“ಭಾರತೀಯರಿಗೆ ಬಹಿರಂಗ ಪತ್ರ”
ಬಿಜೆಪಿ-ಆರೆಸ್ಸಸ್ನ ಪ್ರಚೋದಿತ ಅಪಪ್ರಚಾರದಲ್ಲಿ, ಪ್ರಭುತ್ವಕ್ಕೆ ಅಧೀನವಾದ ಮಾಧ್ಯಮಗಳ ಭರಾಟೆಯಲ್ಲಿ ಈ ಪತ್ರವು ಹೆಸರಿಲ್ಲದಂತೆ ಕೊಚ್ಚಿ ಹೋಗುತ್ತದೆಂದು ನಾನು ಬಲ್ಲೆ. ಆದರೂ ನನಗೆ ಮತ್ತೊಂದು ಅವಕಾಶ ದೊರಕುವ ಸಾಧ್ಯತೆ ಇಲ್ಲವಾದ್ದರಿಂದ ನಿಮ್ಮೊಂದಿಗೆ ಮಾತನಾಡಲು ಬಯಸುತ್ತೇನೆ.
‘ಗೋವಾ ಮ್ಯಾನೇಜ್ಮೆಂಟ್ ಸಂಸ್ಥೆ’ಯ ಪ್ರಾಧ್ಯಾಪಕರ ಗೃಹ ಸಂಕೀರ್ಣದಲ್ಲಿರುವ ನನ್ನ ಮನೆ ಮೇಲೆ ದಾಳಿ ಮಾಡಿದ ಆಗಸ್ಟ್ 2018 ದಿನದಿಂದ ನನ್ನ ಮಾತುಗಳನ್ನು ಸಂಪೂರ್ಣವಾಗಿ ತಿರುವುಮುರವುಗೊಳಿಸಿದರು. ಕೆಟ್ಟ ಕನಸಿನಲ್ಲಿಯೂ ನನಗಾಗುತ್ತಿರುವ ಈ ದಾಳಿಯನ್ನು ನಾನು ಊಹಿಸಿರಲಿಲ್ಲ. ನನ್ನ ಭಾಷಣಗಳನ್ನು ಆಯೋಜಿಸುತ್ತಿದ್ದ ಸಂಘಟಕರನ್ನು, ಅನೇಕ ವಿಶ್ವವಿದ್ಯಾಲಯಗಳನ್ನು ಭೇಟಿ ಮಾಡುತ್ತಿದ್ದ ಪೋಲೀಸರು ನನ್ನ ಕುರಿತು ವಿಚಾರಿಸುವುದರ ಮೂಲಕ ಅವರನ್ನು ಬೆದರಿಸುತ್ತಿದ್ದರು ಎಂಬುದು ನನಗೆ ಗೊತ್ತಿತ್ತು. ಆದರೂ ಸಹ ವರ್ಷಗಳ ಹಿಂದೆ ನಮ್ಮ ಕುಟುಂಬವನ್ನು ತೊರೆದು ಹೋಗಿದ್ದ ನನ್ನ ಸಹೋದರನನ್ನು ತಪ್ಪಾಗಿ ನಾನೆಂದು ಭಾವಿಸಿರಬಹುದೆಂದು ಅಂದುಕೊಂಡೆ. ನಾನು ಐಐಟಿ ಖರಗ್ಪುರದಲ್ಲಿ ಬೋಧಿಸುತ್ತಿರುವಾಗ ಬಿಎಸ್ಎನ್ಎಲ್ ಅಧಿಕಾರಿ ನನಗೆ ಕರೆ ಮಾಡಿ ’ನಿಮ್ಮ ಹಿತಚಿಂತಕ ಮತ್ತು ಅಭಿಮಾನಿ’ ಎಂದು ತನ್ನನ್ನು ಪರಿಚಯಿಸಿಕೊಳ್ಳುತ್ತಿದ್ದರು ಮತ್ತು ’ನನ್ನ ಮೊಬೈಲ್ನ್ನು ಕದ್ದಾಲಿಸುತ್ತಿದ್ದಾರೆ’ ಎಂದು ತಿಳಿಸಿದರು. ಆದರೆ ನಾನು ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದೆ ಆದರೆ ನನ್ನ ಮೊಬೈಲ್ನ ಸಿಮ್ನ್ನು ಬದಲಾಯಿಸಿಕೊಳ್ಳಲಿಲ್ಲ. ಈ ಹೇರಿಕೆಗಳಿಂದ ನಾನು ಕ್ಷೋಭೆಗೊಳಗಾದರೂ ಸಹ ಪೋಲೀಸರಿಗೆ ನಾನು ಸಾಮಾನ್ಯ ಮನುಷ್ಯನೆಂದು, ನನ್ನಲ್ಲಿ ಯಾವುದೆ ನ್ಯಾಯಬಾಹಿರ ಅಂಶಗಳಿಲ್ಲವೆಂದು ಮನವರಿಕೆ ಮಾಡಿಕೊಡಬಲ್ಲೆ ಎಂದು ಸ್ವತಃ ಸಮಾಧಾನಿಸಿಕೊಳ್ಳುತ್ತಿದ್ದೆ. ಸಾಮಾನ್ಯವಾಗಿ ಪೋಲೀಸರು ತಮ್ಮನ್ನು ಪ್ರಶ್ನಿಸುತ್ತಾರೆನ್ನುವ ಕಾರಣಕ್ಕೆ ಮಾನವ ಹಕ್ಕುಗಳ ಹೋರಾಟಗಾರರನ್ನು ದ್ವೇಷಿಸುತ್ತಿದ್ದರು. ನಾನು ಅದೆ ಬುಡಕಟ್ಟಿಗೆ ಸೇರಿದವನಾದ್ದರಿಂದ ನನ್ನನ್ನು ಸಹ ಅನುಮಾನಿಸುತ್ತಿದ್ದಾರೆಂದು ಭಾವಿಸಿದ್ದೆ. ಆದರೂ ಸಂಪೂರ್ಣ ನನ್ನ ಕೆಲಸದಲ್ಲಿ ಮುಳುಗಿರುವುದರಿಂದ ನಾನು ಆ ಮಾದರಿಯ ಹೋರಾಟದಲ್ಲಿ ತೊಡಗಿಕೊಂಡಿರುವುದಿಲ್ಲವೆಂದು ನಂಬುತ್ತಾರೆಂದು ನಾನು ಸಮಾಧಾನಪಡಿಸಿಕೊಂಡಿದ್ದೆ.
ಆದರೆ ಒಂದು ಮುಂಜಾನೆ ನಾನು ಕೆಲಸ ಮಾಡುವ ಸಂಸ್ಥೆಯ ನಿರ್ದೇಶಕರು ಫೋನ್ ಕರೆ ಮಾಡಿ ಕ್ಯಾಂಪಸ್ನ ಮೇಲೆ ದಾಳಿ ಮಾಡಿದ್ದಾರೆ ಮತ್ತು ನನ್ನ ಹುಡಕಾಟದಲ್ಲಿದ್ದಾರೆ ಎಂದು ತಿಳಿಸಿದರು. ಆಗ ನಾನು ಮಾತು ಹೊರಡದೆ ದಿಗ್ಮೂಢನಾಗಿದ್ದೆ. ಕೆಲ ಗಂಟೆಗಳ ಮುಂಚೆಯಷ್ಟೆ ಕಚೇರಿಯ ಕಾರ್ಯನಿಮಿತ್ತ ನಾನು ಮುಂಬೈಗೆ ಬಂದಿದ್ದೆ ಮತ್ತು ನನ್ನ ಮಡದಿ ನನಗಿಂತ ಕೆಲ ತಾಸು ಮುಂಚೆ ಬಂದಿದ್ದರು. ನಂತರ ಅದೆ ದಿನ ಮಾನವ ಹಕ್ಕುಗಳ ಹೋರಾಟಗಾರರ ಮನೆ ಮೇಲೆ ದಾಳಿ ಮಾಡಿ ಅವರ ಬಂಧನದ ಕುರಿತು ಗೊತ್ತಾಗಿ ನಾನು ಕೆಲ ಸೆಕೆಂಡುಗಳ ಅಂತರದಲ್ಲಿ ಪಾರಾಗಿದ್ದೇನೆಂದು ಮನವರಿಕೆಯಾಯಿತು. ಪೋಲಿಸರಿಗೆ ನಾನು ಎಲ್ಲಿದ್ದೇನೆಂದು ಗೊತ್ತಿರಲಿಲ್ಲ, ಗೊತ್ತಿದ್ದರೂ ನನ್ನನ್ನು ಬಂಧಿಸುತ್ತಿದ್ದರು. ಆದರೆ ಹಾಗೆ ಮಾಡಲಿಲ್ಲ, ಯಾಕೆಂದು ಅವರಿಗೆ ಮಾತ್ರ ಗೊತ್ತು.
ಅವರು ಭದ್ರತಾ ಸಿಬ್ಬಂದಿಯಿಂದ ನಕಲಿ ಚಾವಿಯನ್ನು ಬಲವಂತದಿಂದ ಕಸಿದುಕೊಂಡು ನನ್ನ ಮನೆಯನ್ನು ಪ್ರವೇಶಿಸಿದ್ದರು ಮತ್ತು ಅದನ್ನು ಚಿತ್ರೀಕರಿಸಿಕೊಂಡು ಮರಳಿ ಬೀಗ ಹಾಕಿದ್ದರು. ನಮ್ಮ ಸತ್ವಪರೀಕ್ಷೆ ಅಲ್ಲಿಂದ ಶುರುವಾಯಿತು. ನಮ್ಮ ನ್ಯಾಯವಾದಿಗಳ ಸಲಹೆಯ ಮೇರೆಗೆ ನನ್ನ ಮಡದಿ ವಿಮಾನದ ಮೂಲಕ ಗೋವಾಗೆ ತಲುಪಿದಳು ಮತ್ತು ಬಿಕ್ಹೋಲಿಮ್ ಪೋಲೀಸ್ ಠಾಣಿಯಲ್ಲಿ ’ನಮ್ಮ ಅನುಪಸ್ಥಿತಿಯಲ್ಲಿ ಮನೆಯನ್ನು ಪ್ರವೇಶಿಸಿದ್ದಾರೆ, ಅಲ್ಲಿ ಏನಾದರೂ ಬಚ್ಚಿಟ್ಟಿದ್ದರೆ ನಾವು ಜವಬ್ದಾರರಲ್ಲ ಎಂದು ದೂರು ಸಲ್ಲಿಸಿದಳು.
ಪೋಲೀಸರು ವಿಚಾರಣೆ ನಡೆಸಲು ನಮ್ಮ ಫೋನ್ ನಂಬರ್ಗಳನ್ನು ಸ್ವತಃ ಖುದ್ದಾಗಿ ನೀಡಿದಳು. ಅಚ್ಚರಿಯೆಂದರೆ ಮಾವೋವಾದಿ ಕಲ್ಪಿತ ಕತೆಯನ್ನು ತೇಲಿಬಿಟ್ಟ ನಂತರ ಪೋಲೀಸರು ಪತ್ರಿಕಾಗೋಷ್ಠಿ ನಡೆಸಲು ಪ್ರಾರಂಭಿಸಿದರು. ತಮಗೆ ಉಪಕರಿಸುತ್ತಿರುವ ಮಾದ್ಯಮಗಳನ್ನು ಬಳಸಿಕೊಂಡು ಸಾರ್ವಜನಿಕರಲ್ಲಿ ನನ್ನ ಮತ್ತು ಇತರ ಹೋರಾಟಗಾರರ ವಿರುದ್ದ ಪೂರ್ವಗ್ರಹ ಬಿತ್ತಲು ಪ್ರಾರಂಬಿಸಿದರು. 31, ಆಗಸ್ಟ್ 2018ರಂದು ಅಂತಹದೆ ಒಂದು ಪತ್ರಿಕಾ ಗೋಷ್ಠಿ ನಡೆಸಿ ಹಿಂದೆ ಬಂಧಿಸಿದ ಹೋರಾಟಗಾರರ ಕಂಪ್ಯುಟರ್ನಿಂದ ಉದ್ದೇಶಪೂರ್ವಕವಾಗಿ ವಶಪಡಿಸಿಕೊಂಡ ಪತ್ರಗಳನ್ನು ನನ್ನ ವಿರುದ್ದದ ಸಾಕ್ಷಿಗಳೆಂದು ಓದತೊಡಗಿದರು. ನಾನು ಶೈಕ್ಷಣಿಕ ಸಮಾವೇಶದಲ್ಲಿ ಭಾಗವಹಿಸಿದ್ದೇನೆ ಎನ್ನುವ ಮಾಹಿತಿಯನ್ನು ಅಲ್ಲಿ ವಿವರಿಸತೊಡಗಿದರು. ತಮಾಷೆಯೆಂದರೆ ಈ ವಿವರಗಳು ಪ್ಯಾರಿಸ್ ವಿಶ್ವವಿದ್ಯಾಲಯದ ಅಂತರ್ಜಾಲದಲ್ಲಿ ಸಾರ್ವಜನಿಕವಾಗಿ ಲಭ್ಯವಿತ್ತು. ಆರಂಭದಲ್ಲಿ ನಾನು ನಕ್ಕು ಸುಮ್ಮನಾದೆ, ಆದರೆ ನಂತರ ಈ ಅಧಿಕಾರಿಯ ವಿರುದ್ದ ಸಿವಿಲ್ ಮತ್ತು ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಲು ನಿರ್ದರಿಸಿದೆ. 5, ಸೆಪ್ಟೆಂಬರ್ 2018ರಂದು ನಿಯಮಾವಳಿಗಳ ಅನುಸಾರ ಮಹಾರಾಷ್ಟ್ರ ಸರಕಾರಕ್ಕೆ ಅನುಮತಿಗಾಗಿ ಪತ್ರವೊಂದನ್ನು ಸಲ್ಲಿಸಿದೆ. ಇಂದಿಗೂ ಸರಕಾರದಿಂದ ಯಾವುದೆ ಉತ್ತರ ಬಂದಿಲ್ಲ. ಆದರೆ ಹೈಕೋರ್ಟ ಆ ಪೋಲೀಸ್ ಅಧಿಕಾರಿಗಳಿಗೆ ಛೀಮಾರಿ ಹಾಕಿದ ನಂತರ ಪತ್ರಿಕಾಗೋಷ್ಠಿಗಳು ಸ್ಥಗಿತಗೊಂಡವು.
ಇಡೀ ಪ್ರಕರಣದಲ್ಲಿ ಆರೆಸ್ಸಸ್ನ ಪಾತ್ರವನ್ನು ಮುಚ್ಚಿಡಲು ಸಾಧ್ಯವಿಲ್ಲ. ನನ್ನ ಮರಾಠಿ ಸ್ನೇಹಿತರು ಆರೆಸ್ಸಸ್ನ ಕಾರ್ಯಕಾರಿಣಿ ಸದಸ್ಯರಲ್ಲೊಬ್ಬರಾದ ರಮೇಶ್ ಪತಂಗೆಯವರು ನನ್ನನ್ನು ಗುರಿಯಾಗಿಸಿಕೊಂಡು ಅದರ ಮುಖವಾಣಿ ‘ಪಾಂಚಜನ್ಯ’ದಲ್ಲಿ ಎಪ್ರಿಲ್ 2015ರಂದು ಒಂದು ಲೇಖನ ಬರೆದಿದ್ದರು. ಆ ಲೇಖನದಲ್ಲಿ ನಾನು ಮತ್ತು ಅರಂಧತಿ ರಾಯ್, ಗೈಲ್ ಒಂಬ್ವಿಟ್ ಮೂವರು ಅಂಬೇಡ್ಕರ್ವಾದಿ ಮಾಯಾವಿಗಳು ಎಂದು ಗುರುತಿಸಿದ್ದರು. ಹಿಂದೂ ಪುರಾಣದಲ್ಲಿ ಮಾಯಾವಿ ಎಂದರೆ ಹತ್ಯೆಗೆ ಒಳಗಾಗಬೇಕಾದ ರಾಕ್ಷಸ ಎಂದರ್ಥ.
ನಾನು ಸುಪ್ರಿಂ ಕೋರ್ಟಿನ ರಕ್ಷಣೆಯಲ್ಲಿದ್ದಾಗಲು ಸಹ ಪುಣೆ ಪೋಲೀಸರು ನನ್ನನ್ನು ಕಾನೂನುಬಾಹಿರವಾಗಿ ಬಂಧಿಸಿದಾಗ ಹಿಂದುತ್ವ ಗುಂಪಿನ ಸೈಬರ್ ಪಟಾಲಂ ಒಂದು ನನ್ನ ವಿಕಿಪೀಡೀಯ ಪುಟವನ್ನು ನಾಶಗೊಳಿಸಿತು. ಸಾರ್ವಜನಿಕವಾಗಿ ಎಲ್ಲರಿಗೂ ದೊರಕುತ್ತಿದ್ದ ಈ ಪುಟದ ಕುರಿತು ನನಗೆ ಮಾಹಿತಿಯೂ ಇರಲಿಲ್ಲ. ಮೊದಲು ಅವರು ಎಲ್ಲಾ ಮಾಹಿತಿಗಳನ್ನು ಅಳಿಸಿ ಹಾಕಿದರು ಮತ್ತು ‘ಅವರಿಗೆ ಮಾವೋವಾದಿ ಸಹೋದರನಿದ್ದಾರೆ … ಅವರ ಮನೆಯ ಮೇಲೆ ದಾಳಿ ಮಾಡಲಾಗಿದೆ … ಮಾವೋವಾದಿ ಜೊತೆಗೆ ಸಂಬಂಧವಿದ್ದುದರಿಂದ ಅವರನ್ನು ಬಂಧಿಸಲಾಗಿದೆ, ಇತ್ಯಾದಿ’ ಎಂದು ಬರೆದರು. ಕೆಲ ವಿದ್ಯಾರ್ಥಿಗಳು ‘ನಾವು ಮೂಲ ಪುಟವನ್ನು ಪುನಸ್ಥಾಪಿಸಿದೆವು, ಈಗಿನ ಪುಟವನ್ನು ತಿದ್ದಿದೆವು. ಆಗ ಕೂಡಲೆ ಈ ಪಟಾಲಂ ಮತ್ತೆ ಮರಳಿ ದಾಳಿ ಮಾಡಿ ನಾವು ದಾಖಲಿಸಿದ ಸತ್ಯವನ್ನು ಅಳಿಸಿ ಹಾಕಿ ಮತ್ತೆ ತಮ್ಮ ಸುಳ್ಳುಗಳನ್ನು ಸೇರಿಸಿದರು’ ಎಂದು ಹೇಳಿದರು. ಕಡೆಗೂ ವೀಕಿಪಿಡಿಯಾ ಮಧ್ಯಪ್ರವೇಶಿಸಿ ಆ ಹಿಂದುತ್ವ ಗುಂಪಿನ ನಕರಾತ್ಮಕ ಅಂಶಗಳೊಂದಿಗೆ ಆ ಪುಟವನ್ನು ಓರಣಗೊಳಿಸಿತು.
ಮಾಧ್ಯಮಗಳು ನನ್ನ ಮೇಲೆ ಗೆರಿಲ್ಲಾ ದಾಳಿ ನಡೆಸಿದವು, ನಕ್ಸಲ್ ಪರಿಣಿತರು ಎಂದೆಲ್ಲಾ ಸಂಭೋದಿಸುತ್ತ ಆರೆಸ್ಸಸ್ ಮೂಲಕ ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡಲಾಯಿತು. ಈ ದೃಶ್ಯ ಮಾದ್ಯಮಗಳ ವಿರುದ್ಧ ’ಪ್ರಸಾರಭಾರತಿ ಪ್ರತಿಷ್ಠಾನ’ (ಐಬಿಎಫ್) ಕ್ಕೆ ದೂರು ಸಲ್ಲಿಸಿದರೂ ಸಹ ನಮಗೆ ಯಾವುದೆ ಪ್ರತಿಕ್ರಿಯೆ ದೊರಕಲಿಲ್ಲ.
ಅಕ್ಟೋಬರ್ 2019ರಂದು ಸರಕಾರವು ನನ್ನ ಫೋನ್ನಲ್ಲಿ ಹಾನಿಕಾರಕ ಇಸ್ರೇಲ್ spyware ಇರಿಸಿದ್ದಾರೆ ಎನ್ನುವ ಗಾಳಿ ಸುದ್ದಿ ತೇಲಿ ಬಂತು. ಆಗ ಮಾಧ್ಯಮಗಳಲ್ಲಿ ಕೆಲ ಕ್ಷಣಗಳ ಕಾಲ ಇದು ಚರ್ಚಿತವಾಗದರೂ ಸಹ ಕೊನೆಗೆ ಈ ಗಂಭೀರ ವಿಷಯವೂ ತಣ್ಣಗಾಯಿತು. ನಾನೊಬ್ಬ ಸರಳ ಮನುಷ್ಯ. ಪ್ರಾಮಾಣಿಕವಾಗಿ ದುಡಿಯುತ್ತ ನನ್ನ ಬದುಕು ಸಾಗಿಸುತ್ತಿದ್ದೇನೆ. ನನ್ನ ಜ್ಞಾನದ ಬಲದಿಂದ ಬರೆಯುತ್ತ ಆ ಬರವಣಿಗೆಗಳ ಮೂಲಕ ಜನರಿಗೆ ಸಾಧ್ಯವಾದಷ್ಟು ಸಹಾಯ ಮಾಡುತ್ತಿದ್ದೇನೆ. ಕಾರ್ಪೋರೇಟ್ ಜಗತ್ತಿನಲ್ಲಿ ಕೆಲಸ ಮಾಡಿರುವ ನಾನು ಐದು ದಶಕಗಳ ಕಾಲ ಶಿಕ್ಷಕನಾಗಿ, ಮಾನವ ಹಕ್ಕುಗಳ ಹೋರಾಟಗಾರನಾಗಿ, ಸಾರ್ವಜನಿಕ ಬುದ್ದ್ಧಿಜೀವಿಯಾಗಿ ಈ ದೇಶಕ್ಕೆ ಕಳಂಕರಹಿತ ಸೇವೆ ಸಲ್ಲಿಸಿದ್ದೇನೆ. ಸುಮಾರು 30 ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದೇನೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಕಟಗೊಂಡ ನನ್ನ ನೂರಾರು ಲೇಖನಗಳು, ಅಂಕಣಗಳು, ಸಂದರ್ಶನಗಳು, ಭಾಷಣಗಳಲ್ಲಿ ಎಲ್ಲಿಯೂ ಹಿಂಸೆಯನ್ನು, ಭೂಗತ ಚಟುವಟಿಕೆಗಳನ್ನು ಬೆಂಬಲಿಸಿದ ಒಂದಕ್ಷರದ ಸಾಲುಗಳು ದೊರಕುವುದಿಲ್ಲ.
ನನ್ನ ಬದುಕಿನ ಇಳಿ ವಯಸ್ಸಿನಲ್ಲಿ ಯುಎಪಿಎ ಅಡಿಯಲ್ಲಿ ನನ್ನ ಮೇಲೆ ಘೋರವಾದ ಆರೋಪಗಳನ್ನು ಹೊರೆಸಿದ್ದಾರೆ. ಒಬ್ಬ ವ್ಯಕ್ತಿಯಾಗಿ ಸರಕಾರದ ಈ ಆವೇಶದ ಅಪಪ್ರಚಾರ ಮತ್ತು ಅದರ ಆಧೀನದಲ್ಲಿರುವ ಮಾಧ್ಯಮಗಳ ದಾಳಿಯನ್ನು ಎದುರಿಸಲು ನನಗೆ ಸಾಧ್ಯವಿಲ್ಲ. ಈ ಪ್ರಕರಣದ ವಿವರಗಳು ಅಂತರ್ಜಾಲದಲ್ಲಿ ಲಭ್ಯವಿದೆ, ಅದರ ಸುಳ್ಳುಗಳು, ಕಟ್ಟುಕತೆಗಳನ್ನು ಯಾರಾದರೂ ನೋಡಬಹುದು. AIFRTE ಅಂತರ್ಜಾಲದಲ್ಲಿ ಇದರ ವಿವರಗಳನ್ನು ಓದಬಹುದು.
ನಿಮ್ಮ ಓದಿಗಾಗಿ ಅದರ ಸಾರಾಂಶವನ್ನು ಇಲ್ಲಿ ಕೊಡುತ್ತೇನೆ : ಉದ್ದೇಶಪೂರ್ವಕವಾಗಿ ಬಂಧಿಸಿದ ಇಬ್ಬರ ಕಂಪ್ಯೂಟರ್ನಲ್ಲಿ ದೊರೆತ 13 ಪತ್ರಗಳ ಪೈಕಿ 5 ಪತ್ರಗಳನ್ನು ಆಧರಿಸಿ ಪೋಲೀಸರು ನನ್ನನ್ನು ದೋಶಾರೋಪಣೆಯಲ್ಲಿ ಸಿಲುಕಿಸಿದರು, ನನ್ನ ಬಳಿಯಿಂದ ಪೋಲೀಸರಿಗೆ ಏನೂ ದೊರಕಲಿಲ್ಲ, ಆ ಪತ್ರಗಳಲ್ಲಿ ಪ್ರಸ್ತಾಪವಾದ ‘ಆನಂದ’ ಎನ್ನುವ ಹೆಸರನ್ನು ಆಧರಿಸಿ ನನ್ನ ಮೇಲೆ ಆರೋಪ ಹೊರಸಿದ್ದಾರೆ, ಆದರೆ ಭಾರತದಲ್ಲಿ ‘ಆನಂದ’ ಎನ್ನುವ ಹೆಸರು ಸಾಮಾನ್ಯವಾಗಿ ಬಳಕೆಯಲ್ಲಿದೆ, ಆದರೂ ಸಹ ನನ್ನನ್ನು ಗುರಿ ಮಾಡಿದರು. ಈ ಪತ್ರಗಳಲ್ಲಿನ ವಿವರಗಳು ಮತ್ತು ಸ್ವರೂಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಪರಿಣಿತರು ಮತ್ತು ಸುಪ್ರೀಂ ಕೋರ್ಟ ಸ್ಪಷ್ಟವಾಗಿ ಹೇಳಿದರೂ ಸಹ ಹೆಸರಿನ ನಾನೊಬ್ಬ ಮಾತ್ರ ಈ ಪ್ರಕರಣದಲ್ಲಿ ಮುಖ್ಯ ಸಾಕ್ಷಿಯಾಗಿ ಬಲಿಯಾದೆ. ಅಲ್ಲಿನ ವಿವರಗಳು ಸರಳ ಅಪರಾದ ಎನ್ನುವ ಅಂಶಗಳನ್ನು ಸಹ ಒಳಗೊಂಡಿಲ್ಲ. ಆದರೆ ‘ಯುಎಪಿಎ’ (ಕಾನೂನುಬಾಹಿರ ಚಟುವಟಿಕೆಗಳ ನಿಗ್ರಹ ಕಾಯಿದೆ) ಎನ್ನುವ ಕರಾಳ ಶಾಸನವನ್ನು ಬಳಸಿಕೊಂಡು ಯಾವುದೆ ರಕ್ಷಣೆಯಿಲ್ಲದ ನನ್ನನ್ನು ಬಂಧಿಸಿ ಜೈಲಿಗೆ ತಳ್ಳುತ್ತಿದ್ದಾರೆ.
ನಿಮಗೆ ಅರ್ಥ ಮಾಡಿಸಲು ಈ ಪ್ರಕರಣವನ್ನು ಈ ರೀತಿಯಾಗಿ ನಿರೂಪಿಸಬಹುದು : ಇದ್ದಕ್ಕಿದ್ದಂತೆ ಯಾವುದೆ ವಾರೆಂಟ್ನ್ನು ತೋರಿಸದೆ ನಿಮ್ಮ ಮನೆಯ ಮೇಲೆ ಪೋಲಿಸರು ದಾಳಿ ಮಾಡುತ್ತಾರೆ, ಅಲ್ಲಿನ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ಹರಡುತ್ತಾರೆ. ಕಡೆಗೆ ನಿಮ್ಮನ್ನು ಬಂಧಿಸಿ ಪೊಲೀಸ್ ಲಾಕಪ್ನಲ್ಲಿ ತಳ್ಳುತ್ತಾರೆ. ನ್ಯಾಯಾಲಯದಲ್ಲಿ ಅವರು ‘ಅಅಅ ಎನ್ನುವ ಸ್ಥಳದಲ್ಲಿ (ಭಾರತದ ಯಾವುದೆ ಸ್ಥಳವನ್ನು ನೀವು ಬದಲಿಸಿ ಮತ್ತು ಸೇರಿಸಿ) ಒಬ್ಬ ಕಳ್ಳನನ್ನು (ಅಥವಾ ಇನ್ನಾವುದೋ ಆರೋಪ) ವಿಚಾರಿಸುತ್ತಿರುವಾಗ ಅಲ್ಲಿ ಬಬಬ ಎನ್ನುವ (ಬೇರಾವುದೆ ಹೆಸರನ್ನು ನೀವು ಬದಲಿಸಿ ಮತ್ತು ಸೇರಿಸಿ) ಕಂಪ್ಯುಟರ್ನಲ್ಲಿ ಅಥವಾ ಪೆನ್ ಡ್ರೈವ್ ದೊರಕುತ್ತದೆ. ಅದರಲ್ಲಿ ಕಕಕ ಎಂದು ಬರೆದಿರುವ ನಿಷೇದಿತ ಸಂಘಟನೆಯ ಪತ್ರ ದೊರಕುತ್ತದೆ. ಆ ಕಕಕ ಎನ್ನುವುದು ನೀನು ಎಂದು ಪೋಲಿಸರು ಆರೋಪಿಸುತ್ತಾರೆ. ನೀನು ಆಳವಾದ ಪಿತೂರಿ ನಡೆಸುತ್ತಿದ್ದೀಯ ಎಂದು ಆರೋಪಿಸುತ್ತಾರೆ. ಕೂಡಲೆ ಇಡೀ ಜಗತ್ತು ತಿರುವುಮುರುವಾಗಿ ನಿಂತಿರುವುದು ನಿನ್ನ ಗಮನಕ್ಕೆ ಬರುತ್ತದೆ. ನೀನು ಕೆಲಸ ಕಳೆದುಕೊಳ್ಳುತ್ತೀಯ. ಕುಟುಂಬ ಮನೆ ಕಳೆದುಕೊಳ್ಳುತ್ತದೆ, ನೀನು ಏನೂ ಮಾಡದ ವಿಷಯವನ್ನು ಮುಂದಿಟ್ಟುಕೊಂಡು ಮಾಧ್ಯಮಗಳು ನಿನ್ನ ಚಾರಿತ್ರ್ಯವಧೆ ಮಾಡುತ್ತವೆ. ಪೋಲೀಸರು ಮುಚ್ಚಿದ ಲಕೋಟೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತಾರೆ ಮತ್ತು ನ್ಯಾಯಮೂರ್ತಿಗಳಿಗೆ ಮನಗಾಣಿಸಲು ಈ ಮುಚ್ಚಿದ ಲಕೋಟೆಗಳು ಮೇಲ್ನೋಟಕ್ಕೆ ಕಂಡುಬರುವಂತೆ ನಿನ್ನ ವಿರುದ್ಧ ಆರೋಪಗಳು ಎಂದು ವಾದ ಮಂಡಿಸಿ ಮುಂದಿನ ವಿಚಾರಣೆಗಾಗಿ ನಿನ್ನನ್ನು ಕಸ್ಟಡಿಗೆ ತೆಗೆದುಕೊಳ್ಳಬೇಕೆಂದು ವಾದ ಮಂಡಿಸುತ್ತಾರೆ. ಆದರೆ ಈ ಆರೋಪಕ್ಕೆ ಯಾವುದೇ ಸಾಕ್ಷಾಧಾರಗಳನ್ನು ಒದಗಿಸಿಲ್ಲ ಎನ್ನುವ ಸತ್ಯ ಆಧರಿಸಿದ ವಾದವನ್ನು ಯಾರೂ ಪರಿಗಣಿಸುವುದಿಲ್ಲ ಮತ್ತು ನ್ಯಾಯಾಧೀಶರು ವಿಚಾರಣೆಯಲ್ಲಿ ಅದನ್ನು ಚರ್ಚಿಸೋಣ ಎನ್ನುತ್ತಾರೆ. ಕಸ್ಟಡಿಯ ವಿಚಾರಣೆಯ ನಂತರ ನಿನ್ನನ್ನು ಜೈಲಿಗೆ ತಳ್ಳಲಾಗುತ್ತದೆ. ನೀವು ಜಾಮೀನಿಗಾಗಿ ಅಂಗಲಾಚುತ್ತೀರಿ. ಆದರೆ ಜಾಮೀನು ಪಡೆಯಲು 4 ರಿಂದ 10 ವರ್ಷಗಳ ಸೆರೆಮನೆವಾಸದ ಅಗತ್ಯವಿದೆ ಎಂದು ಐತಿಹಾಸಿಕ ದಾಖಲೆಗಳನ್ನು ತೋರಿಸಿ ನ್ಯಾಯಾಲಯಗಳು ಅದನ್ನು ತಿರಸ್ಕರಿಸುತ್ತವೆ. ಮತ್ತು ಇದು ಯಾರಿಗಾದರೂ ಸಂಭವಿಸಬಹುದು. ಮುಗ್ಧಜನರ ಸಂವಿಧಾನಿಕ ಹಕ್ಕುಗಳನ್ನು, ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಈ ಮಾದರಿಯ ಕರಾಳ ಶಾಸನಗಳನ್ನು ‘ದೇಶದ’ ಹೆಸರಿನಲ್ಲಿ ಮಾನ್ಯ ಮಾಡುಲಾಗುತ್ತದೆ.
ಆಡಂಬರದ ದೇಶಭಕ್ತಿ ಮತ್ತು ರಾಷ್ಟ್ರೀಯತೆಯನ್ನು ರಾಜಕೀಯ ಕ್ಲಾಸುಗಳ ಮೂಲಕ ಆಯುಧೀಕರಣಗೊಳಿಸಲಾಗಿದೆ. ಮತ್ತು ಇದನ್ನು ಬಳಸಿಕೊಂಡು ಭಿನ್ನಮತೀಯ ದನಿಗಳನ್ನು ನಾಶ ಮಾಡುತ್ತಾರೆ ಮತ್ತು ಜನರನ್ನು ಧೃವೀಕರಿಸುತ್ತಾರೆ. ಸಮೂಹಸನ್ನಿಯ ಉನ್ಮಾದವು ಈವರೆಗಿನ ಎಲ್ಲಾ ನಂಬಿಕೆಗಳನ್ನು ತಲೆಕೆಳಗು ಮಾಡುತ್ತದೆ. ಇಲ್ಲಿ ದೇಶವನ್ನು ಧ್ವಂಸ ಮಾಡುತ್ತಿರುವವರು ದೇಶಭಕ್ತರಾಗುತ್ತಾರೆ ಮತ್ತು ನಿಸ್ವಾರ್ಥದಿಂದ ಸೇವೆ ಮಾಡುತ್ತಿರುವವರು ದೇಶದ್ರೋಹಿಗಳಾಗುತ್ತಾರೆ. ನನ್ನ ಭಾರತವು ಅಧಃಪತನದೆಡೆಗೆ ಸಾಗುತ್ತಿರುವುದನ್ನು ನೋಡುತ್ತಿರುವಾಗ ಒಂದು ತೆಳುವಾದ ಭರವಸೆಯೊಂದಿಗೆ ನಾನು ಇದನ್ನು ಬರೆಯುತ್ತಿದ್ದೇನೆ.
ಸರಿ, ‘ನಾನು ಎನ್ಐಎ ಕಸ್ಟಡಿಯಲ್ಲಿರುತ್ತೇನೆ, ನಿಮ್ಮೊಂದಿಗೆ ಮರಳಿ ಯಾವಾಗ ಮಾತನಾಡಬಲ್ಲೆ ಎಂದು ಗೊತ್ತಿಲ್ಲ, ಆದರೆ ನಿಮ್ಮ ಪಾಳಿ ಬರುವುದಕ್ಕಿಂತ ಮೊದಲು ನೀವು ಮಾತನಾಡಬೇಕೆಂದು ಕಳಕಳಿಯಿಂದ ಮನವಿ ಮಾಡುತ್ತೇನೆ’
-ಡಾ. ಆನಂದ ತೇಲ್ತುಂಬ್ಡೆ
(ಕನ್ನಡಕ್ಕೆ: ಬಿ. ಶ್ರೀಪಾದ ಭಟ್, ಕೃಪೆ: ನಾನುಗೌರಿ)