ಕರೋನಾ ಸೋಂಕು ಪ್ರಕರಣಗಳ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಸಂಪೂರ್ಣ ಸೀಲ್ ಡೌನ್ ಆಗಿರುವ ಬೆಂಗಳೂರಿನ ಪಾದರಾಯನಪುರದಲ್ಲಿ ಸೋಂಕಿತರ ಸಂಪರ್ಕಕ್ಕೆ ಬಂದಿದ್ದ ವ್ಯಕ್ತಿಗಳನ್ನು ಪ್ರತ್ಯೇಕಿಸಲು(ಕ್ವಾರಂಟೈನ್) ಕರೆತರಲು ಹೋದಾಗ ಬಿಬಿಎಂಪಿ ಸಿಬ್ಬಂದಿ ಹಾಗೂ ಪೊಲೀಸರ ವಿರುದ್ಧವೇ ಪ್ರದೇಶದ ಜನ ತಿರುಗಿಬಿದ್ದ ಘಟನೆ ರಾಜ್ಯಾದ್ಯಂತ ಆತಂಕ ಹುಟ್ಟಿಸಿದೆ.
ಘಟನೆಯ ಸಂಬಂಧ ಆರೋಪಿತರ ವಿರುದ್ಧ ಈಗಾಗಲೇ ಸ್ವತಃ ಸಿಎಂ ಯಡಿಯೂರಪ್ಪ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಬೆಂಗಳೂರು ನಗರ ಪೊಲೀಸ್ ಕಮೀಷನರ್ ಕೂಡ ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಿ ಈಗಾಗಲೇ ಕಮೀಷನರ್ ಆದೇಶವನ್ನೂ ಹೊರಡಿಸಿದ್ದಾರೆ. ಪೊಲೀಸ್ ಬ್ಯಾರಿಕೇಡ್ ಮುರಿದು, ಪೊಲೀಸ್ ಕ್ಯಾಂಪ್ ನಾಶಪಡಿಸಿದ ಮತ್ತು ಸರ್ಕಾರಿ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿ ಬೆದರಿಕೆ ಹಾಕಿದ ಆರೋಪದ ಮೇಲೆ ಈವರೆಗೆ 60ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದಿಷ್ಟು ಘಟನೆ ಮತ್ತು ಘಟನೆಯ ಆಚೀಚೆಯ ವಿವರಗಳು. ಕರೋನಾದಂತಹ ಭೀಕರ ಮಹಾಮಾರಿಯ ವಿರುದ್ಧ ದೇಶಕ್ಕೆ ದೇಶವೇ ಹೋರಾಡುತ್ತಿರುವ ಹೊತ್ತಲ್ಲಿ, ಸೋಂಕಿತರು ಮತ್ತು ಅವರ ಸಂಪರ್ಕಕ್ಕೆ ಬಂದವರು ಸ್ವತಃ ತಮ್ಮ ಜೀವ ಉಳಿಸಿಕೊಳ್ಳುವ ಮತ್ತು ಮತ್ತೊಬ್ಬರ ಜೀವವನ್ನೂ ಉಳಿಸುವ ನಿಟ್ಟಿನಲ್ಲಿ ಸರ್ಕಾರ ಮತ್ತು ಸರ್ಕಾರಿ ವ್ಯವಸ್ಥೆಯ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಮತ್ತು ಸರ್ಕಾರಿ ಸಿಬ್ಬಂದಿಯ ಕರ್ತವ್ಯಕ್ಕೆ ಸಹಕರಿಸುವುದು ಎಲ್ಲರ ಹೊಣೆ ಅಷ್ಟೇ ಅಲ್ಲ; ಸಮಾಜಘಾತುಕರಾಗದೇ ಉಳಿಯುವ ಸಾಮಾಜಿಕ ಬದ್ಧತೆ ಕೂಡ. ಅದರಲ್ಲೇ ಯಾವುದೇ ಅನುಮಾನವಿಲ್ಲ. ಆದರೆ, ತಬ್ಲೀಖ್ ಜಮಾತೆ ಸಮಾವೇಶದಲ್ಲಿ ಭಾಗಿಯಾದ ಬಂದವರು ಮತ್ತು ಅವರ ಸಂಪರ್ಕಿತರಿಗೆ ಕರೋನಾ ಸೋಂಕು ದೃಢಪಡುತ್ತಿದ್ದಂತೆ, ಅವರುಗಳನ್ನು ಗುರುತಿಸುವ ಮತ್ತು ಪ್ರತ್ಯೇಕಿಸುವ ಕಾರ್ಯಕ್ಕೆ ಮುಂದಾಗುತ್ತಿದ್ದಂತೆ ಹಲವು ಬಿಕ್ಕಟ್ಟುಗಳು ತಲೆದೋರಲಾರಂಭಿಸಿವೆ ಎಂಬುದು ರಾಜ್ಯದಮಟ್ಟಿಗೆ ಮಾತ್ರವಲ್ಲ; ದೇಶವ್ಯಾಪಿ ಕಂಡುಬಂದಿರುವ ಬೆಳವಣಿಗೆ.
ಇಂತಹ ಜೀವಕಂಟಕ ರೋಗದ ವಿಷಯದಲ್ಲಿಯೂ ತಮ್ಮ ಜೀವ ಉಳಿಸಲು ಬರುವ ಆರೋಗ್ಯ ಸಿಬ್ಬಂದಿ, ಪೊಲೀಸರು, ಸ್ಥಳೀಯ ಸಂಸ್ಥೆಗಳ ಸಿಬ್ಬಂದಿಗಳಿಂದ ಕಣ್ತಪ್ಪಿಸಿಕೊಂಡು ಅಡಗಿಕೊಳ್ಳುವುದು, ಮಾಹಿತಿ ನೀಡದೇ ಮುಚ್ಚಿಡುವುದು, ಕೊನೆಗೆ ಮನೆಮನೆ ಸಮೀಕ್ಷೆಗೆ ಹೋದಾಗ ಸಹಕರಿಸುವ ಬದಲು, ಸಿಬ್ಬಂದಿಯ ವಿರುದ್ಧವೇ ತಿರುಗಿಬೀಳುವುದು, ಹಲ್ಲೆಗೆ ಮುಂದಾಗುವುದು, ದೊಂಬಿ ಎಬ್ಬಿಸುವುದು ಮಾಡುತ್ತಿರುವ ಜನರಿಗೆ ಕನಿಷ್ಠ ತಿಳಿವಳಿಕೆಯೂ ಇಲ್ಲವೆ? ಎಂಬ ಪ್ರಶ್ನೆ ಕಾಡದೇ ಇರದು. ಜೊತೆಗೆ, ಅವರುಗಳಿಗೆ ಬುದ್ಧಿಹೇಳಬೇಕಾದ, ತಿಳಿಹೇಳಿ ಎಚ್ಚರಿಸಬೇಕಾದ ಧರ್ಮಗುರುಗಳು, ಸ್ಥಳೀಯ ಮಟ್ಟದ ಜನಪ್ರತಿನಿಧಿಗಳು, ಸಮಾಜದ ಮುಖಂಡರು, ವಿಚಾರವಂತರು, ವಿದ್ಯಾವಂತರು ಯಾಕೆ ಇಂತಹ ಹೊತ್ತಲ್ಲಿ ತಮ್ಮ ಹೊಣೆಗಾರಿಕೆ ಪ್ರದರ್ಶಿಸುತ್ತಿಲ್ಲವೆ? ಯಾಕೆ ಸರ್ಕಾರದ ಜೊತೆ ಸಹಕರಿಸಲು ಜನರಿಗೆ ಮಾರ್ಗದರ್ಶನ ನೀಡುತ್ತಿಲ್ಲವೆ? ಎಂಬ ಪ್ರಶ್ನೆಗಳೂ ಇವೆ. ಏಕೆಂದರೆ, ಈ ಹೊತ್ತು ಯಾರೋ ಕೆಲವರ ಆ ತಪ್ಪುಗಳು ಇಡೀ ಸಮುದಾಯವನ್ನು ಕಟಕಟೆಗೆ ನಿಲ್ಲಿಸಿವೆ. ದೇಶವ್ಯಾಪಿ ಹರಡಿರುವ ಕೋಮು ದ್ವೇಷ ಮತ್ತು ಮತೀಯ ರಾಜಕಾರಣದ ಉನ್ಮಾದದ ಮಾಧ್ಯಮಗಳನ್ನು ಕೂಡ ಬಿಟ್ಟಿಲ್ಲ. ಹಾಗಾಗಿ ಮಾಧ್ಯಮಗಳು ಯಾವುದೇ ಮೂಲೆಯಲ್ಲಿ ಒಂದು ಸಣ್ಣ ಘಟನೆ ನಡೆದರೂ ಅದನ್ನು ಇಡೀ ಸಮುದಾಯದ ತಲೆಗೆ ಕಟ್ಟಲು ತುದಿಗಾಲಲ್ಲಿ ನಿಂತಿವೆ. ಇಂತಹ ಹೊತ್ತಲ್ಲಿ ಬಹಳ ಹೊಣೆಗಾರಿಕೆಯಿಂದ ನಡೆದುಕೊಳ್ಳಬೇಕಾದುದು ಸಮುದಾಯದ ವಿವೇಕಗಳ ಕರ್ತವ್ಯ.
ಆದರೆ, ಪಾದರಾಯನಪುರ ಘಟನೆಯ ಹಿನ್ನೆಲೆಯಲ್ಲಿ ಕಳೆದ ಸುಮಾರು ಹತ್ತು ದಿನಗಳಿಂದ ಸಂಪೂರ್ಣ ಸೀಲ್ ಡೌನ್ ನಡುವೆಯೂ ಈವರೆಗೆ ಸರ್ಕಾರಿ ಸಿಬ್ಬಂದಿಗೆ ಸಹಕರಿಸುತ್ತಲೇ ಬಂದಿದ್ದ ಅಲ್ಲಿನ ನಿವಾಸಿಗಳು ಇದೀಗ ಯಾಕೆ ದಿಢೀರ್ ತಿರುಗಿಬಿದ್ದಿದ್ದಾರೆ? ಕರೋನಾ ಪರೀಕ್ಷೆ ಮತ್ತು ಪ್ರತ್ಯೇಕಿಸಿಡುವ ಬಗ್ಗೆ ಅವರಿಗಿರುವ ಆತಂಕಗಳೇನು? ಭಯವೇನು? ಕರೋನಾ ಹರಡಲು ದೇಶದ ಒಂದು ಸಮುದಾಯದ ಕೆಲವರು ಪ್ರಯತ್ನಿಸುತ್ತಿದ್ದಾರೆ ಎಂಬ ಸುಳ್ಳುಸುದ್ದಿಗಳನ್ನು ಪ್ರಸಾರ ಮಾಡಿದ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳ ಜನದ್ರೋಹಿ ಕೃತ್ಯದ ಕಾರಣದಿಂದಾಗಿ ಆ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿರುವ ಪಾದರಾಯನಪುರದಲ್ಲಿ ಸಹಜವಾಗೇ ಕರೋನಾ ಸೋಂಕಿತರು ಎಂದು ಗುರುತಿಸಿದರೆ, ಎದುರಾಗಬಹುದಾದ ಸಾಮಾಜಿಕ ಅಪಾಯಗಳೇ ಅವರನ್ನು ಈ ರೀತಿಯ ವರ್ತನೆಗೆ ಪ್ರೇರೇಪಿಸಿದವೆ?
ಅಥವಾ ಸಂಪೂರ್ಣ ಸೀಲ್ ಡೌನ್ ಮೂಲಕ ಜನರನ್ನು ಮನೆಯಿಂದ ಹೊರಬಾರದಂತೆ ನಿರ್ಬಂಧಿಸಿದ ಬಳಿಕ ಬಿಬಿಎಂಪಿ ತಾನು ಹೇಳಿದಂತೆ ಅಲ್ಲಿನ ಜನವರಿಗೆ ದಿನಬಳಕೆಯ ಅಗತ್ಯವಸ್ತುಗಳನ್ನು ಮನೆಮನೆಗೆ ತಲುಪಿಸುವ ಕಾರ್ಯವನ್ನು ಸುಸೂತ್ರವಾಗಿ ಮಾಡುತ್ತಿತ್ತೆ? ಅಲ್ಲಿನ ಮಕ್ಕಳು-ಮರಿಯಾಗಿ ಯಾರೂ ಹಸಿವಿನಿಂದ ಬಳಲದಂತೆ, ಅನಾರೋಗ್ಯದಿಂದ ನರಳದಂತೆ ಬಿಬಿಎಂಪಿ ನೋಡಿಕೊಂಡಿತ್ತೆ? ಹಾಲು, ತರಕಾರಿ, ಆಹಾರ ಧಾನ್ಯ, ದಿನಸಿಯನ್ನು ಅಗತ್ಯವಿರುವವರಿಗೆ ಸಕಾಲಕ್ಕೆ ತಲುಪಿಸಲಾಗುತ್ತಿತ್ತೆ? ದಿನಬಳಕೆ ಅಗತ್ಯ ವಸ್ತುಗಳು ಸಿಗದೆ, ಜನರ ಕೂಗಿಗೆ ಕಿವಿಗೊಡದ ವ್ಯವಸ್ಥೆಯಿಂದ ಬೇಸತ್ತು, ಹಸಿವು ಮತ್ತು ನಿರ್ಲಕ್ಷ್ಯದ ವಿರುದ್ಧ ಸಿಡಿದ ಜನರ ಅಸಾಯಕತೆಯ ಆಕ್ರೋಶ ಈ ಘಟನೆಗೆ ಕಾರಣವೆ?
ಆದರೆ, ನಿನ್ನೆ ರಾತ್ರಿಯಿಂದ ಮುಸ್ಲಿಂ ಸಮುದಾಯವನ್ನು ಕಟೆಕಟೆಯಲ್ಲಿ ನಿಲ್ಲಿಸಿ ಬೊಬ್ಬಿರಿಯುತ್ತಿರುವ ಮಾಧ್ಯಮಗಳು, ನಿಜವಾಗಿಯೂ ಜನರ ವರ್ತನೆಯ ಹಿಂದೆ ಯಾವ ಕಾರಣವಿರಬಹುದು? ಯಾಕೆ ಜನ ಹಾಗೆ ಪ್ರತಿಕ್ರಿಯಿಸಿದರು? ಯಾವ ಭೀತಿ, ಯಾವ ಆತಂಕ, ಯಾವ ಆಕ್ರೋಶ, ಹತಾಶೆ ಅವರಿಂದ ಅಂತಹ ಕೃತ್ಯ ಎಸಗುವಂತೆ ಮಾಡಿಸಿತು ಎಂಬುದನ್ನು ವಿವೇಚಿಸುವ ಗೋಜಿಗೇ ಹೋಗಲಿಲ್ಲ. ಎಂದಿನಂತೆ ಘಟನೆಯ ಪೂರ್ವಪರ ತಿಳಿಯುವ ಮುನ್ನವೇ, ಸ್ಟುಡಿಯೋಗಳಲ್ಲೇ ಅಪರಾಧಿಗಳನ್ನು ಘೋಷಿಸಲಾಯಿತು. ಕಂಡಲ್ಲಿ ಗುಂಡಿಕ್ಕಿ ಎಂಬ ಆದೇಶವನ್ನೂ ನೀಡಲಾಯಿತು!
ಜೊತೆಗೆ, ಒಂದು ಪ್ರದೇಶವನ್ನು ಲಾಕ್ ಡೌನ್ ನಂತರದ ಹಂತವಾದ ಸೀಲ್ ಡೌನ್ ಗೆ ಒಳಪಡಿಸಿದ ಬಳಿಕ, ಆ ಪ್ರದೇಶದ ಜನ ಮನೆಯಿಂದ ಹೊರಬರುವಂತಿಲ್ಲ. ಅವರಿಗೆ ಯಾವುದೇ ಅಗತ್ಯ ವಸ್ತು ತುರ್ತು ಇದ್ದರೆ, ಅಥವಾ ಅನಾರೋಗ್ಯ ತುರ್ತು ಇದ್ದರೆ, ಅವರ ಮನೆ ಬಾಗಿಲಿಗೆ ಅವೆಲ್ಲವನ್ನೂ ತಲುಪಿಸುವುದು ಸ್ಥಳೀಯ ಆಡಳಿತದ ಹೊಣೆಗಾರಿಕೆ. ಹಾಗಿರುವಾಗ, ಅವರವರ ಮನೆಯಲ್ಲೇ ಇರುವಾಗ, ಸೋಂಕಿತರು ಮತ್ತು ಅವರ ಸಂಪರ್ಕಕ್ಕೆ ಬಂದವರನ್ನು ಅವರವರ ಮನೆಯಲ್ಲೇ ಕೋರೈಂಟನ್ ಮಾಡಿ, ಅಲ್ಲಿಯೇ ಚಿಕಿತ್ಸೆ ನೀಡುವ ಬದಲು, ಅವರನ್ನು ಬೇರೆಡೆಗೆ ಕರೆದೊಯ್ದು ಪ್ರತ್ಯೇಕಿಸಿ ಕೋರೈಂಟೈನ್ ಮಾಡಿ ಚಿಕಿತ್ಸೆ ನೀಡುವುದು ಏಕೆ? ಎಂಬ ಪ್ರಶ್ನೆ ಕೂಡ ಎದ್ದಿದೆ. ಜೊತೆಗೆ, ಒಂದು ವೇಳೆ ಹಾಗೆ ಮಾಡುವುದೇ ಆದರೂ, ಆರೋಗ್ಯ ಸಿಬ್ಬಂದಿ ಹಗಲು ಹೊತ್ತಲ್ಲಿ ಆ ಕೆಲಸ ಮಾಡುವ ಬದಲು, ಕತ್ತಲಾದ ಬಳಿಕ ಆ ಕೆಲಸಕ್ಕೆ ಮುಂದಾಗಿದ್ದು ಏಕೆ? ಸೂಕ್ಷ್ಮ ಪ್ರದೇಶವೆಂದು ಗೊತ್ತಾದ ಬಳಿಕವೂ ಮುಂಜಾಗ್ರತೆ ವಹಿಸದೆ, ಒಬ್ಬರಲ್ಲ, ಇಬ್ಬರಲ್ಲ 35-36 ಮಂದಿಯನ್ನು ಕರೆತರಲು ರಾತ್ರಿ ಹೊತ್ತಲ್ಲಿ ಹೋದದ್ದು ಕೂಡ ಜನರಲ್ಲಿ ಆತಂಕ ಮತ್ತು ಗೊಂದಲಕ್ಕೆ ಕಾರಣವಾಗಿರಬಹುದೆ? ಎಂಬುದನ್ನು ಪರಿಶೀಲಿಸಬೇಕಿದೆ.
ಜೊತೆಗೆ ಅಲ್ಲಿನ ಜನವರಿಗೆ ಕೆಲವರು ಕುಮ್ಮಕ್ಕು ನೀಡಿದ್ದಾರೆ. ಈವರೆಗೆ ಸಹಕರಿಸಿದ ಜನ ಇದೀಗ ದಿಢೀರ್ ತಿರುಗಿಬಿದ್ದಿರುವುದರ ಹಿಂದೆ ಕೆಲವರ ಕುಮ್ಮಕ್ಕಿದೆ. ಅವರು ಎಷ್ಟೇ ಪ್ರಭಾವಿಯಾಗಿದ್ದರೂ ಅವರನ್ನು ಕಾನೂನು ಬಿಡುವುದಿಲ್ಲ ಎಂದು ಪೊಲೀಸ್ ಕಮೀಷನರ್ ಮತ್ತು ಗೃಹ ಸಚಿವರು ಕೂಡ ಹೇಳಿದ್ದಾರೆ. ಒಂದು ವೇಳೆ, ಇಂಥ ಹೊತ್ತಲ್ಲಿ ರಾಜಕೀಯ ಕಾರಣಕ್ಕೋ ಮತ್ತಾವುದೋ ಕಾರಣಕ್ಕು ಹಾಗೆ ಜನರನ್ನು ಎತ್ತಿಕಟ್ಟುವ ಕೃತ್ಯವನ್ನು ಯಾರೇ ಮಾಡಿದ್ದರೂ ಆ ಬಗ್ಗೆ ಮುಲಾಜಿಲ್ಲದೆ ಕ್ರಮವಹಿಸಬೇಕು ಮತ್ತು ಆ ಮೂಲಕ ದೇಶವ್ಯಾಪಿ ಒಂದು ಸ್ಪಷ್ಟ ಸಂದೇಶ ರವಾನೆಯಾಗುವಂತೆ ನೋಡಿಕೊಳ್ಳಲೇಬೇಕು. ಅದೇ ಹೊತ್ತಿಗೆ, ಈ ಘಟನೆಯನ್ನೇ ಮುಂದಿಟ್ಟುಕೊಂಡು ಇಡೀ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಮೂಲಕ ಸಮಾಜದಲ್ಲಿ ಒಡಕು ಮೂಡಿಸುತ್ತಿರುವ, ‘ಅವರು’ ಮತ್ತು ‘ನಾವು’ ಎಂಬ ವಾದಗಳ ದೇಶವಾಸಿಗಳ ನಡುವೆ ದ್ವೇಷ ಹರಡುತ್ತಿರುವ ಮಾಧ್ಯಮ ಮತ್ತು ರಾಜಕಾರಣಿಗಳ ವಿರುದ್ಧವೂ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಬೇಕಿದೆ.
ಈಗಾಗಲೇ ಪೊಲೀಸ್ ಕಮೀಷನರ್ ಈ ಬಗ್ಗೆ ಪ್ರಸ್ತಾಪಿಸಿದ್ದು ‘ಯಾವುದೇ ವ್ಯಕ್ತಿ ಇಂತಹ ಘಟನೆಯನ್ನು ರಾಜಕೀಯ ದುರುದ್ದೇಶಕ್ಕ್ಎ ಬಳಸಬಾರದು’ ಎಂದು ಎಚ್ಚರಿಕೆ ನೀಡಿದ್ದಾರೆ. ಅವರ ಆ ಹೇಳಿಕೆಯ ವ್ಯಾಪ್ತಿಗೆ ಮಾಧ್ಯಮ ಕೂಡ ಬರಬೇಕಿದೆ ಮತ್ತು ಕರೋನಾ ಸೇನಾನಿಗಳ ವಿರುದ್ಧ ತಿರುಗಿಬೀಳುವುದು ಹೇಗೆ ಸಮಾಜಘಾತುಕ ಕೃತ್ಯವೋ ಹಾಗೆಯೇ ಕೆಲವು ಘಟನೆಗಳನ್ನೇ ಮುಂದಿಟ್ಟುಕೊಂಡು ಒಂದಿಡೀ ಸಮುದಾಯವನ್ನೇ ಭಯೋತ್ಪಾದಕರೆಂದು ಕರೆಯುವುದು, ದೇಶದ್ರೋಹಿಗಳೆಂದು ಬ್ರಾಂಡ್ ಮಾಡುವುದು ಕೂಡ ಸಮಾಜಘಾತುಕ ಕೃತ್ಯವೇ. ಆ ಬಗ್ಗೆ ಕೂಡ ಸಿಸಿಬಿ ತನಿಖೆಯ ದಿಕ್ಕು ಹರಿಯಬೇಕಿದೆ.
ಈ ನಡುವೆ, ರಾಜ್ಯದಲ್ಲಿ ಕರೋನಾ ಸೋಂಕು ಮತ್ತು ಲಾಕ್ ಡೌನ್ ನಿಂದಾಗಿ ಉಂಟಾಗಿರುವ ಪರಿಸ್ಥಿತಿಯನ್ನು ಸಿಎಂ ಯಡಿಯೂರಪ್ಪ ಏಕಾಂಗಿಯಾಗಿ ನಿಭಾಯಿಸುತ್ತಿರುವುದು ಸ್ವತಃ ಬಿಜೆಪಿಯ ಹಲವು ನಾಯಕರಿಗೇ ಅಪಥ್ಯವಾಗಿದೆ. ಕೇರಳದ ಬಳಿಕ ಸೋಂಕನ್ನು ಬಹಳ ಯಶಸ್ಸಿಯಾಗಿ ನಿಭಾಯಿಸಿದ ಹೆಗ್ಗಳಿಕೆ ಕರ್ನಾಟಕದ್ದಾಗಿದೆ. ಅದರಲ್ಲೂ ಕೇಂದ್ರದ ತಮ್ಮದೇ ಸರ್ಕಾರದ ಅಸಹಕಾರ ಮತ್ತು ಗೊಂದಲಕಾರಿ ನಿಲುವುಗಳ ಹೊರತಾಗಿಯೂ ಅನುಭವಿ ರಾಜಕಾರಣಿಯಾಗಿ, ಯಡಿಯೂರಪ್ಪ ಎದೆಗುಂದದೆ ಪರಿಸ್ಥಿತಿ ನಿಭಾಯಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಬೆಂಗಳೂರಿನಂತಹ ಮಹಾನಗರದ ವಿಷಯದಲ್ಲಿ ಹಲವು ಆತಂಕಗಳಿದ್ದವು. ಆದರೆ, ಅಂತಹ ಎಲ್ಲಾ ಲೆಕ್ಕಾಚಾರಗಳನ್ನು ಮೀರಿ ಬೆಂಗಳೂರಿನಲ್ಲಿ ಮುಂಬೈ, ದೆಹಲಿಗಿಂತ ಸುರಕ್ಷಿತ ಎಂಬುದನ್ನು ಖಾತ್ರಪಡಿಸಿದ್ದಾರೆ. ಜೊತೆಗೆ ಕರೋನಾ ಸಂದರ್ಭದಲ್ಲಿ ತಬ್ಲೀಖ್ ಘಟನೆಯನ್ನೇ ಮುಂದಿಟ್ಟುಕೊಂಡು ಮುಸ್ಲಿಮರ ವಿರುದ್ಧ ಸಮಾಜದಲ್ಲಿ ದ್ವೇಷ ಬಿತ್ತುವ ಕೆಲಸ ಮಾಡಿದ ಸ್ವಪಕ್ಷೀಯ ನಾಯಕರು ಮತ್ತು ಸಂಘಪರಿವಾರವನ್ನೂ ಸೇರಿ ಎಲ್ಲರಿಗೂ ಖಡಕ್ ಎಚ್ಚರಿಕೆ ಕೊಡುವ ಮೂಲಕ ಅಲ್ಪಸಂಖ್ಯಾತರು ಭಯಪಡುವ ಅಗತ್ಯವಿಲ್ಲ ಎಂಬ ಸಂದೇಶ ರವಾನಿಸಿದ್ದರು.
ಈ ಎಲ್ಲಾ ಬೆಳವಣಿಗೆಗಳು ಸಹಜವಾಗೇ ಸಂಘಪರಿವಾರ ಮತ್ತು ಉಗ್ರ ಹಿಂದುತ್ವವಾದಿ ನಿಲುವಿನ ಬಿಜೆಪಿ ನಾಯಕರಲ್ಲಿ ಸಿಎಂ ಬಗ್ಗೆ ಬೇಗುದಿ ಹುಟ್ಟಿಸಿದ್ದವು. ಇದೀಗ ಪಾದರಾಯನಪುರ ವಿಷಯದಲ್ಲಿ ಕೂಡ ಇಂತಹ ಅತೃಪ್ತ ಮತ್ತು ಅಸಮಾಧಾನದ ಹೊಗೆಯ ಕೈವಾಡವಿದೆ. ಯಡಿಯೂರಪ್ಪ ಅವರಿಗೆ ಇರಿಸುಮುರಿಸು ತರುವ ಉದ್ದೇಶದಿಂದಲೇ ಇಂತಹ ಕೃತ್ಯಕ್ಕೆ ಕೆಲವರು ಕುಮ್ಮಕ್ಕು ನೀಡಿರುವ ಸಾಧ್ಯತೆ ಕೂಡ ತಳ್ಳಿಹಾಕುವಂತಿಲ್ಲ ಎನ್ನಲಾಗುತ್ತಿದೆ. ಈ ನಡುವೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕೂಡ ‘ ವಿಷಯದಲ್ಲಿ ಯಾವುದೇ ರಾಜಕೀಯ ಮಾಡಬಾರದು. ಘಟನೆಯ ಕುರಿತು ನಿರ್ದಾಕ್ಷಿಣ್ಯ ಕ್ರಮಕ್ಕೆ ಸರ್ಕಾರಕ್ಕೆ ಸಂಪೂರ್ಣ ಬೆಂಬಲವಾಗಿ ನಿಲ್ಲವುದಾಗಿ ಹೇಳಿದ್ದಾರೆ. ಆ ಹಿನ್ನೆಲೆಯಲ್ಲಿ ಘಟನೆಯ ಹಿಂದಿನ ರಾಜಕೀಯ ಕೈವಾಡದ ವಿಷಯದಲ್ಲಿಯೂ ತನಿಖೆ ನಡೆಯಬೇಕಿದೆ.