ಕರೋನಾ ವೈರಾಣು ಸೋಂಕಿನ ವಿರುದ್ಧ ಹೋರಾಡುತ್ತಿರುವ ವೈದ್ಯರು ಮತ್ತು ಇತರೆ ವೈದ್ಯಕೀಯ ಸಿಬ್ಬಂದಿಯ ಜೀವರಕ್ಷಣೆಯ ನಿಟ್ಟಿನಲ್ಲಿ ಸರ್ಕಾರ ನಿರೀಕ್ಷಿತ ಮಟ್ಟದಲ್ಲಿ ಸ್ಪಂದಿಸುತ್ತಿಲ್ಲ; ಹಾಗಾಗಿ ವೈಯಕ್ತಿಕ ಸುರಕ್ಷತಾ ಸಾಧನ(ಪಿಪಿಇ)ಗಳ ಕೊರತೆಯಿಂದಾಗಿ ದೇಶದ ಉದ್ದಗಲಕ್ಕೆ ನೂರಾರು ವೈದ್ಯಕೀಯ ಸಿಬ್ಬಂದಿ ಸ್ವತಃ ಸೋಂಕಿಗೆ ಒಳಗಾಗಿದ್ದಾರೆ, ಮತ್ತು ಈಗಾಗಲೇ ಹಲವು ಜೀವ ಕಳೆದುಕೊಂಡಿದ್ದಾರೆ ಎಂಬ ವರದಿಗಳು ಇವೆ.
ದೆಹಲಿಯೊಂದರಲ್ಲೇ ಸುಮಾರು 50 ಮಂದಿ ವೈದ್ಯರು ಸೋಂಕಿತರಾಗಿದ್ದಾರೆ. ಪಿಪಿಇಗಳ ಸರಬರಾಜಿಲ್ಲದೆ, ಕನಿಷ್ಠ ಗುಣಮಟ್ಟದ ಮಾಸ್ಕುಗಳು ಲಭ್ಯವಿಲ್ಲದೆ ಹಲವು ವೈದ್ಯರು ಮತ್ತು ದಾದಿಯರು ರಾಜೀನಾಮೆ ನೀಡತೊಡಗಿದ್ದಾರೆ. ಪಿಪಿಇಗಳನ್ನು ಸರ್ಕಾರ ಒದಗಿಸಿಲ್ಲ; ವೈರಾಣುವಿನಿಂದ ತಮಗೆ ರಕ್ಷಣೆ ಇಲ್ಲ ಎಂಬ ಕಾರಣದಿಂದ ವೈದ್ಯರು ಕರ್ತವ್ಯಕ್ಕೆ ಹಾಜರಾಗದೇ ದೂರ ಉಳಿದಿರುವುದರಿಂದ ದೆಹಲಿಯ ಸುಮಾರು 250ಕ್ಕೂ ಹೆಚ್ಚು ಮೊಹಲ್ಲಾ ಕ್ಲಿನಿಕ್ ಗಳ ಬಾಗಿಲು ಹಾಕಲಾಗಿದೆ. ಉತ್ತರಪ್ರದೇಶದಲ್ಲಿ ಸುರಕ್ಷಾ ಸಾಧನಗಳಿಗೆ ಬೇಡಿಕೆ ಇಟ್ಟು ಕಾದು ಸುಸ್ತಾದ ಸುಮಾರು 4500 ಮಂದಿ ಸರ್ಕಾರಿ ಆಂಬ್ಯುಲೆನ್ಸ್ ಚಾಲಕರು ಕರ್ತವ್ಯಕ್ಕೆ ಹಾಜರಾಗದೆ ಪ್ರತಿಭಟನೆ ನಡೆಸಿದ್ದಾರೆ. ಸೋಂಕಿನ ಭಯದಲ್ಲಿ ಹರ್ಯಾಣ ಮತ್ತು ಪಶ್ಚಿಮಬಂಗಾಳದ ಹಲವು ವೈದ್ಯರು ಮತ್ತು ಇತರೆ ವೈದ್ಯಕೀಯ ಸಿಬ್ಬಂದಿ ಹಾಗೂ ಅರೆ ವೈದ್ಯಕೀಯ ಸಿಬ್ಬಂದಿ ಕೆಲಸಕ್ಕೇ ರಾಜೀನಾಮೆ ನೀಡುವ ಮಾತನಾಡಿದ್ದಾರೆ.
ಈ ನಡುವೆ, ವೈದ್ಯಕೀಯ ಸಿಬ್ಬಂದಿಯ ಜೀವರಕ್ಷಕ ಪಿಪಿಇ ಖರೀದಿಗೆ ಮೀಸಲಿರಿಸಿದ್ದ ಬರೋಬ್ಬರಿ 50 ಲಕ್ಷ ರೂ. ಅನುದಾನವನ್ನು ವೈದ್ಯರ ವಿರೋಧದ ನಡುವೆಯೂ ಆಡಳಿತ ಮಂಡಳಿ ಪ್ರಧಾನಮಂತ್ರಿಗಳ ನೂತನ ಪಿಎಂ-ಕೇರ್ಸ್ ಪರಿಹಾರ ನಿಧಿಗೆ ವರ್ಗಾವಣೆ ಮಾಡಿರುವ ಗಂಭೀರ ಪ್ರಕರಣ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ಆಸ್ಪತ್ರೆಯ ವೈದ್ಯರಾದ ತಮಗೆ ಕರೋನಾ ಸೋಂಕಿತರ ಚಿಕಿತ್ಸೆಗೆ ತೀರಾ ಅಗತ್ಯವಾಗಿ ಬೇಕಾಗಿರುವ ಪಿಪಿಇಗಳ ಕೊರತೆ ಇದೆ. ಆ ಕಾರಣಕ್ಕೆ ಹಲವು ವೈದ್ಯರು ಕರ್ತವ್ಯಕ್ಕೆ ಹಾಜರಾಗಲು ಹಿಂಜರಿಯುತ್ತಿದ್ದಾರೆ. ಈಗಾಗಲೇ ಕೆಲವರಿಗೆ ಸೋಂಕು ದೃಢಪಟ್ಟಿದೆ. ಇಂತಹ ಹೊತ್ತಲ್ಲಿ; ವೈದ್ಯರ ಜೀವರಕ್ಷಣೆಗೆ ನೆರವಾಗಬೇಕಿದ್ದ ಹಣವನ್ನು ಆಸ್ಪತ್ರೆಯ ಆಡಳಿತ ಆಡಳಿತರೂಢರ ಮೆಚ್ಚುಗೆ ಗಳಿಸಲು ಪಿಎಂ ಕೇರ್ಸ್ ನಿಧಿಗೆ ವರ್ಗಾಯಿಸಿದ್ದಾರೆ ಎಂದು ಏಮ್ಸ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ ಆರೋಪಿಸಿದೆ. ಆದರೆ, ವೈದ್ಯರ ಆರೋಪವನ್ನು ಅಲ್ಲಗಳೆದಿರುವ ಏಮ್ಸ್ ಆಡಳಿತ, ಮೊದಲನೆಯದಾಗಿ ಅಂತಹ ಯಾವುದೇ ಅನುದಾನ ಬಂದೇ ಇರಲಿಲ್ಲ ಎಂದಿದೆ.
ವೈದ್ಯರ ಸಂಘಟನೆ ಮತ್ತು ಆಡಳಿತ ಮಂಡಳಿ ನಡುವಿನ ಈ ಆರೋಪ- ನಿರಾಕರಣೆಗಳ ಸತ್ಯಾಸತ್ಯತೆ ಇನ್ನಷ್ಟೇ ಗೊತ್ತಾಗಬೇಕಿದೆ. ಆದರೆ, ಈ ಆರೋಪಗಳು ಏಕಕಾಲಕ್ಕೆ ಕರೋನಾ ವಿಷಯದಲ್ಲಿ ಮುಂಚೂಣಿ ಯೋಧರಂತೆ ಜೀವಪಣಕ್ಕಿಟ್ಟು ಹೋರಾಡುತ್ತಿರುವ ವೈದ್ಯರಿಗೆ ಜೀವರಕ್ಷಕ ಪಿಪಿಇ ಕಿಟ್ ನೀಡುವಲ್ಲಿ ಕಾಳಜಿ ತೋರಬೇಕಿದ್ದ ಸರ್ಕಾರ, ಕೇವಲ ದೀಪ, ಮೊಂಬತ್ತಿ, ಮೊಬೈಲ್ ಟಾರ್ಚ್ ಬೆಳಗಿಸುವ ಬಗ್ಗೆ ಮಾತ್ರ ದೇಶದ ಜನತೆಗೆ ಕರೆ ನೀಡುತ್ತಿದೆ. ಒಗ್ಗಟ್ಟಿನ ಪ್ರದರ್ಶನದ ಮಾತನಾಡುತ್ತಿದೆ. ಆದರೆ, ಈ ಸಂಕಷ್ಟದ ಹೊತ್ತಿನಲ್ಲಿ ತಾನು ಮಾಡಲೇಬೇಕಿದ್ದ ಕರ್ತವ್ಯವನ್ನು ಮಾಡಿ, ಜನತೆಗೆ ಅಂತಹ ಕರೆ ನೀಡಿದ್ದರೆ ಅದಕ್ಕೊಂದು ಮರ್ಯಾದೆ ಇರುತ್ತಿತ್ತು. ಚಪ್ಪಾಳೆ ತಟ್ಟಿಸುವ, ದೀಪ ಹಚ್ಚಿಸುವ, ಟಾರ್ಚು ಹೊತ್ತಿಸುವ ವಿಷಯಗಳನ್ನು ಇಟಲಿ, ಸ್ಪೇನ್, ಜರ್ಮನಿಯಂತಹ ರಾಷ್ಟ್ರಗಳಿಂದ ಕಾಪಿ ಮಾಡುವ ಮೋದಿ ಸರ್ಕಾರ, ವೈದ್ಯರು ಮತ್ತು ಕರೋನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿ ಇರುವ ಅರೆ ವೈದ್ಯಕೀಯ ಸಿಬ್ಬಂದಿ, ಸ್ವಚ್ಛತಾ ಸಿಬ್ಬಂದಿ, ಪೌರ ಕಾರ್ಮಿಕರು, ಪೊಲೀಸರು ಮುಂತಾದವರಿಗೆ ಮಾಸ್ಕ್, ಗ್ಲೌಸ್, ಗೌನ್ ಮುಂತಾದ ಕನಿಷ್ಠ ಸುರಕ್ಷತಾ ಸಾಧನಗಳನ್ನು ನೀಡುವ ವಿಷಯದಲ್ಲಿ ಅವರಿಂದ ಏನನ್ನೂ ಕಾಪಿ ಮಾಡಿದಂತೆ ತೋರುತ್ತಿಲ್ಲ ಎಂಬ ಆಕ್ರೋಶ ಜನಸಾಮಾನ್ಯರ ನಡುವೆ ಮಡುಗಟ್ಟಿದೆ.
ಮೊಂಬತ್ತಿ ಬೆಳಗಿಸಲು ಪ್ರಧಾನಿ ಮೋದಿ ಕರೆ ನೀಡಿದಾಗಲೂ, ಬಹುತೇಕ ಅವರ ಅಂತಹ ಕರೆಗಳನ್ನು ಮನಸಾರೆ ಒಪ್ಪಿ ಸಂಭ್ರಮಿಸುವ ಮಂದಿ ಕೂಡ ಶುಕ್ರವಾರ, ಇದೇನಿದು, ಸುರಕ್ಷಾ ಸಾಧನಗಳಿಲ್ಲದೆ, ವೈದ್ಯರು, ವೈದ್ಯಕೀಯ ಸಿಬ್ಬಂದಿ ಸೋಂಕಿಗೆ ಒಳಗಾಗಿ ಸಾಯುತ್ತಿದ್ದಾರೆ. ಸೂಕ್ತ ಸುರಕ್ಷತೆ ಇಲ್ಲದೆ, ವೈದ್ಯರು ಬೈಕ್ ಹೆಲ್ಮೆಟ್ ಹಾಕಿಕೊಂಡು, ರೈನ್ ಕೋಟ್ ಹಾಕಿಕೊಂಡು ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಆಘಾತಕಾರಿ ವರದಿಗಳಿವೆ. ದೇಶದ ಉದ್ದಗಲಕ್ಕೆ ನಿತ್ಯ ಲಕ್ಷಾಂತರ ಸಂಖ್ಯೆಯಲ್ಲಿ ಕರೋನಾ ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಂಡಿರುವ ವೈದ್ಯಕೀಯ ಸಿಬ್ಬಂದಿಗೆ ಲಕ್ಷಾಂತರ ಸಂಖ್ಯೆಯ ಪಿಪಿಇ ಕಿಟ್ ಗಳು ಬೇಕಿವೆ. ಆದರೆ, ಲಭ್ಯವಿರುವುದು ಕೆಲವು ಸಾವಿರದಷ್ಟು ಮಾತ್ರ. ಬಹುತೇಕ ಎಲ್ಲಾ ಕಡೆ (ಸರ್ಕಾರಿ ಮತ್ತು ಖಾಸಗಿ) ಆಸ್ಪತ್ರೆಗಳಲ್ಲಿ ಪಿಪಿಇಗಳ ಕೊರತೆ ಇದೆ ಎಂಬುದನ್ನು ಸ್ವತಃ ವೈದ್ಯರುಗಳೇ ಹೇಳುತ್ತಿದ್ದಾರೆ. ಎರಡು ವಾರದ ಹಿಂದೆ ಚಪ್ಪಾಳೆ ಹೊಡೆಯಿರಿ ಎಂದು ಮೋದಿ ಕರೆ ನೀಡಿದಾಗಲೂ, ಹಲವಾರು ವೈದ್ಯರು ತಮಗೆ ಚಪ್ಪಾಳೆಗೆ ಮುನ್ನ ಪಿಪಿಇ ಕೊಡಿ, ನಮ್ಮ ಜೀವ ಉಳಿಸಿ ಎಂದು ಸಾರ್ವಜನಿಕವಾಗಿಯೇ ಬೇಡಿಕೊಂಡಿದ್ದರು. ಈಗಲೂ ದೀಪ ಹಚ್ಚುವ ಕರೆ ಬಂದಾಗಲೂ ವೈದ್ಯಕೀಯ ವಲಯದಿಂದ ಹತಾಶೆಯ, ಆಕ್ರೋಶದ ಪ್ರತಿಕ್ರಿಯೆಗಳೇ ಬರುತ್ತಿವೆ. ಹಾಗಿದ್ದರೂ ಪ್ರಧಾನಮಂತ್ರಿಗಳು ವೈದ್ಯಕೀಯ ಸಿಬ್ಬಂದಿ ಜೀವ ರಕ್ಷಣೆಗೆ ಏನು ಮಾಡಿದ್ದೇವೆ, ಮಾಡುತ್ತಿದ್ದೇವೆ ಎಂಬುದನ್ನು ಹೇಳಲಿಲ್ಲ, ಕನಿಷ್ಟ ಅವರಿಗೆ ಒಂದು ಧನ್ಯವಾದವನ್ನೂ ಹೇಳಲಿಲ್ಲ. ಬದಲಾಗಿ ಸಂಕಷ್ಟದ ಹೊತ್ತಲ್ಲಿ ಪರಸ್ಪರ ಒಗ್ಗಟ್ಟು ತೋರಿಸಲು ದೀಪ ಹಚ್ಚಿ ಎಂದರೆ ಏನರ್ಥ ಎಂದು ಭ್ರಮನಿರಸನ ಹೊರಹಾಕಿದ್ದಾರೆ.
ಅಭಿಮಾನಿಗಳ ವಲಯದಲ್ಲೇ ಮೋದಿಯವರ ಬಾಯುಪಚಾರದ ಸಾಂಕೇತಿಕ ಆಚರಣೆಗಳಿಗೆ ಈಗ ಅಸಮಾಧಾನ ವ್ಯಕ್ತವಾಗುತ್ತಿದೆ. ಈ ನಡುವೆ, ಕರ್ನಾಟಕವೂ ಸೇರಿ ದೇಶದ ಹಲವು ಕಡೆ, ಹಲವು ಜನಪರ ವ್ಯಕ್ತಿಗಳು ಮೋದಿಯವರು ಕರೆ ನೀಡಿರುವ ಭಾನುವಾರ ರಾತ್ರಿ 9 ಗಂಟೆ 9 ನಿಮಿಷದ ದೀಪ ಬೆಳಗಿಸುವ ಆಂದೋಲನಕ್ಕೆ ಬದಲಾಗಿ ಅಂದು ಲಾಕ್ ಡೌನ್ ನಿಂದಾಗಿ ಜೀವ ಮತ್ತು ದುಡಿಮೆ ಕಳೆದುಕೊಂಡ ಸಂತ್ರಸ್ತರು ಮತ್ತು ಕರೋನಾ ವಿರುದ್ಧದ ಹೋರಾಟದಲ್ಲಿ ಜೀವ ಕಳೆದುಕಂಡವರ ಸ್ಮರಣಾರ್ಥ ಮೂರು ನಿಮಿಷದ ಮೌನಾಚರಣೆಗೆ ಕರೆ ನೀಡಿದ್ದಾರೆ. ಆ ಮೂಲಕ ನಿಜಕ್ಕೂ ನಾವು ನಮ್ಮವರಿಗಾಗಿ ಮಗುಗೋಣ. ಅವರನ್ನು ಉಳಿಸಿಕೊಳ್ಳುವ ವಿಷಯದಲ್ಲಿ ನಾವು ಮಾಡಿದ ತಪ್ಪಿಗಾಗಿ ಪಶ್ಚಾತ್ತಾಪ ಪಡೋಣ ಎಂಬ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಈ ನಡುವೆ, ದೇಶದಲ್ಲಿ ಕೊರೋನಾ ಸೋಂಕಿಗೆ ಒಳಗಾದವರ ಸಂಖ್ಯೆಯಲ್ಲಿ ದಿಢೀರ್ ಏರಿಕೆಯಾಗಿದ್ದು, ಒಂದೇ ದಿನದಲ್ಲಿ 530 ಮಂದಿಗೆ ಸೋಂಕು ಧೃಡಪಟ್ಟಿದೆ. ಈವರೆಗೆ ಒಂದು ದಿನದಲ್ಲಿನ ಅತ್ಯಧಿಕ ಏರಿಕೆ ಇದಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 3500ಕ್ಕೆ ಏರಿದೆ. ಸೋಂಕು ದೇಶದಲ್ಲಿ ಇನ್ನೂ ಸಮುದಾಯಿಕ ಸೋಂಕಾಗಿ ಹರಡಿಲ್ಲ ಎಂಬ ಐಸಿಎಂಆರ್ ಹೇಳಿಕೆಗಳ ಹೊರತಾಗಿಯೂ, ಈ ಮಟ್ಟದ ದಿಢೀರ್ ಏರಿಕೆ ಈಗಾಗಲೇ ಸೋಂಕು ದೇಶದಲ್ಲಿ ಸಮುದಾಯದ ಮಟ್ಟದಲ್ಲಿ ವ್ಯಾಪಕ ಸೋಂಕಾಗಿ ಹರಡಿದೆ. ಆದರೆ, ವ್ಯಾಪಕ ಪ್ರಮಾಣದಲ್ಲಿ ವೈರಾಣು ಪರೀಕ್ಷೆಗಳನ್ನು ನಡೆಸದೇ ಇರುವುದರಿಂದ ವಾಸ್ತವಾಂಶ ಹೊರಬರುತ್ತಿಲ್ಲ ಎಂಬ ಡಾ ರಮಣನ್ ಅವರಂಥ ಅಂತಾರಾಷ್ಟ್ರೀಯ ತಜ್ಞರ ವಾದಕ್ಕೆ ಈ ದಿಢೀರ್ ಏರಿಕೆ ಇಂಬುನೀಡುತ್ತಿದೆ ಎನ್ನಲಾಗುತ್ತಿದೆ.
ಈ ನಡುವೆ, ದೇಶದಲ್ಲಿ ಸದ್ಯ ದಿನವೊಂದಕ್ಕೆ 12 ಸಾವಿರ ವೈರಾಣು ಪರೀಕ್ಷೆ ಮಾಡುವ ಸಾಮರ್ಥ್ಯ ಈಗಿರುವ ಪ್ರಯೋಗಾಲಯಗಳಿಗೆ ಇದೆ ಎನ್ನುವ ಕೇಂದ್ರ ಆರೋಗ್ಯ ಸಚಿವಾಲಯ, ಆದರೆ ವಾಸ್ತವವಾಗಿ ದಿನಕ್ಕೆ ಕೇವಲ 3000ಕ್ಕಿಂತಲೂ ಕಡಿಮೆ ಪರೀಕ್ಷೆಗಳನ್ನು ಮಾತ್ರ ನಡೆಸುತ್ತಿರುವುದು ಏಕೆ? ರೋಗ ಇಷ್ಟೊಂದು ವ್ಯಾಪಕ ಪ್ರಮಾಣದಲ್ಲಿ ಹರಡಿರುವಾಗಲೂ ಸಾಮೂಹಿಕ(ಕನಿಷ್ಠ ಅಧಿಕ ಸೋಂಕಿನ ಹಾಟ್ ಸ್ಪಾಟ್ ಪ್ರದೇಶಗಳಲ್ಲಾದರೂ) ವೈರಾಣು ಪರೀಕ್ಷೆಗೆ ಏಕೆ ಮುಂದಾಗುತ್ತಿಲ್ಲ? ಎಂಬ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಅಗತ್ಯ ಪ್ರಮಾಣದ ಪರೀಕ್ಷಾ ಕಿಟ್ ಗಳ ಸರಬರಾಜಾಗುತ್ತಿದೆಯೇ ? ಇಲ್ಲವೇ ಎಂಬ ಬಗ್ಗೆ ಕೂಡ ಗೊಂದಲದ ಹೇಳಿಕೆಗಳಿವೆ.
ಆದರೆ ಕಳೆದ ನಾಲ್ಕು ದಿನಗಳಲ್ಲಿ ಸೋಂಕಿನ ಪ್ರಮಾಣ ಆಘಾತಕಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಇಂತಹ ಹೊತ್ತಲ್ಲಿ ಸರ್ಕಾರ ಕೂಡಲೇ ವೈದ್ಯಕೀಯ ಸಿಬ್ಬಂದಿಗೆ, ವ್ಯಾಪಕ ಸೋಂಕಿತರಿಗೆ ಅವರು ಹಿಂಜರಿಕೆ ಇಲ್ಲದೆ, ಜೀವಭಯವಿಲ್ಲದೆ ಚಿಕಿತ್ಸೆ ನೀಡುವಂತೆ ಭರವಸೆ ತುಂಬುವ ನಿಟ್ಟಿನಲ್ಲಿ ತಾನು ಈವರೆಗೆ ಸುರಕ್ಷತಾ ಸಾಧನ ಒದಗಿಸುವ ನಿಟ್ಟಿನಲ್ಲಿ ಏನು ಮಾಡಿದ್ದೇನೆ, ಬರುವ ದಿನಗಳಲ್ಲಿ ಇನ್ನೇನು ಮಾಡಲಿದ್ದೇನೆ ಎಂದು ಬಹಿರಂಗಪಡಿಸಬೇಕಿದೆ. ಹಾಗೆಯೇ ಪರೀಕ್ಷಾ ಕಿಟ್ಗಳು, ದೇಶಾದ್ಯಂತ ಆಸ್ಪತ್ರೆ ವ್ಯವಸ್ಥೆ, ಹೆಚ್ಚುವರಿ ವಿಶೇಷ ಕೊಠಡಿಗಳು, ಅವುಗಳಿಗೆ ಅಗತ್ಯ ವೆಂಟಿಲೇಟರ್, ಆಮ್ಲಜನಕದ ಸಿಲಿಂಡರ್ ಮುಂತಾದ ವ್ಯವಸ್ಥೆಯನ್ನು ಹೇಗೆ ಸಜ್ಜುಗೊಳಿಸಲಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಆಗುವ ಏರಿಕೆಗೆ ತಕ್ಕಂತೆ ತಾನು ಏನೆಲ್ಲಾ ಸಿದ್ಧತೆ ಮಾಡಿಕೊಂಡಿದ್ದೇನೆ ಎಂಬ ವಿವರಗಳನ್ನು ದೇಶದ ಜನರ ಮುಂದಿಡಬೇಕಾಗಿದೆ. ಆ ಮೂಲಕ ಜನರಲ್ಲೂ ಮತ್ತು ವೈದ್ಯಕೀಯ ಸಿಬ್ಬಂದಿಯಲ್ಲೂ ಭರವಸೆ ಮತ್ತು ವಿಶ್ವಾಸವನ್ನು ಹುಟ್ಟಿಸಬೇಕಿದೆ.
ಕರೋನಾ ಭೀತಿಯಲ್ಲಿರುವ ದೇಶದ ಜನತೆ ಮತ್ತು ಅದರ ವಿರುದ್ಧದ ಹೋರಾಟದಲ್ಲಿ ಜೀವ ಪಣಕ್ಕಿಟ್ಟು ದುಡಿಯುತ್ತಿರುವ ಸರ್ಕಾರಿ ಮತ್ತು ಖಾಸಗಿ ವೃತ್ತಿನಿರತರಲ್ಲಿ ಭರವಸೆ ಮತ್ತು ವಿಶ್ವಾಸ ಹುಟ್ಟಿಸುವ ಪ್ರಯತ್ನಗಳು ಇಲ್ಲದೆ; ಕೇವಲ ಬಾಯುಪಚಾರ ಸಾಂಕೇತಿಕ ವರಸೆಗಳು ಮತ್ತಷ್ಟು ಗೊಂದಲ, ಶಂಕೆಗಳಿಗೆ ಎಡೆಮಾಡಿಕೊಡಲಿವೆ.