ಕೊರೋನಾ ಸೋಂಕು ನಿಯಂತ್ರಣದ ವಿಷಯದಲ್ಲಿ ಕಳೆದ ಮೂರ್ನಾಲ್ಕು ದಿನಗಳವರೆಗೆ ಸಾಕಷ್ಟು ಯಶಸ್ಸು ಸಾಧಿಸಿದೆ ಎನ್ನಲಾಗುತ್ತಿದ್ದ ರಾಜ್ಯದಲ್ಲಿ, ಇದೀಗ ದಿಢೀರನೇ ಸೋಂಕಿತರ ಪ್ರಮಾಣ ಏರಿಕೆಯಾಗುತ್ತಿರುವುದು ಆತಂಕ ಸೃಷ್ಟಿಸಿದೆ. ಹಾಗಾಗಿ ಸಹಜವಾಗೇ ಲಾಕ್ ಡೌನ್ ನಿಯಮಗಳನ್ನು ಇನ್ನಷ್ಟು ಬಿಗಿಮಾಡಲಾಗುತ್ತಿದೆ.
ರಾಜ್ಯದಲ್ಲಿ ಕಳೆದ ಮೂರು ದಿನಗಳಲ್ಲಿ ಬರೋಬ್ಬರಿ ನೂರು ಹೊಸ ಪ್ರಕರಣಗಳು ಪತ್ತೆಯಾಗಿದ್ದು, ದಿಢೀರ್ ಏರಿಕೆಯ ಹಿಂದೆ ಲಾಕ್ ಡೌನ್ ಹೊರತಾಗಿಯೂ ಜನ ಅನಾವಶ್ಯಕವಾಗಿ ಓಡಾಡುತ್ತಿರುವುದು, ಮೈಸೂರಿನ ನಂಜನಗೂಡಿನ ಕಾರ್ಮಿಕರಿಂದ ಹರಡುತ್ತಿರುವ ಸೋಂಕಿಗೆ ತಡೆಯೊಡ್ಡುವಲ್ಲಿ ಆಗಿರುವ ವೈಫಲ್ಯ ಕಾರಣವೆನ್ನಲಾಗುತ್ತಿದೆ. ಇದೀಗ ಒಟ್ಟಾರೆ ಪ್ರಕರಣಗಳ ಸಂಖ್ಯೆ 384ಕ್ಕೆ ಏರಿದೆ. ಜೊತೆಗೆ ರಾಜ್ಯದಾದ್ಯಂತ ವೈರಾಣು ಪರೀಕ್ಷೆಯ ಪ್ರಮಾಣವನ್ನು ಹೆಚ್ಚಿಸಲಾಗಿದ್ದು, ಹೆಚ್ಚು ಪರೀಕ್ಷೆಗಳು ನಡೆದಂತೆಲ್ಲಾ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ. ಹಾಗಾಗಿ ಈ ಹೆಚ್ಚಳದಿಂದ ಆತಂಕಗೊಳ್ಳುವ ಬದಲಾಗಿ, ಈಗಲಾದರೂ ಸರ್ಕಾರ ಕ್ಲಸ್ಟರ್ ಮಟ್ಟದಲ್ಲಿ ವ್ಯಾಪಕ ಪರೀಕ್ಷೆಗಳನ್ನು ಮಾಡಬೇಕು ಮತ್ತು ರಾಪಿಡ್ ಪರೀಕ್ಷೆಗಳ ಮೂಲಕ ಸೋಂಕಿತರನ್ನು ಪತ್ತೆ ಮಾಡಿ, ಅವರ ಸಂಪರ್ಕಿತರನ್ನು ಗುರುತಿಸಿ ಪ್ರತ್ಯೇಕಿಸುವ ಕಾರ್ಯ ಸಮರೋಪಾದಿಯಲ್ಲಿ ನಡೆಸಬೇಕು. ಅದೊಂದೇ ರೋಗವನ್ನು ನಿಜವಾಗಿಯೂ ಹತೋಟಿಗೆ ತರಲು ಇರುವ ಮಾರ್ಗ ಎಂಬ ಅಭಿಪ್ರಾಯಗಳೂ ಕೇಳಿಬರುತ್ತಿವೆ. ದಕ್ಷಿಣ ಭಾರತದ ರಾಜ್ಯಗಳ ಪೈಕಿ ಕರ್ನಾಟಕದಲ್ಲಿಯೇ ಅತಿ ಕಡಿಮೆ ಪ್ರಮಾಣದಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ವಾದ ಹೆಚ್ಚು ಮಹತ್ವ ಪಡೆದುಕೊಂಡಿದೆ.
ದಕ್ಷಿಣ ರಾಜ್ಯಗಳ ಪೈಕಿ, ಪ್ರತಿ ಹತ್ತು ಲಕ್ಷ ಜನರಿಗೆ 183 ಮಂದಿಗೆ ಪರೀಕ್ಷೆ ನಡೆಸುತ್ತಿದ್ದರೆ, ಕೇರಳದಲ್ಲಿ ಆ ಪ್ರಮಾಣ 484, ತಮಿಳುನಾಡಿನಲ್ಲಿ 285 ಮತ್ತು ಆಂಧ್ರಪ್ರದೇಶದಲ್ಲಿ 218 ಪ್ರಮಾಣದಲ್ಲಿದೆ. ಕಡಿಮೆ ಪರೀಕ್ಷೆಗಳ ಕಾರಣದಿಂದಾಗಿಯೇ ಕರ್ನಾಟಕದಲ್ಲಿ ಈವರೆಗೆ ಇತರ ರಾಜ್ಯಗಳಿಗಿಂತ ಕಡಿಮೆ ಪ್ರಕರಣಗಳು ಪತ್ತೆಯಾಗಿವೆ. ಹಾಗಾಗಿ ಕಳೆದ ಮೂರ್ನಾಲ್ಕು ದಿನಗಳಿಂದ ಸರ್ಕಾರ ದಿನವಹಿ ಪರೀಕ್ಷೆಗಳ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದಂತೆ ಸೋಂಕಿತರ ಪ್ರಮಾಣ ಕೂಡ ಏರಿಕೆಯಾಗುತ್ತಿದೆ. ಹಾಗಾಗಿ ಈ ಬದಲಾವಣೆ ಈವರೆಗೆ ಮೈಮರತು ಮೈಮೇಲೆ ಎಳೆದುಕೊಂಡಿರುವ ಅಪಾಯವನ್ನು ಬೆತ್ತಲು ಮಾಡಿದೆ. ಜೊತೆಗೆ ಕನಿಷ್ಠ ಇನ್ನಾದರೂ ವ್ಯಾಪಕ ಪ್ರಮಾಣದಲ್ಲಿ ರಾಪಿಡ್ ಟೆಸ್ಟ್ ನಡೆಸಬೇಕಾದ ಜರೂರಿನ ಬಗ್ಗೆ ಬೊಟ್ಟು ಮಾಡಿದೆ.
ಸದ್ಯಕ್ಕೆ ರಾಜ್ಯದಲ್ಲಿ ದಿನವೊಂದಕ್ಕೆ 1500 ಪರೀಕ್ಷೆಗಳನ್ನು ನಡೆಸುವ ಸಾಮರ್ಥ್ಯವಿದ್ದು, ಖಾಸಗಿ ಮತ್ತು ಸರ್ಕಾರಿ ಕೋವಿಡ್-19 ಪರೀಕ್ಷಾ ಪ್ರಯೋಗಾಲಯಗಳನ್ನು ಸೇರಿ ಒಟ್ಟು 15 ಲ್ಯಾಬ್ ಗಳಲ್ಲಿ ಪರೀಕ್ಷೆಗೆ ಅವಕಾಶ ನೀಡಲಾಗಿದೆ. ಆದರೆ, ವಾಸ್ತವವಾಗಿ ನಿತ್ಯ ರಾಜ್ಯದಾದ್ಯಂತ ಸಂಗ್ರಹಿಸಲಾಗುತ್ತಿರುವ ಒಟ್ಟಾರೆ ಮಾದರಿಗಳ ಪೈಕಿ ಶೇ.50ರಷ್ಟನ್ನು ಮಾತ್ರ ಪರೀಕ್ಷಿಸಲು ಸಾಧ್ಯವಾಗುತ್ತಿದೆ. ಸಾಮಾನ್ಯ ಪರೀಕ್ಷೆಯ ಟೆಸ್ಟಿಂಗ್ ಕಿಟ್ ಗಳ ಕೊರತೆ ಇಲ್ಲದೆ ಹೋದರೂ, ಲ್ಯಾಬ್ ಸಿಬ್ಬಂದಿ ಮೂರು ಶಿಫ್ಟ್ ನಲ್ಲಿ ನಿರಂತರ ಕೆಲಸ ಮಾಡುತ್ತಿದ್ದರೂ ದಿನವೊಂದಕ್ಕೆ 1500ಕ್ಕಿಂತ ಹೆಚ್ಚು ಪರೀಕ್ಷೆ ನಡೆಸುವುದು ಸಾಧ್ಯವಾಗುತ್ತಿಲ್ಲ. ಹಾಗಾಗಿ ಹೆಚ್ಚುವರಿ ಲ್ಯಾಬ್ ಆರಂಭಸಲು ಸರ್ಕಾರ ಮುಂದಾಗಿದೆ ಎಂದು ಹೇಳಲಾಗಿದೆ.
ಆದರೆ, ರೋಗಿಗಳೇ ಖುದ್ದು ರೋಗ ಲಕ್ಷಣ ಹೇಳಿಕೊಂಡು ಪರೀಕ್ಷೆಗೊಳಗಾಗುವುದು ಮತ್ತು ಹಾಗೇ ಪರೀಕ್ಷೆಗೊಳಗಾಗಿ ಸೋಂಕು ದೃಢಪಟ್ಟವರ ಸಂಪರ್ಕಕ್ಕೆ ಬಂದವರನ್ನು ಪತ್ತೆ ಮಾಡಿ ಸರ್ಕಾರ ಪರೀಕ್ಷೆ ನಡೆಸುವುದು ಸದ್ಯಕ್ಕೆ ಪಾಲಿಸುತ್ತಿರುವ ಪರೀಕ್ಷಾ ವಿಧಾನ. ಆದರೆ, ರಾಜ್ಯದಲ್ಲಿ ನಿಜವಾಗಿಯೂ ಈ ಹಂತದಲ್ಲಿ ಕೂಡಲೇ ಅನುಸರಿಸಬೇಕಾದುದು ಕ್ಲಸ್ಟರ್ ಮಟ್ಟದಲ್ಲಿ ಸಾಮೂಹಿಕ ಪರೀಕ್ಷೆಯ ವಿಧಾನ. ಅಂದರೆ ರಾಪಿಡ್ ಪರೀಕ್ಷೆಯನ್ನು ಆದಷ್ಟು ಶೀಘ್ರವೇ ಕೈಗೊಳ್ಳದೇ ಹೋದರೆ ಅನಾಹುತ ಕಾದಿದೆ ಎನ್ನಲಾಗುತ್ತಿದೆ. ಆದರೆ, ರಾಜ್ಯದಲ್ಲಿ ರಾಪಿಡ್ ಪರೀಕ್ಷೆಗೆ ಚಾಲನೆ ನೀಡಲು ರಾಪಿಡ್ ಟೆಸ್ಟ್ ಕಿಟ್ ಗಳ ಲಭ್ಯತೆ ಇಲ್ಲ. ಸರ್ಕಾರ ಈ ವಿಷಯದಲ್ಲಿ ಮುಂಜಾಗ್ರತೆ ವಹಿಸಿ ಕೇಂದ್ರ ಸರ್ಕಾರಕ್ಕೆ ಮುಂಚೆಯೇ ಒಂದು ಲಕ್ಷ ರಾಪಿಡ್ ಪರೀಕ್ಷಾ ಕಿಟ್ ಆಮದು ಮಾಡಿಕೊಳ್ಳಲು ಚೀನಾಕ್ಕೆ ಖರೀದಿ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಚೀನಾದಿಂದ ಹೊರಟ ಮೊದಲ ಸುತ್ತಿನ ರಾಪಿಡ್ ಕಿಟ್ ಸರಕು ಗುರುವಾರ ಬೆಳಗ್ಗೆಯೇ ಭಾರತಕ್ಕೆ ತಲುಪಿದ್ದರೂ, ಸುಮಾರು 6.5 ಲಕ್ಷ ಕಿಟ್ ಗಳನ್ನು ಕೇಂದ್ರ ಸರ್ಕಾರ(ಕರ್ನಾಟಕದ ಬಳಿಕ ಪ್ರಸ್ತಾವನೆ ಸಲ್ಲಿಸಿದ್ದರೂ) ಪಡೆದುಕೊಂಡಿದ್ದು, ಗುಜರಾತ್ ಸೇರಿದಂತೆ ಸೋಂಕು ಪ್ರಮಾಣ ಹೆಚ್ಚಿರುವ ಇತರೆ ರಾಜ್ಯಗಳಿಗೆ ಅವುಗಳನ್ನು ಹಂಚಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಹಾಗಾಗಿ ರಾಜ್ಯ ಸರ್ಕಾರ ರಾಪಿಡ್ ಟೆಸ್ಟಿಂಗ್ ಕಿಟ್ ಗಳಿಗಾಗಿ ಇನ್ನಷ್ಟು ಸಮಯ ಕಾಯುವುದು ಅನಿವಾರ್ಯವಾಗಲಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.
ಈ ನಡುವೆ ಹೆಚ್ಚುವರಿಯಾಗಿ ಇನ್ನೂ ಎರಡು ಲಕ್ಷ ರಾಪಿಡ್ ಟೆಸ್ಟಿಂಗ್ ಕಿಟ್ ತರಿಸಿಕೊಳ್ಳಲು ರಾಜ್ಯ ಸರ್ಕಾರ ಚೀನಾದ ಕಂಪನಿಗೆ ಪ್ರಸ್ತಾವನೆ ಸಲ್ಲಿಸಿದೆ. ಆ ಮೂಲಕ ಶಂಕಿತ ಸೋಂಕಿತರ ಗಂಟಲು ದ್ರವ ಸಂಗ್ರಹಣೆಗಾಗಿ ರಾಜ್ಯದಾದ್ಯಂತ 250ಕ್ಕೂ ಹೆಚ್ಚು ಕಿಯಾಸ್ಕಗಳನ್ನು ತೆರೆಯಲು ಕ್ರಮಕೈಗೊಳ್ಳಲಾಗಿದೆ ಎಂದು ಉಪಮುಖ್ಯಮಂತ್ರಿ ಅಶ್ವಥನಾರಾಯಣ ಅವರು ಗುರುವಾರ ಹೇಳಿದ್ದರು. ಆದರೆ, ಈಗ ಈ ಮೊದಲೇ ಬೇಡಿಕೆ ಸಲ್ಲಿಸಿದ್ದ ರಾಪಿಡ್ ಕಿಟ್ ಗಳೇ ಬೇರೆ ರಾಜ್ಯಗಳ ಪಾಲಾಗಿವೆ. ಇನ್ನು ಇದೀಗ ಸಲ್ಲಿಸಿರುವ ಬೇಡಿಕೆಗೆ ಚೀನಾ ಕಂಪನಿ ಯಾವಾಗ ಸರಕು ಸಿದ್ಧಪಡಿಸಿ ಕಳಿಸಲಿದೆ? ಅಲ್ಲಿಯವರೆಗೆ ರಾಜ್ಯದಲ್ಲಿ ಸೋಂಕು ಇನ್ನೆಷ್ಟು ವ್ಯಾಪಕವಾಗಿ ಹರಡಬಹುದು ಎಂಬ ಆತಂಕ ಎದುರಾಗಿದೆ.
ಈ ನಡುವೆ, ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಬೇಡಿಕೆಯ ಕಿಟ್ ಗಳು ಬರಲು ಇನ್ನೂ ಎರಡು ವಾರ ಬೇಕಾಗಬಹುದು ಎಂದು ರಾಜ್ಯ ಸರ್ಕಾರವೇ ಸ್ಪಷ್ಟಪಡಿಸಿದ್ದು, ಆವರೆಗೆ ರಾಪಿಡ್ ಪರೀಕ್ಷೆ ನಡೆಯುವುದು ಅನುಮಾನಾಸ್ಪದ. ಹಾಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಒಂದು ಕಡೆ ಸಾಕಷ್ಟು ಸಂಖ್ಯೆಯಲ್ಲಿ ಪರೀಕ್ಷಾ ಲ್ಯಾಬ್ ಇಲ್ಲದೇ ಇರುವ ಮಿತಿ, ಮತ್ತೊಂದು ಕಡೆ ಕಿಯಾಸ್ಕ್ ಮೂಲಕ ರಾಪಿಡ್ ಪರೀಕ್ಷೆ ನಡೆಸಲು ಕಿಟ್ ಕೊರತೆ ನಡುವೆ, ಕರ್ನಾಟಕ ನಿಜಕ್ಕೂ ಅಪಾಯಕ್ಕೆ ಸಿಲುಕಿದೆ. ರಾಪಿಡ್ ಪರೀಕ್ಷಾ ಕಿಟ್ ಬರುವುದು ತಡವಾದಂತೆ, ಮತ್ತೊಂದು ಕಡೆ ಸಾಮಾನ್ಯ ಪ್ರಯೋಗಾಲಯ ಪರೀಕ್ಷೆ ಕೂಡ ನಿತ್ಯದ ಮಾದರಿ ಸಂಗ್ರಹದ ಅರ್ಧದಷ್ಟನ್ನೂ ಪೂರೈಸಲಾಗದ ಸ್ಥಿತಿಯಲ್ಲಿರುವುದರಿಂದ ಸೋಂಕು ತಡೆಗೆ ಲಾಕ್ ಡೌನ್ ಹೊರತುಪಡಿಸಿ ಸರ್ಕಾರದ ಬಳಿ ಅನ್ಯಮಾರ್ಗ ಉಳಿದಿಲ್ಲ.
ಆದರೆ, ಸರ್ಕಾರ ದಿನದಿಂದ ದಿನಕ್ಕೆ ಲಾಕ್ ಡೌನ್ ಸಡಿಲಗೊಳಿಸುವ ನಿಟ್ಟಿನಲ್ಲಿ ದಿನಕ್ಕೊಂದು ನಿರ್ಧಾರ ಕೈಗೊಳ್ಳುತ್ತಿದೆ. ಇದು ಇನ್ನಷ್ಟು ಅಪಾಯಕ್ಕೆ ಒಡ್ಡಿಕೊಂಡಂತಾಗಲಿದೆ ಎಂಬ ಎಚ್ಚರಿಕೆ ಆರೋಗ್ಯ ತಜ್ಞರದ್ದು. ಆದರೆ, ಉದ್ಯಮ ಮತ್ತು ಕೃಷಿ ನಷ್ಟವನ್ನು ಮತ್ತು ಕೂಲಿಕಾರ್ಮಿಕರು ಮತ್ತು ಕೆಲಸಗಾರರ ದುಡಿಮೆಯನ್ನು ಕಾಯಲು ಸರ್ಕಾರ ಲಾಕ್ ಡೌನ್ ಸಡಿಲಗೊಳಸಬೇಕಾದ ಅನಿವಾರ್ಯತೆಗೆ ಸಿಲುಕಿದೆ.
ಆದರೆ, ನೆರೆ, ಬರದಂತಹ ವಿಷಯದಿಂದ ಹಿಡಿದು ಜಿಎಸ್ ಟಿ ತೆರಿಗೆ ಪಾಲು ಹಂಚಿಕೆಯವರೆಗೆ ರಾಜ್ಯಕ್ಕೆ ಅನ್ಯಾಯವನ್ನೇ ಮಾಡುತ್ತ ಬಂದಿರುವ ಕೇಂದ್ರದ ಬಿಜೆಪಿ ಸರ್ಕಾರ, ಇದೀಗ ಮತ್ತೊಮ್ಮೆ ಕೊರೋನಾದಂತಹದ ಜೀವಕಂಟಕ ಸೋಂಕಿನ ಪರೀಕ್ಷೆಯ ವಿಷಯದಲ್ಲಿಯೂ ರಾಜ್ಯಕ್ಕೆ ದ್ರೋಹ ಬಗೆದಿದೆ. ಕೇಂದ್ರ ಸರ್ಕಾರಕ್ಕೆ ಮುಂಚೆಯೇ ಚೀನಾ ಕಂಪನಿಗೆ ರಾಜ್ಯ ಸರ್ಕಾರ ಬೇಡಿಕೆಯ ಪ್ರಸ್ತಾವನೆ ಸಲ್ಲಿಸಿದ್ದರೂ, ಕೇಂದ್ರ ಸರ್ಕಾರ ದೇಶಕ್ಕೆ ತಲುಪಿದ ಕಿಟ್ ಗಳನ್ನು ರಾಜ್ಯಕ್ಕೆ ನೀಡದೆ ಸೋಂಕು ಹೆಚ್ಚಿವೆ ಎಂಬ ಕಾರಣಕ್ಕೆ ಇತರೆ ರಾಜ್ಯಗಳಿಗೆ ನೀಡಿದೆ. ಇದು ರಾಜ್ಯದ ಜನತೆಯ ಜೀವದ ಜೊತೆ ಸರಸವಾಡಿದಂತೆಯೇ ಸರಿ. ಕನ್ನಡಿಗರ ವಿಷಯದಲ್ಲಿ ಕೇಂದ್ರ ಬಿಜೆಪಿ ನಾಯಕರಿಗೆ ಇರುವ ಉದಾಸೀನತೆ ಮತ್ತು ಅವಜ್ಞೆಗೆ ಇದು ಮತ್ತೊಂದು ನಿದರ್ಶನ ಎಂಬ ಆಕ್ರೋಶ ಕೂಡ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿದೆ.
ಉದ್ದೇಶಪೂರ್ವಕವೇ ಇರಲಿ, ಅಥವಾ ಕಾಕತಾಳೀಯವೇ ಇರಲಿ; ಕೇಂದ್ರ ಸರ್ಕಾರದ ಈ ನಿರ್ಧಾರದಿಂದಾಗಿ ಆರೂವರೆ ಕೋಟಿ ಕನ್ನಡಿಗರ ಜೀವ ಅಪಾಯಕ್ಕೆ ಸಿಲುಕಿದೆ. ಈಗ ಎರಡು ವಾರಗಳಷ್ಟು ಹಿಂದೆಯೇ ಆರಂಭವಾಗಬೇಕಿದ್ದ ರಾಪಿಡ್ ಟೆಸ್ಟಿಂಗ್, ಕೇಂದ್ರದ ನಿರ್ಧಾರದಿಂದಾಗಿ ಇನ್ನೂ ಎರಡು ವಾರ ಮುಂದೆ ಹೋಗುವುದರಿಂದ ಸೋಂಕು ಕೈಮೀರಿ ಹೋಗುವ ಅಪಾಯ ಎದುರಾಗಿದೆ. ಸಿಎಂ ಯಡಿಯೂರಪ್ಪ ಅವರನ್ನು ಕೈಕಟ್ಟಿ ಹಾಕಿ ಅಸಹಾಯಕತೆಗೆ ತಳ್ಳಲಾಗುತ್ತಿದೆ. ರಾಜ್ಯದ ಜನರ ಜೀವಕ್ಕೆ ಬೆಲೆ ಇಲ್ಲದಂತಾಗುತ್ತಿದೆ!