ಎಲ್ಲೋ ಯಾರೋ ಎಸಗುವ ಸಣ್ಣ ತಪ್ಪಿಗೆ, ಇಡೀ ಮುಸ್ಲಿಂ ಸಮುದಾಯವನ್ನೇ ಹೊಣೆ ಮಾಡಿ, ಅಪಪ್ರಚಾರ ಮಾಡುವುದನ್ನು ಸಹಿಸಲಾಗದು. ಅಂತಹವರು ಎಲ್ಲಾ ಸಮುದಾಯದಲ್ಲೂ ಇರುತ್ತಾರೆ. ಅದಕ್ಕೆ ಒಂದಿಡೀ ಸಮುದಾಯವನ್ನು ಗುರಿ ಮಾಡುತ್ತಿರುವ ಬಗ್ಗೆ ಯಾವ ಮುಲಾಜಿಲ್ಲದೆ ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಹೇಳಿದ್ದಾರೆ.
ದೆಹಲಿಯ ತಬ್ಲೀಕ್ ಜಮಾತೆ ಸಮಾವೇಶದಲ್ಲಿ ಪಾಲ್ಗೊಂಡ ಕೆಲವರಲ್ಲಿ ಕರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮತ್ತು ಆ ಪೈಕಿ ಕೆಲವರು ವೈದ್ಯಕೀಯ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸುವುದು, ತಪ್ಪಿಸಿಕೊಂಡು ಹೋಗುವುದು ಮುಂತಾದ ಆತಂಕಕಾರಿ ಚಟುವಟಿಕೆಯಲ್ಲಿ ತೊಡಗಿದ್ದರಿಂದ ಕಳೆದ ಕೆಲವು ದಿನಗಳಿಂದ ದೇಶದಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸುದ್ದಿ ಮಾಧ್ಯಮಗಳಲ್ಲಿ ಇಡೀ ಮುಸ್ಲಿಂ ಸಮುದಾಯದ ವಿರುದ್ಧ ವ್ಯಾಪಕ ಸುಳ್ಳು- ವದಂತಿ ಮತ್ತು ಅಪಪ್ರಚಾರದ ಅಭಿಯಾನವೇ ನಡೆಯುತ್ತಿದೆ. ಆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಈ ಎಚ್ಚರಿಕೆ ನಿಜಕ್ಕೂ ಕೋಮುದ್ವೇಷ ಮತ್ತು ಅಮಾನವೀಯ ಅಜೆಂಡಾದ ಗುಂಪುಗಳು ಮತ್ತು ಮಾಧ್ಯಮಗಳಿಗೆ ಬಿಸಿಮುಟ್ಟಿಸಿದೆ. ಹಾಗಾಗಿ ಸಹಜವಾಗೇ ಕರೋನಾ ವೈರಾಣು ಸೋಂಕಿನ ಹೊತ್ತಿನಲ್ಲಿ ಕೋಮುವಾದಿ, ಜನಾಂಗೀಯ ದ್ವೇಷದ ಅಭಿಯಾನ ನಡೆಯುತ್ತಿರುವುದರಿಂದ ಬೇಸತ್ತ ಉದಾರವಾದಿಗಳು ಮತ್ತು ಪ್ರಜಾಪ್ರಭುತ್ವವಾದಿಗಳು ಸಿಎಂ ಹೇಳಿಕೆಯನ್ನು ಸ್ವಾಗತಿಸಿ, ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಯ ಸುರಿಮಳೆಗರೆಯುತ್ತಿದ್ದಾರೆ.
ಈ ನಡುವೆ ತಬ್ಲೀಕ್ ಜಮಾತೆ ಸಮಾವೇಶ ಮತ್ತು ಆ ಬಳಿಕ ಅದರಲ್ಲಿ ಪಾಲ್ಗೊಂಡ ಕೆಲವರು ವೈದ್ಯಕೀಯ ಸಿಬ್ಬಂದಿಯೊಂದಿಗೆ ನಡೆದುಕೊಂಡ ರೀತಿಯನ್ನೇ ಬಳಸಿಕೊಂಡು ಸಮಾಜದಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ಯಾವ ಪರಿಯ ಅಪಪ್ರಚಾರ ಮಾಡಲಾಗಿದೆ ಎಂದರೆ; ಮುಸ್ಲಿಮರೊಂದಿಗೆ ವ್ಯವಹರಿಸುವುದು, ಅವರ ಅಂಗಡಿ-ಮಂಗಟ್ಟುಗಳಲ್ಲಿ ವಸ್ತುಗಳನ್ನು ಖರೀದಿಸುವುದಕ್ಕೇ ಹಿಂಜರಿಯುವಂತಹ ಮನಸ್ಥಿತಿ ನಿರ್ಮಾಣವಾಗಿತ್ತು. ಜೊತೆಗೆ ರಾಜ್ಯದ ಬಾಗಲಕೋಟೆ ಸೇರಿದಂತೆ ದೇಶದ ಹಲವೆಡೆ ಮುಸ್ಲಿಮರ ಮೇಲೆ ಹಲ್ಲೆ ನಡೆದ ಘಟನೆಗಳೂ ವರದಿಯಾಗಿದ್ದವು. ಈ ನಡುವೆ ಕರೋನಾ ಲಾಕ್ ಡೌನ್ ಉಲ್ಲಂಘಿಸಿ ಮುಸ್ಲಿಮರು ಮಸೀದಿಗಳಲ್ಲಿ ಸಾಮೂಹಿಕ ನಮಾಜು ಮಾಡುವುದನ್ನು ಕೆಲವು ಕಡೆ ಮುಂದುವರಿಸಿದ ಹಿನ್ನೆಲೆಯಲ್ಲಿ ಕೂಡ ಜನಸಾಮಾನ್ಯರ ಆತಂಕವನ್ನು ಆ ಸಮುದಾಯದ ವಿರುದ್ಧ ದ್ವೇಷವಾಗಿ, ಮತೀಯ ವೈಷಮ್ಯವಾಗಿ ತಿರುಗಿಸುವ ಯತ್ನಗಳೂ ನಡೆದಿದ್ದವು.
ಆ ಎಲ್ಲಾ ಹಿನ್ನೆಲೆಯಲ್ಲಿ ಇಂದು(ಸೋಮವಾರ) ಸಿಎಂ ಯಡಿಯೂರಪ್ಪ ಅವರು ವಿವಿಧ ಟಿವಿ ವಾಹಿನಿಗಳಿಗೆ ನೀಡಿದ ಸಂದರ್ಶನದಲ್ಲಿ ಕರೋನಾ ವಿಷಯದಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ಯಾರೇ ಮಾತನಾಡಿದರೂ ಸಹಿಸುವುದಿಲ್ಲ. ಆ ಸಮುದಾಯವನ್ನು ಗುರಿಯಾಗಿಸಿಕೊಂಡು ಯಾವುದೇ ಅಪಪ್ರಚಾರ ನಡೆಸಿದರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿರುವುದು ಬಿಜೆಪಿ ಮತ್ತು ಸಂಘಪರಿವಾರದ ಮಂದಿಗೆ ಬಿಸಿತುಪ್ಪದಂತಾಗಿದ್ದರೆ, ಉಳಿದವರ ಮೆಚ್ಚುಗೆಗೆ ಪಾತ್ರವಾಗಿದೆ.
ಏಕೆಂದರೆ, ಕಳೆದ ಕೆಲವು ದಿನಗಳಿಂದ ಕರೋನಾ ನಿಯಂತ್ರಣ, ಚಿಕಿತ್ಸೆ, ಲಾಕ್ ಡೌನ್ ಹೇರಿಕೆಯ ಬಳಿಕದ ವಲಸೆ ಮತ್ತು ನಿರುದ್ಯೊಗ, ಆಹಾರ ಹಾಹಾಕಾರ, ಬಡತನ, ಮುಂತಾದ ಬಿಕ್ಕಟ್ಟುಗಳ ನಿರ್ವಹಣೆ ಸೇರಿದಂತೆ ಹಲವು ವಿಷಯಗಳಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಸಂಪೂರ್ಣ ಕೈಚೆಲ್ಲಿದೆ ಎಂಬುದು ಎದ್ದುಕಾಣುವ ಸಂಗತಿ. ಜೀವಕಂಟಕ ಸೋಂಕಿನ ವಿರುದ್ಧ ಜೀವ ಪಣಕ್ಕಿಟ್ಟು ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಕನಿಷ್ಠ ಜೀವರಕ್ಷಕ ಸುರಕ್ಷತಾ ಸಾಧನ(ಪಿಪಿಇ)ಗಳನ್ನು ನೀಡುವಲ್ಲಿ ಕೂಡ ಕೇಂದ್ರ ಸರ್ಕಾರ ಸಫಲವಾಗಿಲ್ಲ. ಪರೀಕ್ಷಾ ಕಿಟ್ ಕೊರತೆ ನೀಗಲು ಆಗಿಲ್ಲ. ಹಾಗಾಗಿನೂರಾರು ವೈದ್ಯರು ಸ್ವತಃ ಸೋಂಕಿತರಾಗಿದ್ದಾರೆ. ಕಿಟ್ ಕೊರತೆಯಿಂದಾಗಿ ವ್ಯಾಪಕ ವೈರಾಣು ಪರೀಕ್ಷೆ ನಡೆಸಲಾಗದೆ, ಸೋಂಕು ಆಘಾತಕಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಜನಸಾಮಾನ್ಯರು ಕೇಂದ್ರ ಬಿಜೆಪಿ ಸರ್ಕಾರ ಮತ್ತು ನಾಯಕತ್ವದ ವಿರುದ್ಧ ವ್ಯಕ್ತಪಡಿಸುತ್ತಿರುವ ಭ್ರಮನಿರಸನ ಮತ್ತು ಹತಾಶೆಯನ್ನು ಮುಸ್ಲಿಮರ ವಿರುದ್ಧದ ಕೋಮು ದ್ವೇಷವಾಗಿ ತಿರುಗಿಸಲು ತಬ್ಲೀಕ್ ಮತ್ತು ಆ ಬಳಿಕದ ಬಿಡಿ ಘಟನೆಗಳನ್ನೇ ಮುಖ್ಯವಾಗಿ ಬಳಸಿಕೊಳ್ಳಲಾಗಿತ್ತು. ಹೀಗೆ ಕೆಲವೇ ಮಂದಿಯ ವಿಕೃತಿ ಮತ್ತು ಪ್ರಮಾದಗಳನ್ನು ಇಡೀ ಸಮುದಾಯದ ವ್ಯವಸ್ಥಿತ ಸಂಚು ಎಂಬಂತೆ ಬಿಂಬಿಸಿ, ಅವರನ್ನು ಬಹುಸಂಖ್ಯಾತರ ಕಣ್ಣಲ್ಲಿ ವಿಲನ್ ಮಾಡುವ ಕೆಲಸವನ್ನು ಮಾಡಿದ್ದು ಕೂಡ ಬಹುತೇಕ ಬಿಜೆಪಿ ನಾಯಕರೇ ಮತ್ತು ಸ್ವತಃ ಅದೇ ಕೇಸರಿ ಪಡೆಯ ಭಾಗವಾಗಿರುವ ಸಂಘ-ಪರಿವಾರದ ಹಲವರು ಎಂಬುದು ಗುಟ್ಟೇನಲ್ಲ. ಆ ಹಿನ್ನೆಲೆಯಲ್ಲಿ ಸಹಜವಾಗೇ ತಮ್ಮದೇ ಪರಿವಾರದ ವಿರುದ್ಧ ಖಡಕ್ ಸಂದೇಶ ರವಾನಿಸಿದ್ದಾರೆ ಎಂಬ ಸಮಾಧಾನ ಉದಾರವಾದಿಗಳ ಸಂಭ್ರಮಕ್ಕೂ ಕಾರಣವಾಗಿದೆ.
ಈ ನಡುವೆ ಶಿವಮೊಗ್ಗವೂ ಸೇರಿದಂತೆ ರಾಜ್ಯದ ಹಲವೆಡೆ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ಅಪಪ್ರಚಾರದ ಸಂದೇಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಆರೋಪದ ಹಲವರ ವಿರುದ್ಧ ಪ್ರಕರಣಗಳನ್ನೂ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಸಹಜವಾಗೇ ಸಿಎಂ ಎಚ್ಚರಿಕೆ ಖಾಕಿಪಡೆಗೂ ಬಿಸಿಮುಟ್ಟಿಸಿದೆ. ಇಷ್ಟು ದಿನ ಕಣ್ಣು ಮುಚ್ಚಿ ಕೂತಿದ್ದ ಪೊಲೀಸರು ಕೂಡ ಈ ವಿಷಯದಲ್ಲಿ ಈಗ ಕಾರ್ಯೋನ್ಮುಖರಾಗಿದ್ದಾರೆ. ಅಷ್ಟರಮಟ್ಟಿಗೆ ಸಿಎಂ ಅವರ ಸಂದೇಶ ತಳಮಟ್ಟದಲ್ಲಿ ಸಾಕಷ್ಟು ಚುರುಕುಮುಟ್ಟಿಸಿದೆ.
ಆದರೆ, ವಾಸ್ತವವಾಗಿ ದೆಹಲಿಯ ತಬ್ಲೀಕ್ ಘಟನೆಯ ವೇಳೆಯೇ ಹೈದರಾಬಾದ್, ಉತ್ತರಪ್ರದೇಶದ ಕೆಲವು ಕಡೆ ಸೇರಿದಂತೆ ಹಲವು ಭಾಗಗಳಲ್ಲಿ ಅಂತಹದ್ದೇ ಧಾರ್ಮಿಕ ಕಾರ್ಯಕ್ರಮಗಳು, ಸಮಾವೇಶಗಳು, ತಿಥಿ-ವೈದಿಕಗಳೂ ನಡೆದಿದ್ದವು, ಅವುಗಳಲ್ಲಿ ಭಾಗವಹಿಸಿದ ನೂರಾರು ಜನರೂ ಕರೋನಾ ಪಾಸಿಟಿವ್ ಎಂಬುದು ದೃಢಪಟ್ಟಿದ್ದು, ಕ್ರಮೇಣ ಸಾವಿರಾರು ಜನರ ಪ್ರತ್ಯೇಕಿಸುವುದಕ್ಕೂ(ಕ್ವಾರಂಟೈನ್) ಆ ಘಟನೆಗಳು ಕಾರಣವಾಗಿವೆ. ಆದರೆ, ಆ ಎಲ್ಲವನ್ನೂ ಬಿಟ್ಟು, ಕೇವಲ ಮುಸ್ಲಿಮರ ಸಂಘಟನೆ ಎಂಬ ಕಾರಣಕ್ಕೆ ತಬ್ಲೀಕ್ ಒಂದನ್ನೇ ಬಳಸಿಕೊಂಡು, ಅದು ಇಡೀ ದೇಶದ ವಿರುದ್ಧ ಮುಸ್ಲಿಮರು ನಡೆಸುತ್ತಿರುವ ಪಿತೂರಿ ಎಂಬಂತೆ ಬಿಂಬಿಸಿದ್ದು ಮುಖ್ಯವಾಗಿ ಸೇರಿದಂತೆ ವಿವಿಧ ಸುದ್ದಿ ಮಾಧ್ಯಮಗಳು. ಅದರಲ್ಲೂ ಮುಖ್ಯಮಂತ್ರಿಗಳು ಸಂದರ್ಶನ ನೀಡಿದ ಅವೇ ಟಿವಿ ವಾಹಿನಿಗಳೇ ಈ ವಿಷಯದಲ್ಲಿ ವ್ಯಾಪಕ ಅಪಪ್ರಚಾರ ನಡೆಸಿವೆ. ಅದು ಇಡೀ ನಾಡು ಕಂಡ ಸತ್ಯ ಮತ್ತು ಸ್ವತಃ ಹಲವು ಸಾಮಾಜಿಕ ಮತ್ತು ರಾಜಕೀಯ ಸಂಘಟನೆಗಳು ಸಾಮಾಜಿಕ ಜಾಲತಾಣದಲ್ಲಿ ಕನ್ನಡ ವಾಹಿನಿಗಳ ಅಂತಹ ಕೋಮು ಪೂರ್ವಗ್ರಹದ ಪ್ರಚಾರದ ಬಗ್ಗೆ ದನಿ ಎತ್ತಿವೆ ಕೂಡ.
ಹಾಗಾಗಿ, ನಿಜವಾಗಿಯೂ ಸಿಎಂ ಅವರ ಎಚ್ಚರಿಕೆ ಮತ್ತು ಕಟ್ಟುನಿಟ್ಟಿನ ಕಠಿಣ ಕ್ರಮ ಮೊದಲು ಅನ್ವಯವಾಗಬೇಕಾಗಿರುವುದು ಮಾಧ್ಯಮಗಳಿಗೇ; ಅದರಲ್ಲೂ ಕೆಲವು ಕೋಮುವಾದಿ ಅಜೆಂಡಾದ ಜಾಲತಾಣಗಳು ಮತ್ತು ಟಿವಿ ವಾಹಿನಿಗಳಿಂದಲೇ ಆ ಕ್ರಮ ಜಾರಿಗೆ ಬರಬೇಕಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಹರಿದಾಡಿರುವುದು ಕೂಡ ಕರೋನಾ ವಿಷಯದಲ್ಲಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಟಿವಿ ವಾಹಿನಿಗಳ ನಡೆಸಿದ ವ್ಯಾಪಕ ಅಪಪ್ರಚಾರದ ವೀಡಿಯೋ ತುಣುಕುಗಳೇ. ಹಾಗಾಗಿ ರಾಜ್ಯ ಸರ್ಕಾರ ಮೊದಲು ಅಂತಹ ಹೊಣೆಗೇಡಿ ಮಾಧ್ಯಮಗಳ ವಿರುದ್ಧ ದಂಡ ಬೀಸಬೇಕಾಗಿದೆ. ಆ ಮೂಲಕವೇ ಸಿಎಂ ಅವರ ಸಾಮಾಜಿಕ ಸಾಮರಸ್ಯದ, ಸೌಹಾರ್ದತೆಯ ಆಶಯದ ಮಾತುಗಳು ಜಾರಿಗೆ ಬರಬೇಕಾಗಿದೆ.
ಜೊತೆಗೆ ಕಳೆದ ಒಂದು ವಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ತಬ್ಲೀಕ್ ಘಟನೆ ಬಳಿಕದ ಮುಸ್ಲಿಮರ ವಿರುದ್ಧದ ಸಾವಿರಾರು ಸಂದೇಶಗಳನ್ನು, ಮೀಮ್ಗಳನ್ನು, ನಕಲಿ ವೀಡಿಯೋಗಳನ್ನು ಹಂಚಿದ ಬಿಜೆಪಿ ಮತ್ತು ಸಂಘಪರಿವಾರದ ಪ್ರಮುಖರ ಖಾತೆಗಳನ್ನು ಜಾಲಾಡಿ ಅವರ ವಿರುದ್ಧವೂ ಕ್ರಮ ಜಾರಿಯಾಗಬೇಕು. ಅದನ್ನು ನಿರೀಕ್ಷಿಸಬಹುದೆ? ಆ ಸಂದೇಶಗಳನ್ನು ಹಂಚಿಕೊಂಡವರು ಯಾರು, ಅಂತಹ ಸಂದೇಶಗಳ ಮೂಲ ಯಾವುದು? ಯಾರು ಅವುಗಳನ್ನು ತಯಾರಿಸಿ ಹರಿಯಬಿಟ್ಟದ್ದು ಎಂಬುದನ್ನು ಜಾಲಾಡಿ ಎಲ್ಲರ ಹೆಡೆಮುರಿ ಕಟ್ಟಲಾದೀತೆ? ಅಂತಹ ಕಾರ್ಯಕ್ಕೆ ಸರ್ಕಾರ ಸ್ಪಷ್ಟ ನಿರ್ದೇಶನ ನೀಡುವುದೇ? ಹಾಗೊಂದು ವೇಳೆ ಕಟ್ಟುನಿಟ್ಟಿನ ಆದೇಶ ನೀಡಿ, ಅದನ್ನು ಸೈಬರ್ ಪೊಲೀಸರು ಅನುಸರಿಸಿದರೆ, ಅಂತಿಮವಾಗಿ ಆ ಎಲ್ಲಾ ಸಂದೇಶಗಳ ಮೂಲದ ಹುಡುಕಾಟ ಬಿಜೆಪಿ ಐಟಿ ಸೆಲ್ ನತ್ತಲೇ ಬೊಟ್ಟು ತೋರಿಸಿದರೆ ಪೊಲೀಸರಿಗೆ ಮುಕ್ತ ಕಾರ್ಯನಿರ್ವಹಣೆಯ ಅವಕಾಶ ಸಿಗಬಹುದೆ?
ಇಂತಹ ಹಲವು ಪ್ರಶ್ನೆಗಳಿಗೆ ಸಿಎಂ ಅವರ ಈ ಕಟ್ಟುನಿಟ್ಟಿನ ಎಚ್ಚರಿಕೆ ಉತ್ತರವಾಗುವುದೇ ಆದರೆ, ಆಗ ನಿಜಕ್ಕೂ ಸಿಎಂ ಅವರ ಕಾಳಜಿಯನ್ನು ಮೆಚ್ಚಿ ಕೊಂಡಾಡದೇ ಇರಲಾಗದು. ಆದರೆ, ಅಂತಹ ಸಂದರ್ಭ ಸದ್ಯಕ್ಕಂತೂ ಕಾಣುತ್ತಿಲ್ಲ. ಅದೇ ಹೊತ್ತಿಗೆ ಈ ಎಚ್ಚರಿಕೆ, ಕನಿಷ್ಠ ಮುಂದಿನ ದಿನಗಳಲ್ಲಿ ಇನ್ನಷ್ಟು ಅಪಪ್ರಚಾರಕ್ಕೆ, ಲಂಗುಲಗಾಮಿಲ್ಲದ ನಂಜು ಹರಡುವ ನ್ಯೂಸ್ ಹೆಸರಿನ ಅಹಸ್ಯಕ್ಕೆ ಕೆಲಮಟ್ಟಿಗಾದರೂ ಬ್ರೇಕ್ ಹಾಕಲಿದೆ ಎಂಬುದು ಸದ್ಯದ ಆಶಾವಾದ.