ಕರೋನಾ ಮಹಾಮಾರಿಯ ವಿರುದ್ಧದ ಹೋರಾಟದ ಭಾಗವಾಗಿ ಹೇರಲಾಗಿದ್ದ ದೇಶವ್ಯಾಪಿ ಲಾಕ್ ಡೌನ್ ಮತ್ತೆ ಹದಿನೈದು ದಿನ ವಿಸ್ತರಣೆಯಾಗಿದೆ. ಏಪ್ರಿಲ್ 14ಕ್ಕೆ ಮುಗಿಯಬೇಕಿದ್ದ ಲಾಕ್ ಡೌನ್ ಈಗ ತಿಂಗಳಾಂತ್ಯದ ವರೆಗೆ ಮುಂದುವರಿದಿದೆ.
ಶನಿವಾರ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಆ ಬಳಿಕ ಲಾಕ್ ಡೌನ್ ವಿಸ್ತರಣೆಯ ನಿರ್ಧಾರ ಪ್ರಕಟಿಸಿದ್ದಾರೆ. ಈ ಮೊದಲು, ಮಾರ್ಚ್ 24ರಂದು 21 ದಿನಗಳ ಲಾಕ್ ಡೌನ್ ಘೋಷಣೆ ವೇಳೆ, ಜೀವ ಮುಖ್ಯ, ಪ್ರತಿ ಜೀವದ ರಕ್ಷಣೆ ಸರ್ಕಾರದ ಹೊಣೆ ಎಂದು ಹೇಳಿದ್ದ ಪ್ರಧಾನಿ, ಇಂದು ಜೀವ ಮತ್ತು ಬದುಕು ಎರಡೂ ಮುಖ್ಯ ಎಂದಿದ್ದಾರೆ. ಆ ಮೂಲಕ ಮುಂದಿನ ಹದಿನೈದು ದಿನಗಳ ಲಾಕ್ ಡೌನ್ ವಿಸ್ತರಣೆಯ ವೇಳೆ ಜೀವ ರಕ್ಷಣೆಯೊಂದಿಗೆ ಜನರ ಬದುಕಿನ ರಕ್ಷಣೆ ಕೂಡ ಆದ್ಯತೆಯಾಗಿರಲಿದೆ ಎಂಬುದನ್ನು ಹೇಳಿದ್ದಾರೆ. ಆ ಮೂಲಕ ಹಂತಹಂತವಾಗಿ ಮತ್ತು ಪ್ರದೇಶವಾರು ಪರಿಸ್ಥಿತಿಯ ಮೇಲೆ ಉದ್ಯಮ ಮತ್ತು ವಹಿವಾಟು ಅವಕಾಶ ನೀಡುವ ಸುಳಿವು ನೀಡಿದ್ದಾರೆ. ಮುಂಗಾರು ಬಿತ್ತನೆ ಮತ್ತು ಬೇಸಿಗೆ ಬೆಳೆಯ ಕಟಾವು ಹಂಗಾಮಿನ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆ ಮತ್ತು ಅದಕ್ಕೆ ಪೂರಕವಾಗಿ ಸರ್ಕಾರ ಮತ್ತು ಬ್ಯಾಂಕಿಂಗ್ ಕ್ಷೇತ್ರದಿಂದ ನೀಡಬೇಕಾದ ಬೆಂಬಲವನ್ನು ಖಾತ್ರಿಪಡಿಸುವಂತೆ ಮೋದಿ ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಗಳಿಗೆ ಸೂಚಿಸಿದ್ದಾರೆ.
ಆದರೆ, ಈ ಬಾರಿ ಕೂಡ ಕೂಲಿಕಾರ್ಮಿಕರು, ವಲಸಿಗರು, ಅಂದಂದಿನ ದುಡಿಮೆ ಅಂದಂದು ಮಾಡಿ ಬದುಕು ಸಾಗಿಸುವ ಚಿಕ್ಕಪುಟ್ಟ ವ್ಯಾಪಾರಸ್ಥರು, ಬೀದಿ ವ್ಯಾಪಾರಿಗಳು, ಅಸಂಘಟಿತ ವಲಯದ ವಿವಿಧ ಕಾರ್ಮಿಕರ ಕುರಿತು ಪ್ರಧಾನಮಂತ್ರಿಗಳು ಯಾವ ಪ್ರಸ್ತಾಪವನ್ನೂ ಮಾಡಿಲ್ಲ. ಈ ನಡುವೆ ಕರೋನಾ ರೋಗ ನಿಯಂತ್ರಣ ಮತ್ತು ಚಿಕಿತ್ಸೆಯ ಜೊತೆ ಆರ್ಥಿಕ ಪರಿಸ್ಥಿತಿ ನಿಭಾಯಿಸಲು ಹಣಕಾಸಿನ ನೆರವು ಬೇಕಾಗಿದೆ. ಕೇಂದ್ರ ಸರ್ಕಾರ ರಾಜ್ಯಗಳ ನೆರವಿಗೆ ಬರಬೇಕಿದೆ ಎಂದು ಹಲವು ಮುಖ್ಯಮಂತ್ರಿಗಳು ಈ ವೇಳೆ ಪ್ರಧಾನಿಗೆ ಮನವಿ ಮಾಡಿದ್ದಾರೆ.
ಈ ನಡುವೆ ಮಾರ್ಚ್ ಮೂರನೇ ವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಿಸಿದ್ದ 1.70 ಲಕ್ಷ ಕೋಟಿ ಕರೋನಾ ವಿಶೇಷ ಹಣಕಾಸು ಪ್ಯಾಕೇಜ್ ತಮಗೆ ನಿರೀಕ್ಷಿತ ಮಟ್ಟದಲ್ಲಿ ನೆರವಿಗೆ ಬಂದಿಲ್ಲ. ಜನಸಾಮಾನ್ಯರಿಗೆ ಅದು ಈವರೆಗೆ ಯಾವುದೇ ಅನುಕೂಲ ಮಾಡಿಲ್ಲ. ಅದರಲ್ಲೂ ಮುಖ್ಯವಾಗಿ ವಲಸೆ ಕಾರ್ಮಿಕರು ಈಗಲೂ ಆಹಾರ- ನೀರು ಸಿಗದೆ ಬೀದಿಯ ಹೆಣವಾಗುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಹಣಕಾಸು ಪ್ಯಾಕೇಜು ತಲುಪಿಸುವ ನಿಟ್ಟಿನಲ್ಲಿ ಸರ್ಕಾರ ಸ್ಪಷ್ಟ ಯೋಜನೆ ಹೊಂದಬೇಕಿದೆ. ಇಲ್ಲವೇ ನೇರವಾಗಿ ರಾಜ್ಯಗಳಿಗೆ ಅನುದಾನ ಹಂಚಿಕೆ ಮಾಡಿದ್ದಲ್ಲಿ ರಾಜ್ಯಗಳೇ ಅದರ ಬಳಕೆಯ ಬಗ್ಗೆ ತೀರ್ಮಾನ ಕೈಗೊಳ್ಳಲು ಅನುಕೂಲವಾಗುತ್ತದೆ ಎಂಬ ಅಭಿಪ್ರಾಯ ಕೂಡ ಸಿಎಂಗಳಿಂದ ಕೇಳಿಬಂದಿದೆ.
ಪಶ್ಚಿಮಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ಲಾಕ್ ಡೌನ್ ಮುಂದುವರಿಕೆ ಸರಿ. ಆದರೆ, ಅದನ್ನು ಜಾರಿ ಮಾಡುವ ವಿಧಾನ ಪ್ರಾಯೋಗಿಕವಾಗಿರಬೇಕು ಮತ್ತು ಮಾನವೀಯ ನೆಲೆಯಲ್ಲಿರಬೇಕು ಎನ್ನುವ ಮೂಲಕ ಲಾಕ್ ಡೌನ್ ಹೆಸರಿನಲ್ಲಿ ಕೇಂದ್ರ ಸರ್ಕಾರ ಈ ಮೊದಲಿನಂತೆ ಮುಂದೆಯೂ ಜನಸಾಮಾನ್ಯರ ಬದುಕಿನ ಸಂಕಷ್ಟಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಕೈತೊಳೆದುಕೊಂಡು ಕೂರುವಂತಿಲ್ಲ ಎಂಬುದನ್ನು ಸೂಚ್ಯವಾಗಿ ಹೇಳಿದ್ದಾರೆ. ರಾಜಸ್ತಾನ ಸಿಎಂ ಅಶೋಕ್ ಗೆಹ್ಲೋಟ್ ಕೂಡ ಅದೇ ಆತಂಕವನ್ನು ವ್ಯಕ್ತಪಡಿಸಿದ್ದು, ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ಪೂರಕ ಕ್ರಮಗಳನ್ನು ಕೈಗೊಳ್ಳಬೇಕಿದೆ. ಆ ದಿಸೆಯಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಗಳಿಗೆ ಸೂಕ್ತ ನಿರ್ದೇಶನ ಮತ್ತು ಹಣಕಾಸು ನೆರವು ಅಗತ್ಯವಿದೆ ಎಂದಿದ್ದಾರೆ.
ಈ ನಡುವೆ, ಕರೋನಾ ಸೋಂಕಿತರ ಸಂಖ್ಯೆ 8340ಕ್ಕೆ ತಲುಪಿದ್ದು, ಮೃತರ ಸಂಖ್ಯೆ 290ರ ಗಡಿ ದಾಟಿದೆ. ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಿದೆ. ಸೋಂಕಿತರ ಪ್ರಮಾಣ ಸ್ಫೋಟಕ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಹಾಗಾಗಿ ಸರ್ಕಾರದ ಮುಂದೆ ಸೋಂಕು ನಿಯಂತ್ರಣದ ಸವಾಲು ಬೃಹದಾಕಾರವಾಗಿ ನಿಂತಿದೆ. ಅದೇ ಹೊತ್ತಿಗೆ, ಸೋಂಕಿತರ ಪ್ರಮಾಣವನ್ನು ನಿಖರವಾಗಿ ಗುರುತಿಸುವ ನಿಟ್ಟಿನಲ್ಲಿ ವ್ಯಾಪಕ ಪರೀಕ್ಷೆಗಳನ್ನೂ ನಡೆಸಬೇಕಾಗಿದೆ. ಮುಂಬೈ ಮತ್ತು ದೆಹಲಿ ಮಹಾನಗರಗಳಲ್ಲಿ ಏರುತ್ತಿರುವ ಪ್ರಕರಣಗಳ ಪ್ರಮಾಣ ಆತಂಕ ಹುಟ್ಟಿಸಿದ್ದು, ಆ ನಗರಗಳಲ್ಲಿ ಸೋಂಕು ಈಗಾಗಲೇ ಸಮುದಾಯದ ಮಟ್ಟದಲ್ಲಿ ಹರಡುತ್ತಿರುವ ಅನುಮಾನಗಳು ಹುಟ್ಟಿವೆ.
ಈ ನಡುವೆ ದೇಶಾದ್ಯಂತ ರೋಗ ತೀವ್ರತೆಯ ಆಧಾರದ ಮೇಲೆ ಹಾಟ್ ಸ್ಪಾಟ್ ಗಳನ್ನು ಗುರುತಿಸಿದ್ದು, ಆ ಪ್ರದೇಶಗಳಲ್ಲಿ ಸೋಂಕು ಪತ್ತೆ ಪರೀಕ್ಷೆ ತೀವ್ರಗೊಳಿಸುವುದಾಗಿ ಹೇಳಲಾಗಿದೆ. ಆದರೆ, ವಾಸ್ತವವಾಗಿ ಈಗಲೂ ಪರೀಕ್ಷೆಗಳ ಪ್ರಮಾಣ, ವಾಸ್ತವವಾಗಿ ಪ್ರಯೋಗಾಲಯಗಳ ಸಾಮರ್ಥ್ಯದ ಅರ್ಧದಷ್ಟು ಮಾತ್ರ ಇದೆ ಎಂಬುದು ದೈನಂದಿನ ಪರೀಕ್ಷೆಗಳ ಪ್ರಮಾಣದಲ್ಲಿಯೇ ಮೇಲ್ನೋಟಕ್ಕೆ ಕಾಣಿಸುತ್ತಿರುವ ಸಂಗತಿ. ಹಾಗಾದರೆ, ಸರ್ಕಾರ ಪರೀಕ್ಷೆಗಳನ್ನು ವ್ಯಾಪಕವಾಗಿ ಮತ್ತು ವೇಗಗತಿಯಲ್ಲಿ ನಡೆಸಲು ಯಾಕೆ ವಿಳಂಬ ಮಾಡುತ್ತಿದೆ ಎಂಬ ಪ್ರಶ್ನೆ ಇದೆ.
ಜೊತೆಗೆ, ಬ್ಯಾಂಕ್ ಮತ್ತಿತರ ಹಣಕಾಸು ಸಂಸ್ಥೆಗಳ ಸಾಲದ ಕಂತು ಮುಂದಕ್ಕೆ ಹಾಕಿದ ಕೇಂದ್ರ ಸರ್ಕಾರದ ಘೋಷಣೆ ವಾಸ್ತವವಾಗಿ ಜಾರಿಗೆ ಬಂದಿಲ್ಲ. ಹಲವು ಬ್ಯಾಂಕುಗಳಲ್ಲಿ ಕಂತು ತುಂಬದೇ ಇದ್ದರೆ, ಮೂರು ತಿಂಗಳ ಬಳಿಕ ಹೆಚ್ಚುವರಿ ಬಡ್ಡಿ ಸಹಿತ ಕಂತು ಕಟ್ಟಬೇಕು ಎಂಬ ಷರತ್ತು ವಿಧಿಸಲಾಗುತ್ತಿದೆ. ಬ್ಯಾಂಕಿಂಗ್ ಕ್ಷೇತ್ರದ ಈ ರಂಗೋಲಿ ಕೆಳಗೆ ನುಸುಳುವ ತಂತ್ರಗಾರಿಕೆ ಕೃಷಿಕರನ್ನು ಬಿಟ್ಟಿಲ್ಲ. ಕೃಷಿ ಮತ್ತಿತರ ಸಾಲ ನೀಡಿರುವ ರಾಷ್ಟ್ರೀಕೃತ ಬ್ಯಾಂಕ್ ಮತ್ತು ಸಹಕಾರ ಸಂಘಗಳು ರೈತರಿಗೆ ಸಾಲ ಕಟ್ಟದೇ ಇದ್ದಲ್ಲಿ ಹೊಸ ಸಾಲ ನೀಡುವುದಿಲ್ಲ ಎನ್ನುವ ಮೂಲಕ ಮುಂಗಾರು ಹಂಗಾಮಿನಲ್ಲಿ ರೈತರಿಗೆ ಬಿತ್ತನೆಬೀಜ ಮತ್ತು ರಸಗೊಬ್ಬರ, ಕೀಟನಾಶಕ ಮತ್ತಿತರ ಒಳಸುರಿ ಖರೀದಿಗೆ ಅಡ್ಡಗಾಲು ಹಾಕಿವೆ. ಸಾಮಾನ್ಯವಾಗಿ ಬೆಳೆ ಸಾಲ ಪಾವತಿಗೆ ಮಾರ್ಚ್ 31 ಕೊನೆಯದಿನವಾಗಿರುತ್ತದೆ. ಆದರೆ ಈ ಬಾರಿ ಕರೋನಾ ಲಾಕ್ ಡೌನ್ ನಿಂದಾಗಿ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯೇ ಇಲ್ಲದಂತಾಗಿದೆ. ಹಾಗಾಗಿ ಹಲವು ರೈತರಿಗೆ ಬೆಳೆ ಸಾಲ ಮರುಪಾವತಿಗೆ ಹಣಕಾಸಿನ ಮುಗ್ಗಟ್ಟು ಎದುರಾಗಿದೆ. ಈ ನಡುವೆ ಕೇಂದ್ರ ಸರ್ಕಾರ ಸಾಲ ಮರುಪಾವತಿ ಅವಧಿ ಮುಂದೂಡುವುದಾಗಿ ಘೋಷಿಸಿದ ಹಿನ್ನೆಲೆಯಲ್ಲಿ ರೈತರು ಮುಂಗಾರು ಕೃಷಿ ಚಟುವಟಿಕೆಗೆ ಬ್ಯಾಂಕುಗಳ ಹೊಸ ಸಾಲ ನೀಡಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಆದರೆ, ಈಗ ಪರಿಸ್ಥಿತಿ ತಿರುವುಮುರುವಾಗಿದೆ.
ಒಂದು ಕಡೆ ಬ್ಯಾಂಕು ಮತ್ತು ಸಹಕಾರ ಸಂಸ್ಥೆಗಳು ಹಳೆ ಸಾಲ ಮರುಪಾವತಿ ಇಲ್ಲದೆ ಹೊಸ ಸಾಲ ನೀಡುವುದಿಲ್ಲ ಎನ್ನುತ್ತಿವೆ. ಮತ್ತೊಂದು ಕಡೆ ಬೇಸಿಗೆಯ ಜೋಳ, ಶುಂಠಿ, ಅಡಿಕೆ, ಭತ್ತ ಹಾಗೂ ವಿವಿಧ ಹಣ್ಣು-ತರಕಾರಿ ಬೆಳೆದ ರೈತರು ಕೊಳ್ಳುವವರಿಲ್ಲದೆ ಕೈಸುಟ್ಟುಕೊಂಡಿದ್ದಾರೆ. ಸರ್ಕಾರದ ವಾರ್ ರೂಂನಂತಹ ಪ್ರಯೋಗಗಳು ಸಣ್ಣ ಮತ್ತು ಹಳ್ಳಿಗಾಡಿನ ರೈತರ ನೆರವಿಗೆ ಬಂದಿಲ್ಲ. ಈ ನಡುವೆ ಮಳೆಯಾಗುತ್ತಿದೆ. ಕೃಷಿ ಚಟುವಟಿಕೆ ಆರಂಭಿಸಬೇಕಿದೆ. ರೈತರ ಬಳಿ ಕಾಸಿಲ್ಲ; ಬೀಜವಿಲ್ಲ, ಗೊಬ್ಬರವಿಲ್ಲ. ಜೊತೆಗೆ ಕೆಲಸಕ್ಕೆ ಕೂಲಿಯಾಳುಗಳು ಬರುತ್ತಿಲ್ಲ. ಅದರಲ್ಲೂ ಒಮ್ಮೆಗೂ 30-40 ಮಂದಿ ಕೂಲಿಯಾಳ ಅಗತ್ಯವಿರುವ ಶುಂಠಿ ಬಿತ್ತನೆ, ಮೆಕ್ಕೆಜೋಳ ಬಿತ್ತನೆಯಂತಹ ಕೆಲಸಕ್ಕೆ ದೂರ-ದೂರದ ಊರುಗಳಿಂದ ವಾಹನಗಳಲ್ಲಿ ಬಂದುಹೋಗುತ್ತಿದ್ದ ಗುತ್ತಿಗೆ ಕಾರ್ಮಿಕರು ಈಗ ಲಾಕ್ ಡೌನ್ ಕಾರಣಕ್ಕೆ ಬರುತ್ತಿಲ್ಲ. ಗುಂಪಾಗಿ ವಾಹನದಲ್ಲಿ ಸಂಚರಿಸಲು ಪೊಲೀಸರ ಭಯವಿದೆ. ಕರೋನಾದ ಭೀತಿ ಇದೆ. ಹಾಗಾಗಿ ಈ ಬಾರಿಯ ಮುಂಗಾರು ಬಿತ್ತನೆ ವಿಳಂಬವಾಗತೊಡಗಿದೆ.
ಇನ್ನು ಪಡಿತರ ವ್ಯವಸ್ಥೆ ಕೂಡ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಘೋಷಣೆಯಂತೆ ಜನರ ಹಸಿವು ನೀಗಿಸುವಲ್ಲಿ ಸಫಲವಾಗಿಲ್ಲ. ಸರ್ಕಾರಗಳು ಎರಡು ತಿಂಗಳ ಪಡಿತರ ಒಮ್ಮೆಗೇ ನೀಡುವುದಾಗಿ ಹೇಳಿದ್ದರೂ, ಹಲವು ಕಡೆ ಕೇವಲ ತಲಾ ಐದು ಕೆಜಿಯಂತೆ ಒಬ್ಬರಿಗೆ ಹತ್ತು ಕೆಜಿ ಅಕ್ಕಿ ಮಾತ್ರ ನೀಡಲಾಗುತ್ತಿದೆ ವಿನಃ, ಹೆಚ್ಚುವರಿ ಅಕ್ಕಿಯನ್ನಾಗಲೀ, ಅಥವಾ ಇತರೆ ಪಡಿತರ ಪದಾರ್ಥಗಳನ್ನಾಗಲೀ ವಿತರಿಸುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿವೆ. ಇನ್ನು ಜನಧನ್ ಮಹಿಳಾ ಖಾತೆದಾರರಿಗೆ ತಿಂಗಳಿಗೆ ಐದು ನೂರು ರೂಪಾಯಿ ನೀಡುವ ಯೋಜನೆ ಕೂಡ ಹಲವರ ಪಾಲಿಗೆ ಇನ್ನೂ ಕನಸಾಗಿಯೇ ಇದೆ.
ಇಷ್ಟೆಲ್ಲಾ ಅವಾಂತರಗಳ ನಡುವೆ, ಇದೀಗ ಮತ್ತೆ ಹದಿನೈದು ದಿನಗಳ ಕಾಲ ಲಾಕ್ ಡೌನ್ ಮುಂದುವರಿದಿದೆ. ಜನರ ಸಂಕಷ್ಟಗಳು ಇನ್ನಷ್ಟು ಉಲ್ಬಣಗೊಳ್ಳಲಿವೆ. ಜೀವ ಮತ್ತು ಬದುಕಿನ ನಡುವಿನ ಆಯ್ಕೆಯ ಪ್ರಶ್ನೆ ಸರ್ಕಾರದ್ದಾದರೆ, ಬದುಕೇ ಅಳಿವು-ಉಳಿವಿನ ಹೋರಾಟವಾಗಿರುವ ಜನಸಾಮಾನ್ಯರ ಪಾಲಿಗೆ ಇದು ಹಸಿವಿನ ಮತ್ತು ಅಸಹಾಯಕತೆಯ ದಿನಗಳನ್ನು ರೂಢಿಸುತ್ತಿದೆ. ಇಂತಹ ಹೊತ್ತಲ್ಲಿ ಸರ್ಕಾರ ಮತ್ತು ಜನರ ನಡುವೆ ಪರಿಣಾಮಕಾರಿ ಸಂಪರ್ಕಸೇತುವಾಗಿ ಕೆಲಸ ಮಾಡಬಹುದಾಗಿದ್ದ ಪಂಚಾಯ್ತಿ ವ್ಯವಸ್ಥೆ ಕೂಡ ಲಾಕ್ ಡೌನ್ ನಿಂದಾಗಿ ಗರಬಡಿದಂತಾಗಿದ್ದು, ಸೋಂಕಿನ ಭೀತಿ ಇಡೀ ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸಿದೆ. ಹಾಗಾಗಿ ಸರ್ಕಾರ ರಾಜಧಾನಿಯಲ್ಲಿ ಕುಳಿತು ಹೊರಡಿಸುವ ಆದೇಶಗಳು, ಸೂಚನೆಗಳು ಮತ್ತು ವ್ಯಕ್ತಪಡಿಸುವ ಜನಪರ ಕಾಳಜಿ ವಾಸ್ತವವಾಗಿ ಹಳ್ಳಿಯ ಮೂಲೆಗೆ ತಲುಪುತ್ತಲೇ ಇಲ್ಲ. ಇದೇ ಕಾರಣಕ್ಕೆ ಲಾಕ್ ಡೌನ್ ಘೋಷಣೆಗೆ ಮುಂಚೆ ಕನಿಷ್ಠ ತಯಾರಿಯಾದರೂ ಬೇಕಿತ್ತು ಎಂಬ ತಜ್ಞರ ಮಾತು ಈಗ ಜನರ ನಡುವೆಯೂ ಮಾರ್ದನಿಸತೊಡಗಿದೆ!