ಭಾರತೀಯರ ಪಾಲಿಗೆ ಕರೋನಾದಂತಹ ಭೀಕರ ಮಹಾಮಾರಿ ಕೂಡ ಕೋಮು ಧ್ರುವೀಕರಣದ ಅಸ್ತ್ರವಾಗಿದ್ದು, ಬಹುತೇಕ ಮುಖ್ಯವಾಹಿನಿ ಮಾಧ್ಯಮಗಳೇ ಅಂತಹ ಧ್ರುವೀಕರಣದ ಮುಂಚೂಣಿಯಲ್ಲಿ ನಿಂತು ಇನ್ನಿಲ್ಲದ ಯತ್ನ ಮಾಡಿದ್ದು ನೋಡಿದ್ದೇವೆ. ಅಂತಹ ಮತಾಂಧತೆಯ, ಧರ್ಮಾಂಧ ಪತ್ರಿಕೋದ್ಯಮ ಫಲ ನೀಡತೊಡಗಿದ್ದು, ಕಳೆದ ಎರಡು ವಾರ ದೇಶದ ಅಲ್ಲಲ್ಲಿ ಮುಸ್ಲಿಮರ ಮೇಲೆ ನಡೆದ ಗುಂಪು ಹಲ್ಲೆ ಪ್ರಕರಣಗಳ ಬಳಿಕ ಇದೀಗ ಭಾರತೀಯ ಕೋಮು ರಾಜಕಾರಣದ ಪ್ರಯೋಗಶಾಲೆ ಗುಜರಾತಿನ ಅಹಮದಾಬಾದಿನಲ್ಲಿ ಸರ್ಕಾರವೇ ಕೋಮು ಆಧಾರದ ಮೇಲೆ ಕೋವಿಡ್-19 ಸೋಂಕಿತರಿಗೆ ಪ್ರತ್ಯೇಕ ವಾರ್ಡುಗಳನ್ನು ಮಾಡಿದೆ!
ಅಲ್ಲಿಗೆ, ದೇಶದ ಮಾಧ್ಯಮದ ದಶಕಗಳಿಂದ ನಡೆಸಿಕೊಂಡುಬಂದಿದ್ದ ಮತಾಂಧ ಪತ್ರಿಕೋದ್ಯಮ ಒಂದು ಘಟ್ಟಕ್ಕೆ ತಲುಪಿದಂತಾಗಿದೆ. ಹಾಗೆ ನೋಡಿದರೆ, ಭಾರತೀಯ ಮಾಧ್ಯಮಗಳ ಇತ್ತೀಚಿನ ಈ ತಳ್ಳಿಹಾಕಲಾಗದ ಚಹರೆಯ ಚರಿತ್ರೆ ಆರಂಭವಾದದ್ದೇ ಇದೇ ಗುಜರಾತಿನ ಅಹಮದಾಬಾದ್, ಗಾಂಧಿನಗರಗಳಿಂದ ಎಂಬುದು ಗಮನಾರ್ಹ. ನಾಝಿಗಳ ಜರ್ಮಿನಿ ಹೊರತುಪಡಿಸಿ ಜಾಗತಿಕ ಮಟ್ಟದಲ್ಲೇ ಮತ್ತೊಂದು ಉದಾಹರಣೆ ಸಿಗದ ಪತ್ರಿಕೋದ್ಯಮದ ಆ ಪ್ರಕಾರಕ್ಕೆ ಇದೀಗ 18 ವರ್ಷಗಳ ಬಳಿಕ ಅದರ ಜನ್ಮಭೂಮಿಯಲ್ಲೇ ಅಧಿಕೃತವಾಗಿ ಸರ್ಕಾರಿ ಪ್ರತಿಫಲ ಸಿಕ್ಕಿದೆ. ಗುಜರಾತಿನ ಅಹಮದಾಬಾದ್ ನಗರದ ಸಿವಿಲ್ ಆಸ್ಪತ್ರೆಯಲ್ಲಿ, ಕೋವಿಡ್-19 ಸೋಂಕಿತರಿಗಾಗಿಯೇ ಪ್ರತ್ಯೇಕವಾಗಿ ವ್ಯವಸ್ಥೆ ಮಾಡಿದರುವ 1200 ಹಾಸಿಗೆಯ ವಾರ್ಡುಗಳನ್ನು ಹಿಂದೂ ಮತ್ತು ಮುಸ್ಲಿಮರಿಗೆ ಪ್ರತ್ಯೇಕ ಕೋಣೆಗಳನ್ನು ನಿಗದಿ ಮಾಡಲಾಗಿದೆ.
ಭಾನುವಾರ ರಾತ್ರಿ ಆವರೆಗೆ ಚಿಕಿತ್ಸೆಗೆ ದಾಖಲಾಗಿದ್ದ 28 ಮಂದಿ ಸೋಂಕಿತರನ್ನು ಅವರ ಧರ್ಮದ ಆಧಾರದ ಮೇಲೆ ಪಟ್ಟಿ ಮಾಡಿ ಹೆಸರು ಕೂಗಿ, ಪ್ರತ್ಯೇಕ ವಾರ್ಡಿಗೆ ವರ್ಗಾಯಿಸಲಾಯಿತು. ಆ ಬಳಿಕ ರಾಜ್ಯ ಸರ್ಕಾರದ ಸೂಚನೆಯ ಪ್ರಕಾರ ಹಾಗೆ ಮಾಡಲಾಗಿದೆ. ಅದರಲ್ಲಿ ತಮ್ಮದೇನೂ ಪಾತ್ರವಿಲ್ಲ ಎಂದು ಆಸ್ಪತ್ರೆಯ ಮೇಲ್ವಿಚಾರಕ ಡಾ ಗುಣವಂತ್ ಎಚ್ ರಾಥೋಡ್ ಸ್ಪಷ್ಟಪಡಿಸಿದ್ದಾರೆ ಎಂದು ‘ದ ಇಂಡಿಯನ್ ಎಕ್ಸ್ ಪ್ರೆಸ್’ ವರದಿ ಮಾಡಿದೆ. ಸಾಮಾನ್ಯವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಗಂಡಸರು ಮತ್ತು ಹೆಂಗಸರಿಗೆ ಮಾತ್ರ ಪ್ರತ್ಯೇಕ ವಾರ್ಡುಗಳನ್ನು ಮಾಡಲಾಗುತ್ತದೆ. ಆದರೆ, ನಾವು ಇಲ್ಲಿ ಸರ್ಕಾರದ ಸೂಚನೆ ಪ್ರಕಾರ ಮುಸ್ಲಿಮರು ಮತ್ತು ಹಿಂದೂಗಳಿಗೆ ಪ್ರತ್ಯೇಕ ವಾರ್ಡುಗಳನ್ನು ಮಾಡಿದ್ದೇವೆ ಎಂದು ಡಾ ರಾಥೋಡ್ ಹೇಳಿದ್ದರೂ, ಗುಜರಾತ್ ಆರೋಗ್ಯ ಸಚಿವ ನಿತಿನ್ ಪಟೇಲ್, ಹಾಗೆ ಧರ್ಮದ ಆಧಾರದ ಮೇಲೆ ಪ್ರತ್ಯೇಕಿಸುವ ಕುರಿತ ಯಾವುದೇ ಸೂಚನೆ ತಮ್ಮ ಗಮನಕ್ಕೆ ಬಂದಿಲ್ಲ ಎಂದಿದ್ದಾರೆ.
ಆದರೆ, ವಾಸ್ತವವಾಗಿ ವಾರ್ಡುಗಳಲ್ಲಿ ದಾಖಲಾಗಿರುವ ಸೋಂಕಿತ ರೋಗಿಗಳನ್ನು ಪತ್ರಿಕೆ ಮಾತನಾಡಿಸಿದ್ದು, ಅವರು ಕೂಡ ಭಾನುವಾರ ತಮ್ಮನ್ನು ಧರ್ಮವಾರು ಪ್ರತ್ಯೇಕಿಸಿದ ಬಗ್ಗೆ ಖಚಿತಪಡಿಸಿದ್ಧಾರೆ.
ಹಾಗೆ ನೋಡಿದರೆ, ಇದು ಒಂದು ಬಿಡಿ ಘಟನೆಯಷ್ಟೇ. ಕರೋನಾ ವಿಷಯದಲ್ಲಿ ಕಳೆದ ಹದಿನೈದು ದಿನಗಳಿಂದ ದೇಶದ ಮುಖ್ಯವಾಹಿನಿ(ಮುದ್ರಣ ಮತ್ತು ಟಿವಿ ಮಾಧ್ಯಮಗಳೆರಡೂ) ಮಾಧ್ಯಮಗಳು ನಡೆಸಿದ ನಿರಂತರ ಕೋಮುವಾದಿ ಅಜೆಂಡಾದ ಅಭಿಯಾನದ ಫಲವಾಗಿ ಕರ್ನಾಟಕದ ಬಾಗಲಕೋಟೆಯಂತಹ ಪಟ್ಟಣವೂ ಸೇರಿದಂತೆ ದೇಶದ ಮೂಲೆಮೂಲೆಯಲ್ಲಿ ಮುಸ್ಲಿಮರ ಮೇಲೆ ಗುಂಪು ಹಲ್ಲೆಗಳು ನಡೆದಿವೆ. ಹಲವು ಆಸ್ಪತ್ರೆಗಳಲ್ಲಿ ಇಂತಹ ಪ್ರತ್ಯೇಕಿಸುವಿಕೆ ನಡೆದಿರುವ ಶಂಕೆ ಇದೆ. ತಬ್ಲೀಖ್ ಜಮಾತೆಯಲ್ಲಿ ಪಾಲ್ಗೊಂಡವರಲ್ಲಿ ಹಲವರಿಗೆ ಸೋಂಕಿದೆ. ಅವರುಗಳು ಸರ್ಕಾರ ಮತ್ತು ಆಡಳಿತ ವ್ಯವಸ್ಥೆಯಿಂದ ಸತ್ಯವನ್ನು ಮುಚ್ಚಿಟ್ಟಿದ್ದರು. ನಂತರವೂ ಅವರು ಆರೋಗ್ಯ ಸಿಬ್ಬಂದಿಗೆ ಸಹಕರಿಸಲಿಲ್ಲ ಮತ್ತು ತಲೆತಪ್ಪಿಸಿಕೊಂಡು ಓಡಾಡುತ್ತಿದ್ದಾರೆ ಎಂಬ ಹಿನ್ನೆಲೆಯಲ್ಲಿ ಮಾಧ್ಯಮಗಳು, ಅಂತಹ ನಡವಳಿಕೆ ಒಂದು ಉದ್ದೇಶಪೂರ್ವಕ ಹುನ್ನಾರ, ಬಹುಸಂಖ್ಯಾತ ಹಿಂದೂಗಳ ವಿರುದ್ಧದ ಧರ್ಮಯುದ್ಧ ಜಿಹಾದಿಯ ಭಾಗವಾಗಿ ಅವರು ಹಾಗೆ ಮಾಡುತ್ತಿದ್ದಾರೆ. ಇದು ಕರೋನಾ ಜಿಹಾದ್ ಎಂದು ದೇಶದ ಬಹುಸಂಖ್ಯಾತರ ಮನಸಿನಲ್ಲಿ ಅದಾಗಲೇ ಬೇರೂರಿದ್ದು ಇಸ್ಲಮೋಫೋಬಿಯಾಕ್ಕೆ ಇನ್ನಷ್ಟು ತುಪ್ಪ ಸುರಿದವು.
ಅದೇ ಹೊತ್ತಿಗೆ ಕರೋನಾಕ್ಕೂ, ತಬ್ಲೀಖ್ ಗೂ ಸಂಬಂಧವೇ ಪಡದ ಯಾವುಯಾವುದೋ ವೀಡಿಯೋ ಕ್ಲಿಪಿಂಗ್, ಫೋಟೋಗಳನ್ನು ಹಿಂದೂಗಳ ವಿರುದ್ಧದ ಕರೋನಾ ಜಿಹಾದಿಯ ಪ್ರಯತ್ನಗಳು ಎಂದು ಟಿವಿ ಮಾಧ್ಯಮಗಳಲ್ಲಿ ಬಿಂಬಿಸಲಾಯಿತು. ಅದೇ ಟಿವಿ ವರದಿಗಳನ್ನೇ ಟ್ರೋಲ್ ಮಾಡಿ ದೇಶವ್ಯಾಪಿ ಮುಸ್ಲಿಂ ದ್ವೇಷ ಹಬ್ಬಿಸಲಾಯಿತು. ಕೊನೆಗೆ ಕರ್ನಾಟಕದಂತಹ ಸರ್ಕಾರಗಳು, ಸರ್ಕಾರಿ ಆದೇಶ ಹೊರಡಿಸುವ ಮೂಲಕ ಅಂತಹ ಸುಳ್ಳು ಮತ್ತು ದ್ವೇಷದ ಸುದ್ದಿಗಳನ್ನು ತಡೆಯುವ ಪ್ರಯತ್ನ ಮಾಡಿದರೂ, ಅಷ್ಟರಲ್ಲಿ ಆಗಬೇಕಾಗಿದ್ದ ಅನಾಹುತ ಆಗಿಹೋಗಿತ್ತು.
ಸದ್ಯ ಕರ್ನಾಟಕವೂ ಸೇರಿದಂತೆ ದೇಶದ ಮೂಲೆಮೂಲೆಯಲ್ಲಿ ಮುಸ್ಲಿಮರೊಂದಿಗೆ ಜನ ವ್ಯಾಪಾರ- ವಹಿವಾಟು ಮಾಡಲು ಹಿಂಜರಿಯುವ ವಾತಾವರಣ ನಿರ್ಮಾಣವಾಗಿಬಿಟ್ಟಿದೆ. ಲಾಕ್ ಡೌನ್ ನಡುವೆಯೂ ಸರ್ಕಾರವೇ ವ್ಯವಸ್ಥೆ ಮಾಡಿರುವ ಬೀದಿ-ಬೀದಿ ಹಣ್ಣು- ತರಕಾರಿ ಮಾರುವವರ ಧರ್ಮ ನೋಡಿ ಖರೀದಿಸುವ ಮಟ್ಟಿಗೆ, ಮುಸ್ಲಿಮ್ ವ್ಯಾಪಾರಿಗಳು ತಮ್ಮ ಊರಿಗೆ ಪ್ರವೇಶಿಸಬಾರದು ಎಂದು ಹಳ್ಳಿಗಳ ಪ್ರವೇಶದಲ್ಲಿ ಬೋರ್ಡು ಹಾಕುವ ಮಟ್ಟಿಗೆ ಪರಿಸ್ಥಿತಿ ಬಂದು ನಿಂತಿದೆ. ಅಷ್ಟರಮಟ್ಟಿಗೆ ಮಾಧ್ಯಮಗಳ ಮತಾಂಧ ಪತ್ರಿಕೋದ್ಯಮದ ಫಲಶೃತಿ ಬೀದಿಬೀದಿಗಳಲ್ಲೂ ಕಣ್ಣಿಗೆ ರಾಚತೊಡಗಿದೆ. ಕರ್ನಾಟಕದ ಕೆಲವು ಊರುಗಳಲ್ಲಿ ಹಣ್ಣು-ತರಕಾರಿ ಮಾರಲು ಬಂದ ಮುಸ್ಲಿಮರನ್ನು ಹೊಡೆದು, ಗುಂಪು ಹಲ್ಲೆ ನಡೆಸಿ ಹೊರಹಟ್ಟಿದ ಘಟನೆಗಳೂ ನಡೆದಿವೆ.
ಈ ನಡುವೆ, ತಬ್ಲಿಖ್ ಜಮಾತೆಯಲ್ಲಿ ಭಾಗವಹಿಸಿದವರಲ್ಲಿ ಕೆಲವರು ಕರೋನಾ ಚಿಕಿತ್ಸೆಯ ಪ್ರತ್ಯೇಕಿಸುವ ಮತ್ತು ಸುದೀರ್ಘ ಚಿಕಿತ್ಸೆಯ ಕಾರಣಕ್ಕೋ ಅಥವಾ ಸಾಮಾಜಿಕ ನಿಂದನೆಯ ಕಾರಣಕ್ಕೋ, ತಾವು ಅಲ್ಲಿಗೆ ಹೋದ ಮಾಹಿತಿಯನ್ನು ಮುಚ್ಚಿಡುತ್ತಿರುವುದೇ ಅಲ್ಲದೆ; ವೈದ್ಯಕೀಯ ಸಿಬ್ಬಂದಿಗೆ ಸಹಕಾರ ನೀಡದೆ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣಗಳೂ ವರದಿಯಾಗುತ್ತಿವೆ. ಬುಧವಾರ ಕೂಡ ಉತ್ತರಪ್ರದೇಶದ ಮೊರಾದಾಬಾದ್ ನಲ್ಲಿ ಇಂತಹದ್ದೇ ಘಟನೆಯಲ್ಲಿ ವೈದ್ಯರು ಮತ್ತು ಇತರ ಸಿಬ್ಬಂದಿ ಗಾಯಗೊಂಡಿರುವ ವರದಿಗಳಿವೆ. ತಬ್ಲೀಖ್ ಜಮಾತೆಯಲ್ಲಿ ಪಾಲ್ಗೊಂಡ ವ್ಯಕ್ತಿಯೊಬ್ಬ ಕರೋನಾದಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಆತನ ಮನೆಮಂದಿಯನ್ನು ಪ್ರತ್ಯೇಕಿಸಿ ಚಿಕಿತ್ಸೆ ನೀಡಲು ಯತ್ನಿಸಿದ ವೈದ್ಯಕೀಯ ಸಿಬ್ಬಂದಿ ಮತ್ತು ಪೊಲೀಸರ ಮೇಲೆ ಗುಂಪು ಕಲ್ಲುತೂರಿ ಹಲ್ಲೆ ನಡೆಸಿದೆ. ಇದು ಮತ್ತೊಂದು ವಿಪರೀತದ ಹೇಯ ಕೃತ್ಯ.
ಬಹುಶಃ ತಬ್ಲೀಖ್ ಘಟನೆಯನ್ನು ಮುಂದಿಟ್ಟುಕೊಂಡು ಇಡೀ ಮಾಧ್ಯಮ ಮುಸ್ಲಿಮರ ವಿರುದ್ಧದ ವ್ಯವಸ್ಥಿತ ಅಪಪ್ರಚಾರದ ಜಿದಾದಿಗೆ ಇಳಿಯದೇ ಹೋಗಿದ್ದರೆ, ಬಹುಸಂಖ್ಯಾತರನ್ನು ಎತ್ತಿಕಟ್ಟದೇ ಹೋಗಿದ್ದರೆ, ಪರಿಸ್ಥಿತಿ ಇಷ್ಟು ವಿಕೋಪಕ್ಕೆ ಹೋಗುತ್ತಿರಲಿಲ್ಲವೇನೋ. ಆದರೆ, ಧರ್ಮಾಂಧತೆಯ ವಿಷಬೀಜ ಬಿತ್ತಿದ ಬಳಿಕ ಅದು ಈಗ ಕೊಯಿಲಿಗೆ ಬಂದಿದೆ. ಇಡೀ ದೇಶ ಅದಕ್ಕಾಗಿ ಬೆಲೆ ತೆರಬೇಕಾಗಿದೆ. ಒಂದು ಕಡೆ ಜನರ ಬಲಿಯಾಗುತ್ತಿದ್ದರೆ, ಮತ್ತೊಂದು ಕಡೆ ದಶಕಗಳ ಕೋಮು ಧ್ರುವೀಕರಣದ ಬಳಿಕವೂ, ಮತೀಯ ದ್ವೇಷದ ರಾಜಕಾರಣದ ಬಳಿಕವೂ ಅಷ್ಟಿಷ್ಟು ಉಳಿದಿದ್ದ ಸಾಮರಸ್ಯ ಕೂಡ ಬಲಿಯಾಗುತ್ತಿದೆ. ಬಹುತ್ವದ ಭಾರತ ಎಂಬ ವೈವಿಧ್ಯತೆಯಲ್ಲಿ ಏಕತೆಯ ಹೆಗ್ಗಳಿಕೆ ಮಣ್ಣುಪಾಲಾಗುತ್ತಿದೆ. ಅಂತಹ ಎಲ್ಲರದ ಶ್ರೇಯಸ್ಸು ಸಲ್ಲಬೇಕಿರುವುದು ಮುಖ್ಯವಾಹಿನಿ ಮಾಧ್ಯಮಗಳು ಮತ್ತು ಅವುಗಳನ್ನೇ ಆದರ್ಶವಾಗಿ ಪರಿಗಣಿಸಿ ಟ್ರೋಲ್ ಮಾಡುವ ದೇಶದ ಟ್ರೋಲ್ ಪಡೆಗಳಿಗೆ.
ಟಿಆರ್ ಪಿ ಮತ್ತು ಜಾಹೀರಾತು ಗಳಿಕೆಯ ಜೊತೆಗೆ ಆಡಳಿತ ಪಕ್ಷ ಮತ್ತು ವ್ಯವಸ್ಥೆಯ ಕೃಪೆ, ಕೊಡುಗೆಗಳ ಲಾಭ ಮಾಧ್ಯಮಗಳಿಗಾದರೆ, ಟ್ರೋಲ್ ಪಡೆಗಳಿಗೆ ಮಾಸಿಕ ವೇತನ ಮತ್ತು ಪ್ರೋತ್ಸಾಹಧನದ ಲಾಭ. ಹಾಗಾಗಿ ಮತಾಂಧ ಪತ್ರಿಕೋದ್ಯಮ ಮತ್ತು ಟ್ರೋಲ್ ಉದ್ದೇಶ ಕೇವಲ ಮತೀಯ ಹೆಗ್ಗಳಿಕೆ ಮಾತ್ರವಲ್ಲ; ಹಣಕಾಸಿನ ಲಾಭ ಕೂಡ! ಹಣವಿಲ್ಲದೆ, ಲಾಭವಿಲ್ಲದೆ ಏನನ್ನೂ ಮಾಡದ ಬಹುತೇಕ ಮಾಧ್ಯಮಗಳ ಲೆಕ್ಕಾಚಾರ ಈ ವಿಷಯದಲ್ಲೂ ಕೆಲಸ ಮಾಡುತ್ತಿದೆ ಎಂಬುದು ಅಂತಾರಾಷ್ಟ್ರೀಯ ನಿರಾಶ್ರಿತರ ಹಕ್ಕುಗಳ ಪ್ರವರ್ತಕಿ ಸುಚಿತ್ರಾ ವಿಜಯನ್ ಅಭಿಪ್ರಾಯ.
ಭಾರತೀಯ ಮುಖ್ಯವಾಹಿನಿ ಮಾಧ್ಯಮಗಳ ಈ ಮತಾಂಧ ಪತ್ರಿಕೋದ್ಯಮ ಮತ್ತು ಅದರ ಪರಿಣಾಮಗಳ ಕುರಿತ ಸುಚಿತ್ರಾ ವಿಜಯನ್ ಟ್ವಿಟರ್ ನಲ್ಲಿ ವಿವರವಾಗಿ ಮಾತನಾಡಿದ್ದು, ಆ ಟ್ವೀಟ್ ಲಿಂಕ್ ಇಲ್ಲಿದೆ.
https://twitter.com/suchitrav/status/1249090556741013504?s=20