಣ ಇಳಿಕೆಯಾಗಿದೆ ಎಂದು ಸರ್ಕಾರ ಮತ್ತು ಜಾಗತಿಕ ಸಮೀಕ್ಷೆಯ ಅಂಕಿಅಂಶಗಳು ಹೇಳುತ್ತಿವೆ.
ಆ ಹಿನ್ನೆಲೆಯಲ್ಲಿ ಲಾಕ್ ಡೌನ್ ಅವಧಿ ವಿಸ್ತರಣೆಯ ಬಗ್ಗೆ ಚರ್ಚೆಗಳು ಗರಿಗೆದರಿದ್ದು, ಕೆಲವು ಟಿವಿ ವಾಹಿನಿಗಳಲ್ಲಿ 21 ದಿನಗಳ ಬಳಿಕ ಮತ್ತೆ 15 ದಿನ ಲಾಕ್ ಡೌನ್ ಹೇರಲು ಸರ್ಕಾರ ಸಜ್ಜಾಗಿದೆ ಎಂಬ ವರದಿಗಳೂ ಹರಿದಾಡಿದ್ದವು. ಆದರೆ, ಈ ನಡುವೆ ಆ ಬಗ್ಗೆ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ, 21 ದಿನಗಳ ಬಳಿಕ ಮತ್ತೆ ಲಾಕ್ ಡೌನ್ ಹೇರುವ ಬಗ್ಗೆ ಸರ್ಕಾರ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಸದ್ಯ ಸೋಂಕು ನಿಯಂತ್ರಣದ ದಿಸೆಯಲ್ಲಿ ಲಾಕ್ ಡೌನ್ ನಿರೀಕ್ಷಿತ ಫಲ ನೀಡುತ್ತಿದೆ. ಸಾಮಾಜಿಕ ಅಂತರ ಕಾಯುವ ದಿಕ್ಕಿನಲ್ಲಿ ನಾವು ಸಾಕಷ್ಟು ಯಶಸ್ವಿಯಾಗಿದ್ದೇವೆ. ಸೋಂಕಿತರ ಸಂಖ್ಯೆ 100ರಿಂದ 1000ಕ್ಕೆ ತಲುಪಲು ಬರೋಬ್ಬರಿ 12 ದಿನ ತೆಗೆದುಕೊಂಡಿದೆ. ಆದರೆ, ಹಲವು ಯುರೋಪಿಯನ್ ರಾಷ್ಟ್ರಗಳಲ್ಲಿ ಪರಿಸ್ಥಿತಿ ಭಿನ್ನವಿತ್ತು. ಹಾಗಾಗಿ ದೇಶದಲ್ಲಿ ಕರೋನಾ ಈಗಾಗಲೇ ಸಮುದಾಯದ ಮಟ್ಟದಲ್ಲಿ ಪ್ರಸರಣವಾಗುತ್ತಿದೆ. ಮೂರನೇ ಹಂತಕ್ಕೆ ತಲುಪಿಬಿಟ್ಟಿದೆ ಎಂಬ ಹೇಳಿಕೆಗಳು ನಿಜವಲ್ಲ. ಸರ್ಕಾರದ ಅಧಿಕೃತ ಮಾಹಿತಿಯ ಪ್ರಕಾರ ಸೋಂಕು ದೇಶದಲ್ಲಿ ಈಗಲೂ ಎರಡನೇ ಹಂತದಲ್ಲೇ ಇದ್ದು, ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಮಟ್ಟದಲ್ಲೇ ಅದನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಕೇಂದ್ರ ಆರೋಗ್ಯ ಖಾತೆ ಜಂಟಿ ಕಾರ್ಯದರ್ಶಿ ಲವ್ ಅಗ್ರವಾಲ್ ಹೇಳಿದ್ದಾರೆ.
ಜೊತೆಗೆ, ಏಪ್ರಿಲ್ 14ರ ಬಳಿಕ ಲಾಕ್ ಡೌನ್ ಅವಧಿ ಮುಗಿಯುತ್ತಲೇ ಪರಿಸ್ಥಿತಿಯನ್ನು ಅವಲೋಕಿಸಿ, ದೇಶದಲ್ಲಿ ಎಲ್ಲೆಲ್ಲಿ ಅತಿ ಹೆಚ್ಚು ಸೋಂಕು ಪ್ರಕರಣಗಳು ದಾಖಲಾಗಿವೆ ಎಂಬ ಆಧಾರದ ಮೇಲೆ ರೋಗ ತೀವ್ರತೆಯ ಸ್ಥಳಗಳನ್ನು ಗುರುತಿಸಿ ಆ ಪ್ರದೇಶಕ್ಕೆ ಸೀಮಿತವಾಗಿ ಲಾಕ್ ಡೌನ್ ಮುಂದುವರಿಸುವ ಅಥವಾ ಇನ್ನಷ್ಟು ತೀವ್ರ ಕ್ರಮಗಳನ್ನು ಜಾರಿಗೊಳಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಉಳಿದಂತೆ ಸೋಂಕಿನ ಪ್ರಮಾಣ ಇಳಿಕೆಯಾಗಿರುವ ಕಡೆ ಸಹಜ ಜನಜೀವನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಸರ್ಕಾರದ ಮೂಲಗಳು ಹೇಳಿರುವುದಾಗಿಯೂ ವರದಿಯಾಗಿದೆ.
ಈ ನಡುವೆ, ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳಲ್ಲಿ ಸೋಂಕು ನಿಯಂತ್ರಣದ ನಿಟ್ಟಿನಲ್ಲಿ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಬಂದ್ ಕೂಡ ಜಾರಿಗೊಳಿಸಲಾಗಿದ್ದು, ವಸತಿರಹಿತ ವಲಸೆ ಕಾರ್ಮಿಕರಿಗೆ ಅವರುಗಳು ಇರುವ ಊರುಗಳಲ್ಲೇ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲು ಕಲ್ಯಾಣಮಂಟಪ, ಸಮುದಾಯಭವನಗಳನ್ನು ಬಳಸಿಕೊಳ್ಳಲಾಗಿದೆ. ಹಾಗಾಗಿ ಯಾವುದೇ ವಸತಿರಹಿತರು ತಾವಿರುವ ಪಟ್ಟಣ-ನಗರಗಳನ್ನು ತೊರೆದು ಹಳ್ಳಿಗಳಿಗೆ ಹೋಗಬಾರದು ಎಂದು ಹೇಳಿವೆ. ಆದರೆ, ಈ ವ್ಯವಸ್ಥೆ ಜಾರಿಗೆ ಬರುವ ಮುನ್ನವೇ ಕಳೆದ ನಾಲ್ಕೈದು ದಿನಗಳಲ್ಲಿ ಲಕ್ಷಾಂತರ ಮಂದಿ ಹಳ್ಳಿಗಳ ಹಾದಿ ಹಿಡಿದಿದ್ದಾರೆ ಮತ್ತು ಬಹುತೇಕ ಮಂದಿ ಬರಿಗಾಲಿನಲ್ಲೇ ದಾರಿ ಸವೆಸಿ ತಮ್ಮ ತಮ್ಮ ಮೂಲ ನೆಲೆಗಳನ್ನು ಸೇರಿದ್ದಾರೆ! ಆ ಯಾತನೆಯ ಹಾದಿಯಲ್ಲಿ ಸಾವು-ನೋವುಗಳೂ ಇತಿಹಾಸದ ಪುಟ ಸೇರಿವೆ!
ಈ ನಡುವೆ, ತರಕಾರಿ, ಹಾಲು, ಔಷಧಿ ಮುಂತಾದ ಅತ್ಯವಶ್ಯ ವಸ್ತುಗಳ ಖರೀದಿಗಾಗಿ ಜನರು ರಸ್ತೆಗಿಳಿಯುವುದನ್ನು ತಡೆಯುವ ಕ್ರಮವಾಗಿ ಜನರ ಮನೆ ಬಾಗಿಲಿಗೇ ಅಗತ್ಯ ವಸ್ತುಗಳ ಸರಬರಾಜಿಗೆ ಕೆಲವು ಜಿಲ್ಲೆಗಳಲ್ಲಿ ಕ್ರಮವಹಿಸಲಾಗಿದೆ. ಆದರೆ, ಇನ್ನೂ ಕೆಲವೆಡೆ ಅಂತಹ ಯಾವುದೇ ವ್ಯವಸ್ಥೆಯೂ ಇಲ್ಲದೆ, ಅತ್ತ ಅಂತಹ ಅನಿವಾರ್ಯ ಖರೀದಿಗಾಗಿ ಹೋಗುವವರ ಮೇಲೆ ಪೊಲೀಸರು ಲಾಠಿ ಬೀಸುವುದು ತಪ್ಪದೇ ಜನ ಗೊಂದಲ ಮತ್ತು ಆತಂಕದಲ್ಲಿದ್ದಾರೆ. ಮುಖ್ಯವಾಗಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ವಿಷಯದಲ್ಲಿ ಸ್ಪಷ್ಟ ನಿರ್ದೇಶನಗಳನ್ನು ನೀಡಬೇಕಾಗಿದೆ. ಇಲ್ಲದೇ ಹೋದರೆ, ಪೊಲೀಸರ ಲಾಠಿಗಳ ಅಟ್ಟಹಾಸ ಮುಂದುವರಿಯಲಿದೆ ಮತ್ತು ಕ್ರಮೇಣ ಜನರು ತಾಳ್ಮೆ ಕಳೆದುಕೊಂಡು ಪರಸ್ಪರ ಸಂಘರ್ಷದ ವಾತಾವರಣ ಸೃಷ್ಟಿಯಾದರೂ ಅಚ್ಚರಿಯಿಲ್ಲ. ಈಗಾಗಲೇ ಕೆಲವು ಕಡೆ ಅಂತಹ ಸಂಘರ್ಷಗಳು ವರದಿಯಾಗಿವೆ. ಅಂತಹ ಸಂಘರ್ಷಗಳು ವಾಡಿಕೆಯಾಗುವ ಮುನ್ನ ಜಿಲ್ಲಾಮಟ್ಟದ ಅಧಿಕಾರಿಗಳು ಸ್ಪಷ್ಟ ತೀರ್ಮಾನಗಳನ್ನು ಕೈಗೊಳ್ಳಬೇಕಿದೆ ಮತ್ತು ಕೈಗೊಂಡ ತೀರ್ಮಾನಗಳನ್ನು ತಳಮಟ್ಟದ ಸಿಬ್ಬಂದಿಗೆ ಸರಿಯಾಗಿ ಮನವರಿಕೆ ಮಾಡಿಕೊಡಬೇಕಿದೆ.
ಈ ನಡುವೆ, ಲಾಕ್ ಡೌನ್ ನಿಂದಾಗಿ ಬದುಕು ಕಳೆದುಕೊಂಡಿರುವ ಕಡುಬಡವರು ಮತ್ತು ವಲಸಿಗರಿಗೆ ಯಾವ ರೀತಿ ಪುನರ್ವಸತಿ ವ್ಯವಸ್ಥೆ ಮಾಡಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ನೊಟೀಸ್ ನೀಡಿದೆ. ಜೊತೆಗೆ, ವಿಶ್ವಸಂಸ್ಥೆ ಕೂಡ ಭಾರತವೂ ಸೇರಿದಂತೆ ಜಗತ್ತಿನ ಎಲ್ಲಾ ರಾಷ್ಟ್ರಗಳು ಕರೋನಾ ಸೋಂಕಿತರ ಕುರಿತ ಮಾಹಿತಿಯನ್ನು ತನಗೆ ನಿತ್ಯ ವರದಿ ಮಾಡಬೇಕು ಎಂದು ಸೂಚಿಸಿದೆ.
ವಿಶ್ವಸಂಸ್ಥೆಯ ಇಂತಹ ನಿರ್ದೇಶನದ ನಡುವೆ, ಜಾಗತಿಕಮಟ್ಟದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 7.45 ಲಕ್ಷಕ್ಕೆ ಏರಿದ್ದು, ಸಾವಿನ ಸಂಖ್ಯೆ ಬರೋಬ್ಬರಿ 35 ಸಾವಿರದ ಗಡಿ ದಾಟಿದೆ. ಸುಮಾರು 1.45 ಲಕ್ಷ ಸೋಂಕಿತರನ್ನು ಹೊಂದಿರುವ ಅಮೆರಿಕ ಅತ್ಯಂತ ವೇಗದಲ್ಲಿ ಸೋಂಕು ಹರಡುತ್ತಿರುವ ದೇಶವಾಗಿ ಹೊರಹೊಮ್ಮಿದ್ದು, ಇಟಲಿ ಅತಿ ಹೆಚ್ಚು ಸಾವಿಗೆ ಸಾಕ್ಷಿಯಾಗುವ ಮೂಲಕ ಜಗತ್ತಿನ ಸಾವಿನ ಮನೆಯಾಗಿ ಬದಲಾಗಿದೆ!