ಮಂಗಳೂರಿನಲ್ಲಿ ಕರೋನಾ ಸೋಂಕಿನಿಂದ ಮೃತ ಮಹಿಳೆಯ ಶವ ಸಂಸ್ಕಾರಕ್ಕೆ ಅವಕಾಶ ನಿರಾಕರಿಸಿ ಸ್ವತಃ ಶಾಸಕರೇ ಜಿಲ್ಲಾಡಳಿತಕ್ಕೆ ಅಡ್ಡಿಪಡಿಸಿದ ಆಘಾತಕಾರಿ ಘಟನೆ ನಡೆದಿದೆ.
ಕರೋನಾ ಸೋಂಕಿತ ವೈದ್ಯರು ಮೃತಪಟ್ಟಾಗ ಅವರ ಶವಸಂಸ್ಕಾರಕ್ಕೆ ಅವಕಾಶ ನೀಡದೇ ಅಡ್ಡಿಪಡಿಸಿದ ಮತ್ತು ಶವಸಂಸ್ಕಾರಕ್ಕೆ ಬಂದಿದ್ದ ವೈದ್ಯರು ಸೇರಿದಂತೆ ಕರೋನಾ ಸೇನಾನಿಗಳ ಮೇಲೆ ಹಲ್ಲೆ ನಡೆಸಿದ ಘಟನೆಗಳು ಮೇಘಾಲಯದ ಶಿಲ್ಲಾಂಗ್ ಮತ್ತು ತಮಿಳುನಾಡಿನ ಚೆನ್ನೈನಲ್ಲಿ ನಡೆದಿದ್ದವು. ಆ ಘಟನೆಗಳು ಇನ್ನೂ ಹಸಿಯಾಗಿರುವಾಗಲೇ ಇದೀಗ ರಾಜ್ಯದ ಬುದ್ದಿವಂತರ ಜಿಲ್ಲೆ ಎಂದು ಕರೆಯಲಾಗುವ ದಕ್ಷಿಣಕನ್ನಡದಲ್ಲಿ ಅಂತಹದ್ದೇ ಆಘಾತಕಾರಿ ಘಟನೆ ನಡೆದಿದೆ. ವಿಚಿತ್ರವೆಂದರೆ; ಸ್ವತಃ ವೈದ್ಯರಾಗಿರುವ ಸುರತ್ಕಲ್ ಶಾಸಕರೇ ಇಂತಹ ಹೇಯ ಕೃತ್ಯದ ನೇತೃತ್ವ ವಹಿಸಿದ್ದಾರೆ!
ಗುರುವಾರ ಕರೋನಾಕ್ಕೆ ಬಲಿಯಾದ ಬಂಟ್ವಾಳ ತಾಲೂಕಿನ ಮಹಿಳೆಯ ಶವ ಸಂಸ್ಕಾರವನ್ನು ಮಂಗಳೂರು ನಗರ ವ್ಯಾಪ್ತಿಯ ವಾಮಂಜೂರಿನ ಹಿಂದೂ ರುಧ್ರಭೂಮಿಯಲ್ಲಿ ನಡೆಸಲು ಜಿಲ್ಲಾಡಳಿತ ಮುಂದಾಗಿತ್ತು. ಆದರೆ, ಆ ಸ್ಮಶಾನದ ಆಸುಪಾಸಿನ ಜನ ಅದಕ್ಕೆ ವಿರೋಧಿಸಿ ಪ್ರತಿಭಟನೆಗಿಳಿದರು. ಜನರ ಪ್ರತಿಭಟನೆಗೆ ಸುರತ್ಕಲ್ ಶಾಸಕ ಹಾಗೂ ವೈದ್ಯ ಡಾ ಭರತ್ ಶೆಟ್ಟಿಯವರೇ ಸಾಥ್ ನೀಡಿ, ಯಾವುದೇ ಕಾರಣಕ್ಕೂ ಜನರ ವಿರೋಧದ ನಡುವೆ ಮಹಿಳೆಯ ಶವವನ್ನು ಹಿಂದೂ ರುಧ್ರಭೂಮಿಯಲ್ಲಿ ಮಾಡಬಾರದು ಎಂದು ವಿರೋಧಿಸಿದರು. ಬಳಿಕ ಜಿಲ್ಲಾಡಳಿತ ಮಂಗಳೂರಿನ ವಿವಿಧ ಹಿಂದೂ ರುದ್ರಭೂಮಿಗಳಲ್ಲಿ ಶವಸಂಸ್ಕಾರಕ್ಕೆ ಯತ್ನಿಸಿದಾಗಲೂ ತಡರಾತ್ರಿಯವರೆಗೆ ಎಲ್ಲಾ ಕಡೆ ಹಿಂದೂ ಮುಖಂಡರ ನೇತೃತ್ವದಲ್ಲೇ ಅದಕ್ಕೆ ಪ್ರಬಲ ವಿರೋಧ ವ್ಯಕ್ತವಾಯಿತು.
ಹಾಗಾಗಿ ಜಿಲ್ಲಾಡಳಿತ ಶಾಸಕರ ಬೆದರಿಕೆಗೆ ಮಣಿದು, ಮಹಿಳೆಯ ಮೂಲ ಊರು ಬಂಟ್ವಾಳದಲ್ಲಿ ಶವಸಂಸ್ಕಾರಕ್ಕೆ ಮುಂದಾದಾಗಲೂ ಅಲ್ಲಿಯೂ ಜನರ ತೀವ್ರ ವಿರೋಧ ವ್ಯಕ್ತವಾಯಿತು. ಬಳಿಕ ಸಮೀಪದ ಕೈಕುಂಜೆ ಎಂಬ ಹಳ್ಳಿಯಲ್ಲಿ ತಡರಾತ್ರಿ ಎರಡು ಗಂಟೆಯ ಸುಮಾರಿಗೆ ಶವಸಂಸ್ಕಾರ ಮಾಡಲಾಯಿತು ಎಂದು ವರದಿಯಾಗಿದೆ.
ಈ ನಡುವೆ, ಆಡಳಿತಾರೂಢ ಬಿಜೆಪಿಯ ಶಾಸಕ ಡಾ ಭರತ್ ಶೆಟ್ಟಿ, ತಮ್ಮ ಅನುಮತಿ ಇಲ್ಲದೆ ತಮ್ಮ ಕ್ಷೇತ್ರವ್ಯಾಪ್ತಿಯಲ್ಲಿ ಎಲ್ಲಿಯೂ ಯಾವುದೇ ಕರೋನಾ ಸೋಂಕಿನಿಂದ ಮೃತಪಟ್ಟವರ ಶವಸಂಸ್ಕಾರಕ್ಕೆ ಅವಕಾಶ ಕೊಡುವುದಿಲ್ಲ ಎಂದು ಬಹಿರಂಗ ಹೇಳಿಕೆಯನ್ನೇ ನೀಡಿದ್ದಾರೆ. ಇದು ನಿಜಕ್ಕೂ ಅಮಾನವೀಯ. ಅಷ್ಟೇ ಅಲ್ಲ; ಕಾನೂನಬಾಹಿರ ಕೂಡ.
ಏಕೆಂದರೆ; ಯಾವುದೇ ವ್ಯಕ್ತಿಯ ಅಂತಿಮ ಸಂಸ್ಕಾರಕ್ಕೆ ಅವಕಾಶ ನೀಡದೇ ಇರುವುದು ಕಾನೂನು ರೀತ್ಯ ಅಪರಾಧ. ಮೇಘಾಲಯದ ಶಿಲ್ಲಾಂಗ್ ನಲ್ಲಿ ಕರೋನಾ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಸೋಂಕು ತಗುಲಿ ಚಿಕಿತ್ಸೆ ಫಲಿಸದೇ ಸಾವುಕಂಡ ವೈದ್ಯ ಡಾ ಜಾನ್ ಎಸ್ ಸೈಲೋ ಅವರ ಶವ ಸಂಸ್ಕಾರಕ್ಕೆ ಕೆಲವರು ಅಡ್ಡಿಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಘಾಲಯ ಹೈಕೋರ್ಟ್ ಕಳೆದ ವಾರ(ಏ.17) ನೀಡಿದ ತೀರ್ಪು ಈ ಹಿನ್ನೆಲೆಯಲ್ಲಿ ಮಹತ್ವದ್ದು. ಆ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ತುರ್ತು ವಿಚಾರಣೆ ನಡೆಸಿದ ಹೈಕೋರ್ಟಿನ ದ್ವಿಸದಸ್ಯ ಪೀಠ, ಕರೋನಾ ಸೋಂಕಿತರ ಮೃತ ಶರೀರದ ನಿರ್ವಹಣೆ, ಶವ ಸಂಸ್ಕಾರ ಮತ್ತಿತರ ಕಾರ್ಯಗಳಿಗೆ ಸರ್ಕಾರಿ ಸಿಬ್ಬಂದಿಗೆ ಅಡ್ಡಿಪಡಿಸುವ ಯಾವುದೇ ವ್ಯಕ್ತಿ, ಸ್ಥಳೀಯ ಸಂಸ್ಥೆ, ಧಾರ್ಮಿಕ ಕೇಂದ್ರಗಳ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಜರುಗಿಸಿ ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಆ ಹಿನ್ನೆಲೆಯಲ್ಲಿ ದಕ್ಷಿಣಕನ್ನಡ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ಈ ವಿಷಯದಲ್ಲಿ ಶವ ಸಂಸ್ಕಾರಕ್ಕೆ ಜನರ ಗುಂಪುಕಟ್ಟಿಕೊಂಡು ಅಡ್ಡಿಪಡಿಸಿದ್ದೇ ಅಲ್ಲದೆ, ಇನ್ನು ಮುಂದೆಯೂ ತಮ್ಮ ಅನುಮತಿ ಇಲ್ಲದೆ ಯಾವುದೇ ಕರೋನಾ ರೋಗಿಯ ಶವ ಸಂಸ್ಕಾರಕ್ಕೆ ತಮ್ಮ ವ್ಯಾಪ್ತಿಯಲ್ಲಿ ಅವಕಾಶ ನೀಡುವುದೇ ಇಲ್ಲ ಎನ್ನುವ ಮೂಲಕ ಕಾನೂನು ಮತ್ತು ಆಡಳಿತಕ್ಕೆ ಸವಾಲು ಹಾಕಿರುವ ಶಾಸಕರ ವಿರುದ್ಧ ಯಾವ ಕ್ರಮಜರುಗಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.
ಈ ನಡುವೆ, ಕರೋನಾ ನಿರ್ವಹಣೆಯ ವಿಷಯದಲ್ಲಿ ಸಮನ್ವಯದ ಹೊಣೆ ಹೊತ್ತಿರುವ ಹಿರಿಯ ಸಚಿವ ಸುರೇಶ್ ಕುಮಾರ್ ಅವರು, ಶುಕ್ರವಾರ ಬೆಂಗಳೂರಿನಲ್ಲಿ ತಮ್ಮ ದೈನಂದಿನ ಮಾಧ್ಯಮ ಮಾಹಿತಿ ವೇಳೆ, ಈ ಘಟನೆಯನ್ನು ಪ್ರಸ್ತಾಪಿಸಿ, ಯಾವುದೇ ಕರೋನಾ ರೋಗಿಯ ಶವ ಸಂಸ್ಕಾರ ಮಾಡಿದ್ದಲ್ಲಿ ಅದರಿಂದ ಸೋಂಕು ಹರಡುವ ಅಪಾಯವಿಲ್ಲ. ಜನರು ಈ ವಿಷಯದಲ್ಲಿ ತಪ್ಪು ತಿಳಿವಳಿಕೆಯಿಂದ ಹೊರಬರಬೇಕು ಎಂದಿದ್ದಾರೆ. ಜೊತೆಗೆ ಅನಕ್ಷರಸ್ಥರು, ತಿಳಿವಳಿಕೆ ಕೊರತೆಯಿಂದ ಹೀಗೆ ಮಾಡಿರಬಹುದು ಎಂದೂ ಹೇಳಿದ್ಧಾರೆ. ಆದರೆ, ತಮ್ಮದೇ ಪಕ್ಷದ ವೃತ್ತಿನಿರತ ವೈದ್ಯರಾಗಿರುವ ಶಾಸಕರೊಬ್ಬರು ಇಂತಹ ಕೃತ್ಯದ ನೇತೃತ್ವ ವಹಿಸಿದ್ದಾರೆ ಮತ್ತು ಸರ್ಕಾರಿ ಅಧಿಕಾರಿಗಳಿಗೂ ಸವಾಲು ಹಾಕಿದ್ದಾರೆ ಎಂಬುದನ್ನು ಸಚಿವರು ಯಾಕೆ ಮರೆತರು ಎಂಬುದು ಅಚ್ಚರಿಹುಟ್ಟಿಸಿದೆ.
ಈ ನಡುವೆ, ಬಿಬಿಎಂಪಿ ವೈದ್ಯಕೀಯ ಸಿಬ್ಬಂದಿ ಮತ್ತು ಪೊಲೀಸರು ಬೆಂಗಳೂರಿನ ಪಾದರಾಯನಪುರದಲ್ಲಿ ಶಂಕಿತ ಸೋಂಕಿತರ ಕ್ವಾರಂಟೈನ್ ಗೆ ಕರೆದೊಯ್ಯಲು ರಾತ್ರಿ ಹೊತ್ತು ಹೋಗುವುದು ಬೇಡ. ಹಗಲು ಹೊತ್ತಲ್ಲಿ ಹೋಗೋಣ, ನಾನು ಜೊತೆಗೆ ಬರುವೆ ಎಂದ ಶಾಸಕ ಜಮೀರ್ ಅಹಮದ್ ಅವರಿಗೆ, ಅದೇನು ಅವರ ಸ್ವಂತ ಆಸ್ತಿಯೇ? ಸರ್ಕಾರ ತನ್ನ ಕೆಲಸ ಮಾಡಲು ಅವರನ್ನು ಯಾಕೆ ಕೇಳಬೇಕು ಎಂದು ಸ್ವತಃ ಸಿಎಂ ಯಡಿಯೂರಪ್ಪ ಅವರೇ ಗುಡುಗಿದ್ದರು. ಜೊತೆಗೆ ಆ ವಿಷಯದಲ್ಲಿ ಜಮೀರ್ ವಿರುದ್ಧ ರಾಜ್ಯವ್ಯಾಪಿ ಬೊಬ್ಬೆ ಹೊಡೆದಿದ್ದ ಬಿಜೆಪಿ ಮತ್ತು ಸಂಘಪರಿವಾರದ ಮಂದಿ ಅವರನ್ನು ಜೈಲಿಗೆ ಹಾಕಿ, ಅವರೇ ಗಲಭೆಗೆ ಕುಮ್ಮಕ್ಕು ನೀಡಿದ್ದಾರೆ ಎಂದು ಹುಯಿಲೆಬ್ಬಿಸಿದ್ದರು.
ಇದೀಗ ಮಂಗಳೂರಿನಲ್ಲಿ ಕೇವಲ ರೋಗಿಗಳ ತಪಾಸಣೆ ಅಥವಾ ಕ್ವಾರಂಟೈನ್ ವಿಷಯಕ್ಕಲ್ಲದೆ, ಶವ ಸಂಸ್ಕಾರಕ್ಕೆ ಅಡ್ಡಿಪಡಿಸಿ ಜಿಲ್ಲಾಡಳಿತಕ್ಕೇ ಬೆದರಿಕೆ ಹಾಕಿ ಸೆಡ್ಡು ಹೊಡೆದಿರುವುದು ಅದೇ ಯಡಿಯೂರಪ್ಪ ಅವರ ಪಕ್ಷದ ಶಾಸಕ. ಅದೂ ಅನಕ್ಷರಸ್ಥರಲ್ಲ, ಅಮಾಯಕರಲ್ಲ, ರೋಗದ ಕುರಿತ ತಿಳಿವಳಿಕೆ ಇರದ ಯಾರೋ ಸಾಮಾನ್ಯ ಶಾಸಕರಲ್ಲ; ಅವರು ಸ್ವತಃ ವೈದ್ಯಕೀಯ ಶಿಕ್ಷಣ ಪಡೆದು, ವೈದ್ಯರಾಗಿ ಸೇವೆ ಸಲ್ಲಿಸಿ ಅನುಭವ ಇರುವ ವ್ಯಕ್ತಿ. ಹಾಗಾಗಿ ಇಂತಹವರೇ ಹೀಗೆ ಜನರಲ್ಲಿ ಮೌಢ್ಯ ಬಿತ್ತಿದರೆ, ಜನರಿಗೆ ಇಂತಹ ಕೆಟ್ಟ ಮತ್ತು ಕಾನೂನುಬಾಹಿರ ನಿದರ್ಶನಗಳನ್ನು ನೀಡಿದರೆ, ರಾಜ್ಯದ ಉದ್ದಗಲಕ್ಕೆ ಯಾವ ಸಂದೇಶ ಹೋಗುತ್ತದೆ. ಅದರಲ್ಲೂ ಸ್ವತಃ ಸರ್ಕಾರದ ಭಾಗವಾಗಿರುವ ಆಡಳಿತ ಪಕ್ಷದ ಶಾಸಕರೇ ಹೀಗೆ ಮಾಡಿದರೆ, ಅದು ಜನಸಾಮಾನ್ಯರಿಗೆ ನೀಡುವ ಕುಮ್ಮಕ್ಕು ಎಂಥದ್ದು?
ಶಾಸಕ ಜಮೀರ್ ಅಹಮದ್ ಅವರ ಕೋರಿಕೆಯನ್ನೇ ದೊಡ್ಡ ಅಪರಾಧವೆಂದವರು, ಅವರನ್ನು ಬಂಧಿಸಿ ಜೈಲಿಗೆ ಹಾಕಿ ಎಂದವರು ಈಗ ಯಾಕೆ ಮೌನಕ್ಕೆ ಶರಣಾಗಿದ್ದಾರೆ. ಮೃತ ವ್ಯಕ್ತಿಯೊಬ್ಬರ, ಅದರಲ್ಲೂ ಮಾತೆ ಎಂದು ಆರಾಧಿಸುವ ಹಿಂದೂ ಮಹಿಳೆಯೊಬ್ಬರ ಅಂತಿಮ ಸಂಸ್ಕಾರಕ್ಕೂ ಅವಕಾಶ ನೀಡದೇ ಇರುವುದು ಯಾವ ಸಂಸ್ಕೃತಿ, ಯಾವ ಧರ್ಮ? ಸರ್ಕಾರಿ ಅಧಿಕಾರಿಗಳಿಗೆ ಬೆದರಿಕೆ ಹಾಕುವುದು, ಕರೋನಾ ವಿಶೇಷ ಕಾನೂನು ನಿಯಮಾವಳಿಗಳಿಗೆ, ಮೇಘಾಲಯ ಹೈಕೋರ್ಟ್ ಆದೇಶದಂತಹ ಕಾನೂನು ಆದೇಶಗಳಿಗೆ ವಿರುದ್ಧವಾಗಿ ನಡುಬೀದಿಯಲ್ಲಿ ನಟ್ಟನಡುರಾತ್ರಿ ಜನರ ಗುಂಪುಕಟ್ಟಿಕೊಂಡು ರಸ್ತೆಗಿಳಿದು ಅಲ್ಲೋಲಕಲ್ಲೋಲ ಸೃಷ್ಟಿಸುವುದು ಯಾವ ರೀತಿಯಲ್ಲಿ ಸಮರ್ಥನೀಯ? ಎಂಬ ಪ್ರಶ್ನೆಗಳಿಗೆ ರಾಜ್ಯ ಸರ್ಕಾರ ಮತ್ತು ದಕ್ಷಿಣಕನ್ನಡ ಜಿಲ್ಲಾಡಳಿತದ ಮುಂದಿನ ನಡೆ ಉತ್ತರ ಕೊಡಬೇಕಿದೆ.
ಇಲ್ಲದೇ ಹೋದರೆ, ಇದು ಕರೋನಾದಂತಹ ಭೀಕರ ಮಹಾಮಾರಿಯ ವಿಷಯದಲ್ಲಿಯೂ ಸರ್ಕಾರ ಮತ್ತು ಆಡಳಿತಪಕ್ಷಗಳು ರಾಜಕೀಯ ಮೇಲಾಟ ನಡೆಸುತ್ತಿವೆ ಎಂಬ ಸಂದೇಶ ರವಾನಿಸುವ ಅಪಾಯವಿದೆ ಮತ್ತು ಅಂತಹ ಸಂದೇಶ ಕೋವಿಡ್-19 ವಿರುದ್ಧದ ವ್ಯವಸ್ಥೆಯ ಒಮ್ಮನಸ್ಸಿನ ಹೋರಾಟದ ಮೇಲೆಯೂ ವ್ಯತಿರಿಕ್ತ ಪರಿಣಾಮಬೀರಲಿದೆ. ಅದು ನಿಜಕ್ಕೂ ಅಪಾಯಕಾರಿ.