ಏಪ್ರಿಲ್ 19ರಂದು ಬೆಂಗಳೂರಿನ ಬಾಪೂಜಿನಗರ ಮತ್ತು ಪಾದರಾಯನಪುರದಲ್ಲಿ ನಡೆಸಿದ ಸೀಲ್ ಡೌನ್ ಹಾಗೂ ಪಾದರಾಯನಪುರದಲ್ಲಿ (ವಾರ್ಡ್ ಸಂಖ್ಯೆ 135) ನಡೆಸಲಾದ ಪುಂಡಾಟಿಕೆಯ ಕುರಿತು ಹೇಳಿಕೆ.
(2020 ರ ಏಪ್ರಿಲ್ 19 ರ ರಾತ್ರಿ ವೇಳೆಯಲ್ಲಿ ಬೆಂಗಳೂರಿನ ಪಾದರಾಯನಪುರದಲ್ಲಿ ಕೊವಿಡ್-19ಕ್ಕೆ ಸಂಬಂಧಿಸಿದಂತೆ ಎರಡನೆಯ ಸಂಪರ್ಕಿತರನ್ನು ಕ್ವಾರಂಟೀನ್ಗೆ ಕರೆದೊಯ್ಯುವ ವಿಚಾರದಲ್ಲಿ ಘರ್ಷಣೆ ನಡೆದು, ಕೆಲ ಸ್ಥಳೀಯರು ಪುಂಡಾಟಿಕೆಯನ್ನೂ ನಡೆಸಿದ್ದರು. ಈ ಸಂಬಂಧ ಈಗಾಗಲೇ ಹಲವರನ್ನು ಬಂಧಿಸಲಾಗಿದೆ. ಆ ದಿನದಂದು ಆಶಾಕಾರ್ಯಕರ್ತೆಯರ ಮೇಲಾಗಲೀ, ಪೊಲೀಸರ ಮೇಲಾಗಲೀ ಯಾವುದೇ ಹಲ್ಲೆ ನಡೆಯಲಿಲ್ಲ ಎಂದು ಬಿಬಿಎಂಪಿ ಆಯುಕ್ತರಾದ ಅನಿಲ್ಕುಮಾರ್ ಮತ್ತು ಪೊಲೀಸ್ ಕಮಿಶನರ್ ಭಾಸ್ಕರ್ ರಾವ್ ಮಾಧ್ಯಮಗಳಿಗೆ ಸ್ಪಷ್ಟವಾಗಿ ತಿಳಿಸಿದ್ದರು. ಆದರೂ ಇಡೀ ಘಟನೆಯ ಸುತ್ತ ಕೋಮುಪೂರ್ವಾಗ್ರಹಗಳು ಉಂಟಾಗುವ ರೀತಿಯಲ್ಲಿ ಬಿಂಬಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವಾರು ನಾಗರಿಕ ಸಮಾಜದ ಸಂಘಟನೆಗಳು ಮತ್ತು ವ್ಯಕ್ತಿಗಳು ನೀಡಿರುವ ಪತ್ರಿಕಾ ಹೇಳಿಕೆಯನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ- ಸಂ)
ಈ ಕೆಳಗೆ ಸಹಿ ಮಾಡಿರುವ ನಾವು ಏಪ್ರಿಲ್ 19, 2020ರಂದು ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದ ಪುಂಡಾಡಿಕೆಯ ಕುರಿತು ಈ ಹೇಳಿಕೆಯನ್ನು ಬಿಡುಗಡೆ ಮಾಡುತ್ತಿದ್ದೇವೆ. ಅಲ್ಲಿ ನಡೆದ ಪುಂಡಾಟಿಕೆ ನಿಜಕ್ಕೂ ದುರದೃಷ್ಟದ ಸಂಗತಿ. ಅದಕ್ಕೆ ಕಾರಣರಾದವರ ಮೇಲೆ ಕಾನುನು ಪ್ರಕಾರ ಶಿಕ್ಷೆ ವಿಧಿಸಬೇಕು. ಆದರೆ ಇದೇ ಸಂದರ್ಭದಲ್ಲಿ ಅಂದು ನಡೆದ ಪುಂಡಾಟಿಕೆ ಅಥವಾ ಹಿಂಸಾಕೃತ್ಯಗಳಿಗೆ ಎಡೆ ಮಾಡಿಕೊಟ್ಟಿರುವ ಸಾಂದರ್ಭಿಕ ಪರಿಸ್ಥಿತಿಗಳನ್ನು ಸಹ ನಾವು ಅರ್ಥಮಾಡಿಕೊಂಡು, ಸ್ವೀಕರಿಸಿಕೊಂಡು ಮುಂದಿನ ದಿನಗಳಲ್ಲಿ ಇಂತಹ ಸಂದರ್ಭಗಳು ತಲೆದೋರದಂತೆ ಎಚ್ಚರವಹಿಸುವುದು ಅತ್ಯಗತ್ಯವಾಗಿದೆ.
ಅತೀ ಜನಸಂದಣಿ ಇದ್ದು, ಬಡ ಜನರು ವಾಸಿಸುವ ಪ್ರದೇಶಗಳಾಗಿರುವ ಬಾಪೂಜಿನಗರ (ವಾರ್ಡ್ ನಂ- 134) ಮತ್ತು ಪಾದರಾಯನಪುರ (ವಾರ್ಡ್ ನಂ 135) ವಾರ್ಡುಗಳನ್ನು ಏಪ್ರಿಲ್ 10ನೇ ತಾರೀಖಿನಿಂದಲೇ ‘ಸೀಲ್ಡೌನ್’ ಮಾಡಲಾಗಿದೆ; ಈ ಎರಡೂ ವಾರ್ಡ್ಗಳಲ್ಲಿ ಜನ ನಿಬಿಡತೆ ಹೆಚ್ಚಿದ್ದು ಬಡವರು ಮತ್ತು ದಿನಗೂಲಿ ಕೆಲಸ ಮಾಡುತ್ತಾರೆ. ಇಲ್ಲಿ ಸಾರ್ವಜನಿಕ ಮೂಲಸೌಕರ್ಯಗಳು ನಿಕೃಷ್ಟ ಸ್ಥಿತಿಯಲ್ಲಿವೆ.
2016 ರ ಅಂಕಿಅಂಶಗಳ ಪ್ರಕಾರ 49,784 ಜನಸಂಖ್ಯೆ ಹಾಗೂ 10,647 ಕುಟುಂಬಗಳಿರುವ ಬಾಪೂಜಿನಗರಲ್ಲಿ ಒಂದೇ ಒಂದು ಸಾರ್ವಜನಿಕ ಶೌಚಾಲಯವಿರುವುದಿಲ್ಲ. ಇಲ್ಲಿ ಒಂದು ಸಾರ್ವಜನಿಕ ಉದ್ಯಾನವನವಿದೆ. ಈ ಪ್ರದೇಶವನ್ನು ಸಂಪರ್ಕಿಸಲು ಯಾವುದೇ ಮುಖ್ಯ ರಸ್ತೆಯೂ ಇಲ್ಲ. ಇಲ್ಲಿನ ಫುಟ್ಪಾತ್ಗಳಲ್ಲಿ ನಡೆದುಕೊಂಡು ಹೋಗಲು ಸಾಧ್ಯವಿಲ್ಲ. ಹಾಗೆಯೇ 7273 ಕುಟುಂಬಗಳು ಮತ್ತು 37,599 ಜನಸಂಖ್ಯೆ ಹೊಂದಿರುವ ಪಾದರಾಯನಪುರದಲ್ಲಿ 1 ಸಾರ್ವಜನಿಕ ಸಾರ್ವಜನಿಕ ಶೌಚಾಲಯವಿದೆ. ಬಾಪೂಜಿನಗರ ಮತ್ತು ಪಾದರಾಯನಪುರ ಎರಡೂ ಸಾಮಾಜಿಕ-ಆರ್ಥಿಕವಾಗಿ ಹಿಂದುಳಿದ ಪ್ರದೇಶಗಳು. ಇಲ್ಲಿ ವಾಸಿಸುವ ಹೆಚ್ಚಿನ ಜನರು ದಿನಗೂಲಿ ಕೆಲಸ ಮಾಡುವವರು. ಇಲ್ಲಿನ ಹೆಚ್ಚಿನ ಜನರು ಬೀಡಿ ಕಟ್ಟುವ, ಚೀಲ ಹೊಲಿಯುವ ಮತ್ತು ಊದುಬತ್ತಿ ಹೊಸೆಯುವ, ಮತ್ತಿತರ ಅನೌಪಚಾರಿಕ ಕ್ಷೇತ್ರದ ಕೆಲಸಗಳನ್ನು ಮಾಡುವ ಬಡ ದಿನಗೂಲಿ ಕಾರ್ಮಿಕರು. ಕೊವಿಡ್ 19ರ ಕಾರಣಕ್ಕೆ ಹೇರಲಾಗಿರುವ ಲಾಕ್ಡೌನ್ ಈ ಜನರಿಗೆ ದೊಡ್ಡ ಆಘಾತವನ್ನು ನೀಡಿದೆಯಲ್ಲದೇ ಅವರು ಅತ್ಯಂತ ದುಸ್ತರದ ಸನ್ನಿವೇಶವನ್ನು ಎದುರಿಸುತ್ತಿದ್ದಾರೆ.
ಸೀಲ್ಡೌನ್ ಮತ್ತು ತದನಂತರದ ಕಷ್ಟಗಳು
ಬೆಂಗಳೂರಿನ ಹಲವಾರು ವಾರ್ಡ್ಗಳಲ್ಲಿ ಗಮನಾರ್ಹ ಸಂಖ್ಯೆಯ ಕೊವಿಡ್ ಪಾಸಿಟಿವ್ ಪ್ರಕರಣಗಳಿದ್ದರೂ ಸಹ, ಬಾಪೂಜಿನಗರ ಮತ್ತು ಪಾದರಾಯನಪುರ ಎರಡು ವಾರ್ಡ್ಗಳನ್ನು ಮಾತ್ರ ಸೀಲ್ ಡೌನ್ ಮಾಡಲಾಗಿದೆ. ಮಾಧ್ಯಮ ವರದಿಗಳು ತಿಳಿಸುವಂತೆ ಇಲ್ಲಿ ಸೀಲ್—ಡೌನ್ ಜಾರಿಗೊಳಿಸಲು ಯಾವುದೇ ಅಧಿಕೃತ ಆದೇಶ ಹೊರಡಿಸಲಾಗಿಲ್ಲ (ಇದನ್ನು ಬಿಬಿಎಂಪಿ ಆಯುಕ್ತರು ಖಚಿತ ಪಡಿಸಿದ್ದಾರೆ). ಹಾಗಿದ್ದರೂ ಈ ಎರಡು ವಾರ್ಡುಗಳಲ್ಲಿ ಯಾಕೆ ಸೀಲ್ ಡೌನ್ ಜಾರಿಗೊಳಿಸಲಾಯಿತು ಎಂಬುದು ಇದುವರೆಗೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಈ ವಾರ್ಡ್ಗಳಲ್ಲಿ ಹೆಚ್ಚಿನ ಸಂಖ್ಯೆಯ ಮುಸ್ಲಿಮರು ವಾಸಿಸುತ್ತಿದ್ದ ಕಾರಣಕ್ಕಾಗಿ ಮುಸ್ಲಿಮರನ್ನೇ ಗುರಿಪಡಿಸಿ ಸೀಲ್ ಡೌನ್ ಹೇರಲಾಗಿದೆ ಎಂಬ ಗುಮಾನಿ ಇಲ್ಲಿನ ಸ್ಥಳೀಯರಿಗಿತ್ತೆನ್ನಲಾಗಿದೆ. ಯಾವಾಗ ಅಲ್ಲಿ ಸೀಲ್ ಡೌನ್ ಮಾಡಲಾಯಿತೋ ಆ ಕ್ಷಣದಿಂದಲೇ ಅಲ್ಲಿ ಕೋಮು ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು ಎಂದು ಪತ್ರಿಕಾ ವರದಿಗಳು ತಿಳಿಸುತ್ತವೆ. ಏಪ್ರಿಲ್ 11 ರ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ, “On some streets within the ward, residents could be seen putting up makeshift barricades, which they said was to keep the ward’s Muslim population out. “Because of the people who have come here from the Tablighi Jamaat event we are scared that the infection will spread,” said Ashok, 40, a local resident” ಎಂದು ವರದಿಯಾಗಿತ್ತು.
ಸೀಲ್ಡೌನ್ ಆದ ನಂತರ ಸ್ಥಳೀಯ ನಿವಾಸಿಗಳಿಗೆ ಆಹಾರ ಮತ್ತು ಅಗತ್ಯ ವಸ್ತುಗಳನ್ನು ಮನೆಗಳಿಗೆ ತರುವುದು ಸಹ ತೀರಾ ಕಷ್ಟಕರವಾಗಿತ್ತು. ಮರುದಿನ ಅಂದರೆ ಏಪ್ರಿಲ್ 12ರಂದು ದ ಹಿಂದೂ ಪತ್ರಿಕೆಯಲ್ಲಿ, ““Shortage of milk and vegetables are the biggest complaints of residents of these areas. “There has been no milk or vegetables for two days, contrary to announcements made about auto-rickshaws and pushcarts being deployed for the service,” said Subhadra Bai, a resident of Shamanna Garden.” ಎಂದು ವರದಿಯಾಗಿತ್ತು.
ಹೀಗಾಗಿ ಈ ಎರಡು ಏರಿಯಾಗಳಲ್ಲಿ ಮಾತ್ರ ಏಕೆ ಸೀಲ್ ಡೌನ್ ಮಾಡಲಾಯಿತು ಎಂಬುದರ ಕುರಿತು ಸೂಕ್ತ ಮಾಹಿತಿ ಇಲ್ಲದಿರುವುದು ಹಾಗೂ ತಬ್ಲಿಗಿ ಜಮಾತ್ ಘಟನೆಯ ನಂತರದಲ್ಲಿ ದೇಶದಲ್ಲಿ ಮುಸ್ಲಿಂ ವಿರೋಧಿ ಕೋಮುಭಾವನೆ ಹೆಚ್ಚಾದದ್ದು ಹಾಗೂ ಅತ್ಯವಶ್ಯಕ ವಸ್ತುಗಳ ಪೂರೈಕೆಯಲ್ಲಿನ ಕೊರತೆಯುಂಟಾದದ್ದು, ಈ ಎಲ್ಲವೂ ಸೇರಿಕೊಂಡು ಎರಡೂ ಪ್ರದೇಶಗಳಲ್ಲಿ ಅಯೋಮಯ ಸ್ಥಿತಿಯನ್ನು ಉಂಟುಮಾಡಿದ್ದವು.
ಏಪ್ರಿಲ್ 19ರ ಸಂಜೆ, ಕತ್ತಲಾಗುತ್ತಿದ್ದಂತೆ ಪಾದರಾಯನಪುರದಲ್ಲಿ ಉದ್ರಿಕ್ತ ಗುಂಪೊಂದು ಸೀಲ್ಡೌನ್ ಜಾರಿಗೊಳಿಸಲು ಇರಿಸಲಾಗಿದ್ದ ಬ್ಯಾರಿಕೇಡ್ಗಳನ್ನು ಮುರಿದು ಹಾಕಿ ಪುಂಡಾಟಿಕೆ ಮೆರೆದಿದೆ ಎಂಬ ಸಂಗತಿಯನ್ನು ಮಾಧ್ಯಮಗಳು ತಿಳಿಸಿವೆ.
ಸೂಕ್ತ ಮಾಹಿತಿಯ ಕೊರತೆಯಿಂದ ಹೆಚ್ಚಿದ ಗಾಳಿಸುದ್ದಿಗಳು
ಸ್ಥಳೀಯ ನಿವಾಸಿಗಳು ಹೇಳುವ ಪ್ರಕಾರ, ಯಾವುದೇ ರೋಗಲಕ್ಷಣಗಳೇ ಇಲ್ಲದಿದ್ದರೂ ತಮ್ಮನ್ನು ಯಾಕೆ ಕ್ವಾರಂಟೀನ್ಗೆ ಕರೆದೊಯ್ಯಲಾಗುತ್ತಿದೆ ಎಂಬುದರ ಬಗ್ಗೆ ಸ್ಥಳೀಯರಲ್ಲಿ ಗೊಂದಲ ಶುರುವಾಗಿತ್ತು. ಇದರ ಜೊತೆಯಲ್ಲಿ ಕ್ವಾರಂಟೀನ್ ಇಡುವ ಜಾಗಗಳಲ್ಲಿ ಯಾವುದೇ ಸುರಕ್ಷತೆಯಾಗಲೀ ಸ್ವಚ್ಛತೆಯಾಗಲೀ ಇಲ್ಲ ಎಂಬ ಬಗ್ಗೆ ಅದಾಗಲೇ ಅಂತೆಕಂತೆಗಳು ಸ್ಥಳೀಯರಲ್ಲಿ ಹರಡಿದ್ದವು. ಇಷ್ಟು ಮಾತ್ರವಲ್ಲದೇ ಮುಸ್ಲಿಮರನ್ನು ಕರೆದೊಯ್ದು ಅವರಿಗೆ ರೋಗ ಹರಡಿಸಲಾಗುತ್ತದೆ ಎಂಬಂತಹ ವದಂತಿಯೂ ಹರಡಿತ್ತು.
BBMP ಅಧಿಕಾರಿಗಳು ಸರಿಯಾದ ಮಾಹಿತಿ ನೀಡದೇ ಒಂದೊಂದು ಸಲ ಒಂದೊಂದು ರೀತಿಯಲ್ಲಿ ಹೇಳಿದ್ದರು ಎಂದು ಸ್ಥಳೀಯರು ದೂರಿದ್ದಾರೆ. ಮೊದಲು ಕಾರ್ಪೊರೇಶನ್ ಅಧಿಕಾರಿಗಳು ಸೆಕೆಂಡರಿ ಕಾಂಟಾಕ್ಟುಗಳನ್ನು (ಎರಡನೆಯ ಸಂಪರ್ಕಿತರು) ಭಾನುವಾರ ಬೆಳಿಗ್ಗೆ ಕರೆದೊಯ್ಯುವುದಾಗಿ ಹೇಳಿದ್ದರು, ನಂತರ ಅದನ್ನು ಸೋಮವಾರ ಬೆಳಿಗ್ಗೆ ಎಂದು ಬದಲಿಸಿ ಹೇಳಿದರು. ಅಂತಿಮವಾಗಿ ಪುನಃ ಮಾತು ಬದಲಿಸಿ ಭಾನುವಾರವೇ ಎರಡನೇ ಸಂಪರ್ಕಿತರನ್ನು ಕರೆದೊಯ್ಯುವುದಾಗಿ ತಿಳಸಿದ್ದರಿ. ಅವರು ಯಾವ ಸಮಯಕ್ಕೆ ಕರೆದೊಯ್ಯುತ್ತಾರೆ ಎಂಬುದನ್ನೂ ಸರಿಯಾಗಿ ತಿಳಿಸಿರಲಿಲ್ಲ. ಇದೆಲ್ಲರಿಂದಾಗಿ ಸ್ಥಳೀಯರಲ್ಲಿ ಗೊಂದಲ ಸೃಷ್ಟಿಯಾಗಿ ಆತಂಕದ ವಾತಾವರಣ ಉಂಟಾಗಿತ್ತು.
ಭಾನುವಾರದ ಹೊತ್ತಿಗಾಗಲೇ ಮೇಲೆ ತಿಳಿಸಿದ ವದಂತಿಗಳೆಲ್ಲಾ ಹರಡಿದ್ದವು. BBMP ಯಾವುದೇ ನಿಖರ ಮಾಹಿತಿ ನೀಡದ ಕಾರಣ ಸ್ಥಳೀಯರಲ್ಲಿ ಮುಂದೆ ಏನಾಗಲಿದೆಯೋ ಎಂಬ ಆತಂಕ, ಉದ್ವಿಗ್ನತೆ ಮನೆಮಾಡಿತ್ತು. ಮಕ್ಕಳನ್ನು ಪೋಷಕರಿಂದ ಬೇರ್ಪಡಿಸಲಾಗುತ್ತದಂತೆ ಎಂಬ ವದಂತಿಯೊಂದು ಸೇರಿಕೊಂಡು ಜನರಲ್ಲಿ ಈಗಾಗಲೇ ಮನೆಮಾಡಿದ್ದ ಆತಂಕ ಭಯವನ್ನು ಇಮ್ಮಡಿಗೊಳಿಸಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಹೊತ್ತಿಗೆ ಕೆಲವರು ಗುಂಪುಗೂಡಿಕೊಂಡು ಸೀಲ್ಡೌನ್ ಮಾಡಲು ನಿಲ್ಲಿಸಿದ್ದ ತಗಡಿನ ಶೀಟುಗಳನ್ನು ಬಡಿದು, ಎಳೆದು ಕಿತ್ತುಹಾಕಿದ್ದಾರೆ. ಒಂದು ಕಡೆಯಲ್ಲಿ ಪೊಲೀಸರು ಕೂರಲು ಹಾಕಿಕೊಂಡಿದ್ದ ಶಾಮಿಯಾನವನ್ನು ಎಳೆದು ಬೀಳಿಸಿದ್ದಾರೆ. ಟೇಬಲ್ ಕುರ್ಚಿಗಳನ್ನು ಪಕ್ಕಕ್ಕೆ ಎಸೆದಿದ್ದಾರೆ ಮತ್ತು ಕೆಲವು ಬೀದಿ ದೀಪಗಳಿಗೆ ಕಲ್ಲೆಸೆದು ಹಾಳುಮಾಡಿದ್ದಾರೆ ಎಂದು ಸಹ ಸ್ಥಳೀಯರು ಹೇಳಿದರು. ಇದನ್ನು ಮಾಧ್ಯಮಗಳು ಸಹ ವರದಿ ಮಾಡಿವೆ. ಸ್ಥಳೀಯರ ಪ್ರಕಾರ ಈ ಪುಂಡಾಟಿಕೆ 15ರಿಂದ 20 ನಿಮಿಷಗಳ ಕಾಲ ನಡೆದಿದೆ.
ಪೊಲೀಸ್ ಅಥವಾ ಆರೋಗ್ಯ ಸಿಬ್ಬಂದಿಯ ಮೇಲೆ ಯಾವುದೇ ಹಲ್ಲೆ ನಡೆದಿಲ್ಲ
ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪೊಲೀಸ್ ಉಪ ಆಯುಕ್ತರು (ಪಶ್ಚಿಮ) ಸುದ್ದಿ ವಾಹಿನಿಯೊಂದರಲ್ಲಿ ಮಾತನಾಡುತ್ತಾ, ‘ಅಲ್ಲಿ ಗಲಾಟೆಯಾಗಿದೆ, ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ, ಆದರೆ ಈ ಸಂದರ್ಭದಲ್ಲಿ ಯಾರ ಮೇಲೂ ಹಲ್ಲೆ ನಡೆದಿಲ್ಲ’ ಎಂದು ಸ್ಪಷ್ಟಪಡಿಸಿದ್ದರು. ಪೊಲೀಸ್ ಕಮಿಷನರ್ ಶ್ರೀ ಭಾಸ್ಕರ್ ರಾವ್ ಅವರು ಟೈಮ್ಸ್ ನೌ ವಾಹಿನಿಗೆ ನೀಡಿದ ಹೇಳಿಕೆಯನ್ನು ಟೈಮ್ಸ್ ನೌ ವಾಹಿನಿ 2020 ರ ಏಪ್ರಿಲ್ 20 ರಂದು ರಾತ್ರಿ 8.32 ಕ್ಕೆ ಟ್ವೀಟ್ ಮಾಡಿದೆ. ಅದರಲ್ಲಿ ಶ್ರೀ ಭಾಸ್ಕರ್ ರಾವ್ ಅವರು” “..And adjacent places also people cooperated peacefully and were going. Only this group I don’t know at whose provocation they resorted to violence, broke two gates and broke one counter where medical professionals usually seated but No police personne , no doctors, no health workers have been injured in this incident” (“ಹಾಗೆಯೇ ಪಕ್ಕದ ಸ್ಥಳಗಳ ಜನರು ಸಹ ನಮಗೆ ಶಾಂತಿಯುತವಾಗಿ ಸಹಕರಿಸಿದರಲ್ಲದೇ ಹೊರಡು ಹೋಗುತ್ತಿದ್ದರು. ಯಾರ ಕುಮ್ಮಕ್ಕಿನಿಂದಲೋಈ ಒಂದು ಗುಂಪು ಮಾತ್ರ ಹಿಂಸೆಗಿಳಿದು ಎರಡು ಗೇಟುಗಳನ್ನು ಮುರಿದು ವೈದ್ಯಕೀಯ ಸಿಬ್ಬಂದಿ ಕುಳಿತುಕೊಳ್ಳುವ ಒಂದು ಕೌಂಟರನ್ನು ಒಡೆದು ಹಾಕಿತ್ತು. ಆದರೆ ಯಾವುದೇ ಪೊಲೀಸ್ ಸಿಬ್ಬಂದಿಯಾಗಲೀ, ಯಾವುದೇ ವೈದ್ಯರಾಗಲೀ ಯಾವುದೇ ಆಶಾ ಕಾರ್ಯಕರ್ತೆಯರಾಗಲೀ ಈ ಘಟನೆಯಲ್ಲಿ ಹಲ್ಲೆಗೊಳಗಾಗಲಿಲ್ಲ”) ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.
ಈ ಘಟನೆಯಲ್ಲಿ ಆಶಾ ಕಾರ್ಯಕರ್ತೆಯರು ಯಾವುದೇ ಹಲ್ಲೆಗೆ ಒಳಗಾಗಲಿಲ್ಲ ಎಂದು ಆಶಾ ವರ್ಕರ್ಸ್ ಯೂನಿಯನ್ ರಾಜ್ಯ ಕಾರ್ಯದರ್ಶಿಯೂ ತಿಳಿಸಿದ್ದಾರೆ. ವಸ್ತುಸ್ಥಿತಿ ಹೀಗಿದ್ದರೂ ಸರ್ಕಾರದ ಕೆಲವು ಸಚಿವರು, ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳು ಮತ್ತೆ ಮತ್ತೆ ಹೇಳುತ್ತಿರುವುದೇನೆಂದರೆ ‘ಈ ಘಟನೆಯಲ್ಲಿ ವೈದ್ಯರ ಮೇಲೆ, ಆಶಾ ಕಾರ್ಯಕರ್ತೆಯರ ಮೇಲೆ, ಮತ್ತು ಪೊಲೀಸರ ಮೇಲೆ ಹಲ್ಲೆ ನಡೆಸಲಾಗಿದೆ’ ಎಂದು. ಹೀಗೆ ಇವರೆಲ್ಲಾ ಹೇಳುತ್ತಿರುವುದರಿಂದಾಗಿ ಮುಸಲ್ಮಾನರನ್ನು ಅದರಲ್ಲೂ ಈ ಎರಡು ವಾರ್ಡ್ಗಳ ಜನರ ಮೇಲಿನ ಜನರನ್ನು ಮತ್ತಷ್ಟು ಕಳಂಕಕ್ಕೆ ದೂಡಿದಂತಾಗಿದೆ.
BBMPಯ ವಿಫಲತೆ
ಮೊದಲನೆಯದಾಗಿ, ಸೀಲ್ ಡೌನ್ ಆದ ಪ್ರದೇಶಗಳಲ್ಲಿ ನಿವಾಸಿಗಳಿಗೆ ಸರಿಯಾಗಿ ಪಡಿತರ ಮತ್ತು ಅಗತ್ಯ ಸೇವೆಗಳು ಎಲ್ಲರಿಗೂ ತಲುಪುವಂತೆ ಮಾಡುವಲ್ಲಿ BBMP ಸಂಪೂರ್ಣವಾಗಿ ವಿಫಲವಾಗಿತ್ತು. 12.04.2020 ರಂದು ದಿ ಹಿಂದೂ ಪತ್ರಿಕೆಯಲ್ಲಿ ವರದಿಯಾಗಿರುವ ಪ್ರಕಾರ, ಈ ಎರಡೂ ವಾರ್ಡ್ಗಳಲ್ಲಿನ ನಿವಾಸಿಗಳು ತಮ್ಮ ಮೇಲೆ ಹೇರಲಾದ ಸೀಲ್ ಡೌನ್ ಪರಿಸ್ಥಿತಿಗೆ ಹೊಂದಿಕೊಳ್ಳಲು ಕಷ್ಟಪಡುತ್ತಿದ್ದು ಹಾಲು ಮತ್ತು ತರಕಾರಿಗಳಿಗೂ ಅಲ್ಲಿ ತತ್ವಾರವಾಗಿತ್ತು. ಬಹಳ ಜನಸಂಖ್ಯೆಯಿದ್ದು ಅತ್ಯಂತ ಜನನಿಬಿಡವಾದ ಈ ವಾರ್ಡುಗಳಲ್ಲಿ ಇರುವ ಹೆಚ್ಚಿನವರು ಬಡ ಕೂಲಿಕಾರರೇ ಆಗಿದ್ದರಿಂದ ಅವರಿಗೆ ಆಹಾರದ ವ್ಯವಸ್ಥೆ ಕಾಳಜಿಯ ವಿಷಯವಾಗಿತ್ತು.
. ಎರಡನೆಯದಾಗಿ, ಕೋವಿಡ್ ಪರೀಕ್ಷೆ, ಕ್ವಾರಂಟೈನ್ ಮತ್ತು ‘ಹತೋಟಿ ಕ್ರಮಗಳ’ (containment) ಕುರಿತು ಸ್ಥಳೀಯರಿಗೆ ಸರಿಯಾದ ಮಾಹಿತಿಯನ್ನೇ BBMPಯವರು ನೀಡಿರಲಿಲ್ಲ ಎಂದು ನಿವಾಸಿಗಳು ಹೇಳಿದ್ದಾರೆ. ಜನರಲ್ಲಿ ಜಾಗೃತಿ ಮೂಡಿಸಲು ಅಗತ್ಯವಾದ IEC (ಮಾಹಿತಿ, ಶಿಕ್ಷಣ, ಸಂವಹನ) ಚಟುವಟಿಕೆಗಳನ್ನು ಬಿಬಿಎಂಪಿ ಕೈಗೊಂಡಿರಲಿಲ್ಲ. ಅದರಲ್ಲೂ ಜನರಿಗೆ ದೈನಂದಿನ ಅಗತ್ಯ ವಸ್ತುಗಳನ್ನು ತರಲೂ ಅವಕಾಶವಿರದ ‘ಹತೋಟಿ ವಲಯದಲ್ಲಿ’ BBMP ಇಂತಹ ಸರಿಯಾದ ಮಾಹಿತಿಯನ್ನು ಜನರಿಗೆ ಒದಗಿಸುವುದು ಅತ್ಯವಶ್ಯವಾಗಿತ್ತು. ಸಾಂಕ್ರಾಮಿಕ ರೋಗವನ್ನು ಕೋಮು ದ್ವೇಷ ಹೆಚ್ಚಿಸಲು ಬಳಸಿಕೊಳ್ಳುತ್ತಿರುವ ಹಾಗೂ ಪ್ರತಿಯೊಂದನ್ನೂ ರೋಚಕಗೊಳಿಸುತ್ತಾ ಬಂದಿರುವ ಕನ್ನಡ ಸುದ್ದಿ ಮಾಧ್ಯಮಗಳನ್ನು ಈ ವಿಷಯದಲ್ಲಿ ನಂಬಿಕೊಳ್ಳುವಂತೆಯೂ ಇರಲಿಲ್ಲ. ಹಾಗಾಗಿ ಜನರಿಗೆ ಸರಿಯಾದ ಮಾಹಿತಿ ನೀಡುವ ಹೊಣೆ BBMPಯದೇ ಆಗಿತ್ತು.
ಮೂರನೆಯದಾಗಿ, ಮತ್ತು ಬಹಳ ಮುಖ್ಯವಾಗಿ ಯಾರೋ ಕೆಲವರಷ್ಟೇ ಸಂಪರ್ಕಿಸಬಹುದಾದ ಜನಪ್ರತಿನಿಧಿಗಳನ್ನು ಹೊರತುಪಡಿಸಿದಂತೆ ಸ್ಥಳೀಯ ಜನರಲ್ಲಿ ಮನೆಮಾಡಿದ ಆತಂಕ, ಭಯ, ಉದ್ವಿಗ್ನತೆಗಳನ್ನು, ಗೊಂದಲಗಳನ್ನು ಬಗೆಹರಿಸುವಂತಹ ವ್ಯಕ್ತಿಗಳು ಯಾರೂ ಅಲ್ಲಿರಲಿಲ್ಲ. ಈ ಪರಿಸ್ಥಿತಿಗಳು ‘ಹತೋಟಿ ವಲಯದ’ ಜನರ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿದ್ದವು. ಪಾದರಾಯನಪುರದಲ್ಲಿ ನಡೆದ ದುರದೃಷ್ಟಕರ ಘಟನೆಯನ್ನು ಅರ್ಥಮಾಡಿಕೊಳ್ಳಲು ಮೇಲಿನ ಸಂಗತಿಗಳ ವಿಷಯದಲ್ಲಿ ಆಡಳಿತಾಂಗದ ವಿಫಲತೆಯನ್ನು ಕಡೆಗಣಿಸುವಂತಿಲ್ಲ.
ಇಂತಹ ಸನ್ನಿವೇಶದಲ್ಲಿ ಕೆಳಕಂಡ ಪ್ರಶ್ನೆಗಳಿಗೆ ನಾವು ಸಮರ್ಪಕ ಉತ್ತರಗಳನ್ನು ಕೇಳುತ್ತಿದ್ದೇವೆ:
- 10.04.2020 ರಂದು ಬಾಪುಜಿನಗರ (ವಾರ್ಡ್ ಸಂಖ್ಯೆ 134) ಮತ್ತು ಪಾದರಾಯನಪುರ (ವಾರ್ಡ್ ಸಂಖ್ಯೆ 135) ವಾರ್ಡ್ಗಳನ್ನು ಯಾವ ಆಧಾರದ ಮೇಲೆ ಸೀಲ್ ಡೌನ್ ಮಾಡಲಾಯಿತು?
- ಹತೋಟಿ ವಲಯಕ್ಕೆ ಸಂಬಂಧಿಸಿದ ಆದೇಶ (Containment Zone Order) ಹೊರಡಿಸದೆ ಮತ್ತು ಇನ್ಸಿಡೆಂಟ್ ಕಮಿಷನರ್ ನೇಮಿಸುವುದು ಹಾಗೂ ಇನ್ಸಿಡೆಂಟ್ ಕಮಾಂಡ್ ಸೆಂಟರ್ ಸ್ಥಾಪಿಸುವುದನ್ನೂ ಒಳಗೊಂಡಂತೆ ಯಾವುದೇ ಸೂಕ್ತ ಸಿದ್ಧತೆಯಿಲ್ಲದೇ, ಮೂಲಸೌಕರ್ಯಗಳಿಲ್ಲದೇ ಸೀಲ್ ಡೌನ್ ಜಾರಿಗೊಳಿಸಿದ್ದಾದರೂ ಹೇಗೆ?
- ಈಗಾಗಲೇ ಸೀಲ್ ಡೌನ್ ಗೆ ಒಳಪಡಿಸಲಾಗಿದ್ದ ಇಲ್ಲಿನ ಜನರನ್ನು ಸಾಂಸ್ಥಿಕ ಕ್ವಾರಂಟೈನ್ ಗೆ ಒಳಪಡಿಸುವಅಗತ್ಯವೇನಿತ್ತು? ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಕರ್ನಾಟಕ 07/04/2020 ರಂದು ಹೊರಡಿಸಿದ ಸುತ್ತೋಲೆಯ ಪ್ರಕಾರ (ಸಂ. ಡಿಡಿ / ಎಸ್ಎಸ್ಯು / ಕೋವಿಡ್ -19 / `7 / 2019-20) ಕೋವಿಡ್ ಪರೀಕ್ಷೆಯಲ್ಲಿ ನೆಗಟಿವ್ ಎಂದು ಫಲಿತಾಂಶ ಬಂದ ಎರಡನೆಯ ಸಂಪರ್ಕಿತರನ್ನು ಅವರವರ ಮನೆಯಲ್ಲೇ ಕ್ವಾರಂಟೈನ್ ಮಾಡಬೇಕೆಂದಿದೆ. ಈ ಎರಡು ವಾರ್ಡ್ಗಳ ವಿಷಯದಲ್ಲಿ ಮೊದಲ ಮತ್ತು ಎರಡನೆಯ ಸಂಪರ್ಕಿತರನ್ನು ಸಾಂಸ್ಥಿಕ ಕ್ವಾರಂಟೀನ್ ಗೆ ಯಾಕಾಗಿ ಕಳಿಸಲಾಯಿತು? ಪರೀಕ್ಷೆಯಲ್ಲಿ ನೆಗಟಿವ್ ಬಂದವರನ್ನು ಹೋಮ್ ಕ್ವಾರಂಟೀನ್ ಗೆ ಮತ್ತೆ ಕಳುಹಿಸಲಾಯಿತೇ?
- ಈ ಎರಡು ವಾರ್ಡ್ಗಳನ್ನುಸೀಲ್ ಡೌನ್ ಮಾಡಿದ ನಂತರದಲ್ಲಿ ಈ ಪ್ರದೇಶಗಳ ಎಲ್ಲಾ ನಿವಾಸಿಗಳಿಗೆ ಮನೆ ಬಾಗಿಲಿಗೆ ದಿನಸಿ ಪದಾರ್ಥಗಳನ್ನು ತಲುಪಿಸುವುದನ್ನೂ ಸೇರಿದಂತೆ ಅಗತ್ಯ ಸೇವೆಗಳನ್ನು ಒದಗಿಸಲು ಯಾವೆಲ್ಲ ಕ್ರಮಗಳನ್ನು BBMP ತೆಗೆದುಕೊಂಡಿತು?
- ಜನರಿಗೆ ಜಾಗೃತಿ ಮೂಡಿಸುವ ದೃಷ್ಟಿಯಿಂದ ಒಂದು “ಕೇಂದ್ರೀಕೃತವಾದ ಮಾಹಿತಿ, ಶಿಕ್ಷಣ ಮತ್ತು ಸಂವಹನ ಅಭಿಯಾನ” ವನ್ನು ನಡೆಸಲು 10.04.2020 ರ ತರುವಾಯದಲ್ಲಿ ಯಾವ ಬಗೆಯ ಕ್ರಮಗಳನ್ನು ಕೈಗೊಳ್ಳಲಾಗಿದೆ?
- ಸೀಲ್ ಡೌನ್ ಆದ ಪ್ರದೇಶದಲ್ಲಿ ವಾಸಿಸುವ ವ್ಯಕ್ತಿಗಳಿಗೆ ಸರ್ಕಾರವು ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ತಿಳಿಸಲು ಹಾಗೂ ಜನರಲ್ಲಿ ಭೀತಿ ಮತ್ತು ತಪ್ಪು ಮಾಹಿತಿ ಹರಡದಂತೆ ತಡೆಯಲು BBMP ಮತ್ತು ಆರೋಗ್ಯ ಇಲಾಖೆಗಳು ಯಾವೆಲ್ಲಾ ಕ್ರಮಗಳನ್ನು ಕೈಗೊಂಡಿದ್ದವು?
- ಬಿಬಿಎಂಪಿ ಆಯುಕ್ತರು ಹೊರಡಿಸಿದ್ದ ಆದೇಶವು 20.04.2020ರಿಂದಷ್ಟೇ ಅನ್ವಯವಾಗುವಂತಿದ್ದರೂ 19.04.2020ರಿಂದಲೇ ಅದನ್ನು ಜಾರಿಗೊಳಿಸಿದ್ದು ಹೇಗೆ?
- 19.04.2020 ರಂದು ಆದೇಶವನ್ನು ಜಾರಿಗೊಳಿಸುವಾಗ, ಇನ್ಸಿಡೆಂಟ್ ಕಮಾಂಡ್ ಸೆಂಟರ್ ಸ್ಥಾಪಿಸುವುದನ್ನೂ ಸೇರಿದಂತೆ ಎಲ್ಲಾ ಸಾಂಸ್ಥಿಕ ಸಿದ್ಧತಾ ಕ್ರಮಗಳನ್ನು ಅನುಸರಿಸಲಾಗಿತ್ತೇ?
ಶಿಫಾರಸುಗಳು
1. ಕಾನೂನಿನ ಪ್ರಕಾರವಾಗಿ ಕ್ರಮ ಜರುಗಿಸುವುದು: ಪುಂಡಾಟಿಕೆಯಲ್ಲಿ ತೊಡಗಿದ್ದವರನ್ನು ಕಾನೂನಿನ ಪ್ರಕಾರವೇ, ಯಾವುದೇ ಪೂರ್ವಾಗ್ರಹವಿಲ್ಲದೇ ವಿಚಾರಣೆ ನಡೆಸಬೇಕು. ಇಡೀ ಘಟನೆಯ ಬಗ್ಗೆ ನಿಷ್ಪಕ್ಷಪಾತ ವಿಚಾರಣೆ ನಡೆಸಬೇಕು.
-
ಸಮುದಾಯದ ಭಾಗವಹಿಸುವಿಕೆ, ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಮತ್ತು ಮಾಹಿತಿ ಒದಗಿಸುವುದು: : ಮೇಲೆ ನೋಡಿದಂತೆ, ಸರ್ಕಾರದ ಮತ್ತು ಜನರ ಮಧ್ಯೆ ಸಂವಹನದಲ್ಲಿ ತೀವ್ರ ಸಮಸ್ಯೆ ಉಂಟಾಗಿರುವುದನ್ನು ಕಾಣಬಹುದು. ಇದರಿಂದಾಗಿ ‘ಹತೋಟಿಯ ವಲಯದಲ್ಲಿ ವಾಸಿಸುವವರಲ್ಲಿ ಭೀತಿಯ ವಾತಾವರಣ ಉಂಟಾಗಿದೆ. ವ್ಯಕ್ತಿಗಳ ಮೇಲೆ ಹೆಚ್ಚುವರಿ ನಿರ್ಬಂಧಗಳನ್ನು ಹೇರಿದಾಗ, ಉದ್ವಿಗ್ನತೆಗೆ ಕಾರಣವಾಗುವ ಭೀತಿ ಸಹಜವಾಗಿ ಉಂಟಾಗುತ್ತದೆ ಎಂಬುದನ್ನು ಗಣನೆಗೆ ತೆಗೆದುಕೊಳ್ಳಬೇಕು. ಹೀಗಾಗಿ, ಕಂಟೈನ್ಮೆಂಟ್ ಅಥವಾ ಹತೋಟಿ ವಲಯಗಳಿಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಜಾರಿಗೊಳಿಸುವಾಗ ಸ್ಥಳೀಯ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಅತ್ಯವಶ್ಯಕ ಮತ್ತು ಇದನ್ನು ಕೇವಲ ಕಾನೂನು – ಸುವ್ಯವಸ್ಥೆಯ ವಿಷಯವಾಗಿ ಪರಿಗಣಿಸಬಾರದು. ಕ್ವಾರಂಟೀನ್ ಇಡುವ ಜಾಗದ ಮಾಹಿತಿ, ಅಲ್ಲಿ ನೀಡಲಾಗುವ ಸೌಲಭ್ಯಗಳ ಮಾಹಿತಿ ಹಾಗೂ ಕ್ವಾರಂಟೀನ್ ಗೆ ಒಳಗಾದವರು ತಮ್ಮ ಕುಟುಂಬದೊಂದಿಗೆ ಸಂಪರ್ಕದಲ್ಲಿರಲು ಯಾವ ಸೌಲಭ್ಯ ಒದಗಿಸಲಾಗುತ್ತದೆ ಎಂಬೆಲ್ಲಾ ಅಗತ್ಯ ಮಾಹಿತಿಗಳನ್ನು ಜನರಿಗೆ ಮೊದಲೇ ನೀಡಿರಬೇಕು.
-
ಜೀವನಾವಶ್ಯಕ ವಸ್ತುಗಳ ಪೂರೈಕೆಯನ್ನು ಖಾತ್ರಿಪಡಿಸುವುದು: 17.04.2020 ರ ಸುತ್ತೋಲೆ ಮತ್ತು 19.04.2020 ರಂದು ಹೊರಡಿಸಿದ ಆದೇಶಗಳಿಗೆ ಅನುಗುಣವಾಗಿ, ‘ಹತೋಟಿ ವಲಯದಲ್ಲಿ ಇರುವ ಎಲ್ಲಾ ನಿವಾಸಿಗಳಿಗೆ ಮತ್ತು ಕುಟುಂಬಗಳಿಗೆ ಸಮರ್ಪಕ ಪ್ರಮಾಣದಲ್ಲಿ ಎಲ್ಲಾ ಅಗತ್ಯ ಸೇವೆಗಳನ್ನು ಒದಗಿಸುವುದು ಅತ್ಯವಶ್ಯ. ದಿನಗೂಲಿ ಮಾಡಿ ಹೊಟ್ಟೆ ತುಂಬಿಸಿಕೊಳ್ಳುವ ಕಾರ್ಮಿಕರಿಗೆ ಮತ್ತು ಸಮಾಜದ ದುರ್ಬಲ ವರ್ಗದವರಿಗೆ ಎಲ್ಲಾ ಜೀವನಾವಶ್ಯಕ ಪದಾರ್ಥಗಳನ್ನು ಬಾಗಿಲಿಗೆ ಹೋಗಿ ಕೊಡುವುದನ್ನು ಖಾತ್ರಿಪಡಿಸಬೇಕು.
-
ದುರದೃಷ್ಟಕರ ಘಟನೆಯ ಬಗ್ಗೆ ಹಾಗು 10.04.2020 ರಿಂದ ಜಾರಿಯಲ್ಲಿರುವ ಸೀಲ್–ಡೌನ್ ಕುರಿತು ಸ್ವತಂತ್ರ ತನಿಖೆ ನಡೆಸಬೇಕು: ವಿವಾದಿತ ಘಟನೆಯ ಕುರಿತಾಗಿ ಮತ್ತು 10.04.2020ರಿಂದ ಬಾಪೂಜಿನಗರ ಹಾಗೂ ಪಾದರಾಯನಪುರಗಳಲ್ಲಿ ಜಾರಿಗೊಳಿಸಲಾಗಿರುವ ಸೀಲ್ ಡೌನ್ ಕುರಿತಾಗಿ ಸ್ವತಂತ್ರ ತನಿಖೆಯೊಂದು ಜರೂರಾಗಿ ನಡೆಯಬೇಕಿದೆ. ಸೀಲ್-ಡೌನ್ ಜಾರಿಗೊಳಿಸುವಾಗ ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು, ಎಲ್ಲಾ ಜನರಿಗೆ ಪಡಿತರ ಮತ್ತಿತರ ಜೀವನಾವಶ್ಯಕ ವಸ್ತುಗಳನ್ನು ಒದಗಿಸಲು ಯಾವ ಕ್ರಮ ಕೈಗೊಳ್ಳಲಾಗಿತ್ತು ಹಾಗೂ ಸಮುದಾಯದ ಸದಸ್ಯರಿಗೆ ಮಾಹಿತಿ ಒದಗಿಸಲು ಯಾವ ಬಗೆಯಲ್ಲಿ ಸಂವಹನ ಕ್ರಮಗಳನ್ನು ಕೈಗೊಳ್ಳಲಾಗಿತ್ತು ಎಂಬೆಲ್ಲಾ ವಿಷಯಗಳು ಈ ತನಿಖೆಯ ಮೂಲಕ ಹೊರಬರಬೇಕು.
-
ಮಾನಸಿಕ ಆರೋಗ್ಯ: ಭಾರತೀಯ ಭಾಷೆಗಳಲ್ಲಿ ಆಪಪ್ತ ಸಮಾಲೋಚನೆ ನಡೆಸುವ ಆಪ್ತ ಸಮಾಲೋಚಕರನ್ನು (ಕೌನ್ಸೆಲರ್ಸ್) ನೇಮಕಗೊಳಿಸಿ ಅವರು ಕೈಗೆ ಸಿಗುವಂತೆ ಮಾಡಬೇಕು.
-
ಘಟನೆಯು ಕೋಮುದ್ವೇಷಕ್ಕೆ ಬಳಕೆಯಾಗದಂತೆ ಕ್ರಮ ತೆಗೆದುಕೊಳ್ಳುವುದು: ವಿವಾದಿತ ಘಟನೆಯ ಬಗ್ಗೆ ಕನ್ನಡ ಸುದ್ದಿ ಮಾಧ್ಯಮಗಳು ವರದಿ ಮಾಡುತ್ತಿರುವ ರೀತಿ ಮತ್ತು ವಿವಿಧ ಜನಪ್ರತಿನಿಧಿಗಳು ಹಲವಾರು ಹೇಳಿಕೆಗಳನ್ನು ನೀಡಿದ ರೀತಿ ಅತ್ಯಂತ ಅಪಾಯಕಾರಿ ರೀತಿಯಲ್ಲಿದೆ. ಇವೆಲ್ಲವೂ ಘಟನೆಯನ್ನು ಕೋಮುದ್ವೇಷದ ಹಂತಕ್ಕೆ ಕೊಂಡೊಯ್ದಿದೆ.
ಮುಖ್ಯಮಂತ್ರಿಗಳ ಅವರ ರಾಜಕೀಯ ಕಾರ್ಯದರ್ಶಿ ಶ್ರೀ ರೇಣುಕಾಚಾರ್ಯ ಅಲ್ಲಿನ ಜನರನ್ನು ಎನ್ಕೌಂಟರ್ ಮಾಡಿ ಕೊಂದು ಹಾಕಬೇಕು ಎಂದು ಹೇಳಿದ ಹೇಳಿಕೆ’ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶ್ರೀ.ಸಿ.ಟಿ. ರವಿ , ಇಡೀ ಮುಸ್ಲಿಂ ಸಮುದಾಯವನ್ನೇ ಹೊಣೆ ಮಾಡಿ ನೀಡಿದ ಹೇಳಿಕೆಗಳಂತಹ ಹೇಳಿಕೆಗಳನ್ನು ತಡೆಯಬೇಕು. ಈಗ ಇಂತಹ ಹೇಳಿಕೆ ನೀಡಿರುವವರ ಮೇಲೆ ಪ್ರಕರಣ ದಾಖಲಿಸಬೇಕು. ಘಟನೆಗೆ ಕೋಮು ಬಣ್ಣ ಬಳಿಯದ ರೀತಿಯಲ್ಲಿ, ಜನರನ್ನು ಕೋಮು ನೆಲೆಯಲ್ಲಿ ಉದ್ರೇಕಿಸಿ ದ್ವೇಷಪೂರತಿ ವಾತಾವರಣ ಸೃಷ್ಟಿಸುವುದನ್ನು ತಡೆಯುವ ನಿಟ್ಟಿನಲ್ಲಿ ಮಾಧ್ಯಮಗಳ ವಿರುದ್ಧ ಕಟ್ಟುನಿಟ್ಟಾದ ಕ್ರಮಗಳನ್ನು ತೆಗೆದುಕೊಳ್ಳುವುದು ಅತೀ ಅವಶ್ಯಕವಾಗಿದೆ.
-
7. ಆಶಾ ಕಾರ್ಯಕರ್ತೆಯರಿಗೆ ರಕ್ಷಣೆ: ಆಶಾ ಕಾರ್ಯಕರ್ತೆಯರಿಗೆ ವೈಯಕ್ತಿಕ ರಕ್ಷಣಾ ಸಾಧನಗಳನ್ನು (PPE) ಮತ್ತು ದೈಹಿಕ ಭದ್ರತೆಯನ್ನು ಒದಗಿಸಬೇಕು. ಆಶಾ ಕಾರ್ಯಕರ್ತೆಯರು ಮತ್ತು ಜನರ ನಡುವೆ ಪರಸ್ಪರ ವಿಶ್ವಾಸ ಏರ್ಪಡುವಂತಹ ವಾತಾವರಣವನ್ನು ಸೃಷ್ಟಿಸಬೇಕು. ಇದಕ್ಕೆ ಪೂರಕವಾಗಿ ಆಶಾ ಕಾರ್ಯಕರ್ತೆಯರಿಗೆ ಯಾವೆಲ್ಲಾ ಬಗೆಯಲ್ಲಿ ಬೆಂಬಲ, ಉತ್ತೇಜನ ಬೇಕಿದೆ ಎಂಬ ಬಗ್ಗೆ ಆಶಾ ಕಾರ್ಯಕರ್ತೆಯರ ಯೂನಿಯನ್ನೊಂದಿಗೆ ಸರ್ಕಾರ ಮಾತುಕತೆ ನಡೆಸಬೇಕು.
ಒಪ್ಪಿಗೆ ನೀಡಿ ಸಹಿ ಹಾಕಿದವರು
- ಆಕಾಶ್ ಭಟ್ಟಾಚಾರ್ಯ, ಅಜೀಂ ಪ್ರೇಂಜಿ ವಿಶ್ವವಿದ್ಯಾಲಯ
- ಅಲ್ ಫಾರೂಖನ್ ಟ್ರಸ್ಟ್
- ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್
- ಆಲ್ ಇಂಡಿಯಾ ಪೀಪಲ್ಸ್ ಫೋರಂ
- ಆಪ್ ಇಂಡಿಯಾ ಪ್ರೊಗ್ರೆಸಿವ್ ವಿಮೆನ್ಸ್ ಅಸೋಸಿಯೇಶನ್
- ಆನಂದ್ ಬಾಲಾ
- ಅನೇಕಾ ಟ್ರಸ್ಟ್
- APCR ಕರ್ನಾಟಕ
- ಆರತಿ ಚೋಕ್ಸಿ
- ಅರುಣ್ ವೆಂಕಟರಾಮನ್
- ಅವನಿ ಚೋಕ್ಸಿ, ವಕೀಲರು
- ಬಿ.ಸುರೇಶ್, ಚಲನ ಚಿತ್ರ ಕಲಾವಿದರು ಮತ್ತು ರಂಗಕರ್ಮಿ
- ಶ್ರೀಕಾಂತ್ ಕಣ್ಣನ್
- ಬೆಂಗಳೂರು ಜಿಲ್ಲಾ ಬೀದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ
- ಬಿಟ್ಟು ಕೆ ಆರ್, ಕರ್ನಾಟಕ ಜನಶಕ್ತಿ
- ಬಿ ಟಿ ವೆಂಕಟೇಶ್ ಮತ್ತು ರೀಚ್ ಲಾಯರ್ಸ್
- ಕ್ಯಾಂಪೇನ್ ಎಗೇನ್ಸ್ಟ್ ಹೇಟ್ ಸ್ಪೀಚ್
- ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್
- ಚಂದನ್ ಗೌಡ
- ಕ್ಲಿಫ್ಟನ್ ಡಿ ರೊಜಾರಿಯೋ, ವಕೀಲರು
- ದಲಿತ ಸಂಘರ್ಷ ಸಮಿತಿ (ಭೀಮವಾದ)
- ದಲಿತ ಸಂಘರ್ಷ ಸಮಿತಿ (ಸಂಯೋಜಕ)
- ದಲಿತ ಸಮರ ಸೇನೆ
- ಡಾ.ಸಯೀದ್ ಮುಜಾಹಿದ್ ಹುಸೇನ್
- ಡಾ.ಸಿಲ್ವಿಯಾ ಕಾರ್ಪಗಂ, ಸಾರ್ವಜನಿಕ ಆರೋಗ್ಯ ವೈದ್ಯರು
- ಎನ್ವಿರಾನಿಕ್ಸ್ ಟ್ರಸ್ಟ್
- ಫಾದರ್ ಜೆರಾಲ್ಡ್, ಆಶಿರ್ವಾದ್, ಸೆಂಟರ್ ಫಾರ್ ಸೋಶಿಯಲ್ ಕನ್ಸರ್ನ್, ಬೆಂಗಳೂರು
- ಫಾತಿಮಾ ಹುಸೇನ್
- ಫಾತಿಮಾ ಪೂನವಾಲಾ
- ಘೌಸ್ ಖಾನ್
- ಗ್ರಾಮ ಸೇವಾ ಸಂಘ
- ಗುಂಡಣ್ಣ ಚಿಕ್ಮಮಗಳೂರು,
- ಸಮುದಾಯ ಬೆಂಗಳೂರು
- ಗುಂಜನ್ ಜುತ್ಶಿ
- ಹಲೀಮಾ ಸಲೀಮ್
- ಹನುಮಂತ್ ರಾವ್
- ಹರ್ಷಕುಮಾರ್ ಕುಗ್ವೆ, ಪತ್ರಕರ್ತರು, ಲೇಖಕರು
- ಹ್ಯೂಮನ್ ರೈಟ್ಸ್ ಡಿಫೆಂಡರ್ಸ್ ಅಲರ್ಟ್ – ಇಂಡಿಯಾ
- ಕರ್ನಾಟಕ ಜನಶಕ್ತಿ
- ಲಿಯೋ ಸಲ್ಡಾನ್ಹಾ, ಎನ್ವಿರಾನ್ಮೆಂಟ್ ಸಪೋರ್ಟ್ ಗ್ರೂಪ್
- ಲುಕ್ಮಾನ್ ಪಾಷಾ ಹಿಂದೂಪುರ
- ಮಧು ಭೂಷಣ್, ಮಹಿಳಾ ಹಕ್ಕುಗಳ ಕಾರ್ಯಕರ್ತರು
- ಮೇಜರ್ ಜನರಲ್, ಸುಧೀರ್ ಒಂಭತ್ಕೆರೆ
- ಮಂಗಳಾ ದಿಲೀಪ್, ಲೇಖಕರು
- ಮೈತ್ರೇಯಿ ಕೃಷ್ಣನ್, ವಕೀಲರು
- ಮರಾ
- ಮಾರಿ ಮಾರ್ಸೆಲ್ ಥೇಕೇಕರ
- ಅರ್ಬಾಜ್, ಹಮಾರಿ ಆವಾಜ್
- ಮೂವ್ಮೆಂಟ್ ಫಾರ್ ಜಸ್ಟೀಸ್
- ಎನ್ ಜಯರಾಮ್
- ನಾವು ಭಾರತೇಯರು
- ನಂದಿನಿ ಮನಸ್ವಿನಿ
- ನ್ಯಾಷನಲ್ ಅಲೈಯನ್ಸ್ ಆಫ್ ಪೀಪಲ್ಸ್ ಮೂವ್ಮೆಂಟ್ಸ್, ಕರ್ನಾಟಕ
- ನವಾಜ್ ಅಮನ್
- ನೆಹಜಾನ್ ಅಜೀಜ್, ವಕೀಲ
- ನಿವೇದಿತಾ ಮೆನನ್
- ನೂರ್ ಫಾತಿಮಾ
- ಪೆಗ್ಗಿ ದೇವರಾಜ್
- ಪೀಪಲ್ಸ್ ವಾಚ್
- ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್-ಕರ್ನಾಟಕ
- ಪ್ರಜ್ವಲ್ ಆರಾಧ್ಯಾ, ವಕೀಲರು
- ರಾಹಿ
- ರಘುಪತಿ ಎಸ್.
- ರಾಜೇಂದ್ರನ್ ನಾರಾಯಣನ್, ಅಜಿಮ್ ಪ್ರೇಮ್ಜಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರು
- ರಿಮಾ ಘೋಷ್
- ರಾಬಿನ್ ಕ್ರಿಸ್ಟೋಫರ್, ವಕೀಲರು
- ರೋಸ್ಮರಿ ವಿಶ್ವನಾಥ್, ಲರ್ನಿಂಗ್ ನೆಟ್ವರ್ಕ್
- ರೂಮಿ ಹರೀಶ್
- ಸಫಾಯಿ ಕರ್ಮಾಚಾರಿ ಕಾವಲು ಸಮಿತಿ – ಕರ್ನಾಟಕ
- ಸಲೀಮ್ ಅನ್ಸಾರಿ
- ಸತ್ಯಾನಂದ್ ಮುಕುಂದ್ – ಕಾರ್ಯದರ್ಶಿ, ಎಐಟಿಯುಸಿ, ಬೆಂಗಳೂರು
- ಸೆಂಥಿಲ್ ಕುಮಾರ್, ಶಿಕ್ಷಕರು
- ಶೆರ್ಲಿ ಮೇರಿ ಜೋಸೆಫ್
- ಸಿದ್ಧಾರ್ಥ್ ಕೆ ಜೆ, ಸ್ವತಂತ್ರ ಸಂಶೋಧಕರು
- ಸ್ಲಂ ಜನಾಂದೋಲನ
- ಸ್ಲಂ ಜನರ ಸಂಘಟನೆ
- ಸ್ಲಂ ಜಗತ್ತು
- ಸ್ತ್ರೀ ಜಾಗೃತಿ ಸಮಿತಿ
- ಸುಧಾ ಎನ್, ಸ್ವತಂತ್ರ ಸಂಶೋಧಕರು ಮತ್ತು ಹೋರಾಟಗಾರರು
- ಸುಪ್ರಭಾ ಶೇಷನ್, ಅಶೋಕ ಫೆಲೋ
- ಸ್ವಾತಿ ಶೇಷಾದ್ರಿ, ಸಂಶೋಧಕರು, ಬೆಂಗಳೂರು
- ಸ್ವರಾಜ್ ಅಭಿಯಾನ್ – ಕರ್ನಾಟಕ
- ಸೈಯದ್ ತೌಸಿಫ್ ಮಸೂದ್
- ವಿಶೇಶ್ ಗುರು, ಸ್ವತಂತ್ರ ಸಂಶೋಧಕರು
- ಜೈನಾಬ್ ಸುಲೇಮಾನ್