ಜಗತ್ತಿನ ದೊಡ್ಡ ದೊಡ್ಡ ಸೆಲೆಬ್ರಿಟಿಗಳನ್ನು ನೀವು ಆರಾಮಾಗಿ ನೋಡಬಹುದಾದ ಸ್ಥಳ ಹಾಂಕಾಂಗ್. ಯಾಕೆಂದರೆ ಅದು ಅವರ ನೆಚ್ಚಿನ ತಾಣ. ಇಡೀ ಹಾಂಕಾಂಗೇ ಒಂದು ಶಾಪಿಂಗ್ ಮಾಲ್. ಅದು ಅತಿದೊಡ್ಡ ಅಂತಾರಾಷ್ಟ್ರೀಯ ಮಾರುಕಟ್ಟೆ. ಬೆಂಗಳೂರಿಗೊಂದು ಕಮರ್ಷಿಯಲ್ ಸ್ಟ್ರೀಟ್ ಇದ್ದಂತೆ ಜಗತ್ತಿಗೆ ಹಾಂಕಾಂಗ್. ಅತ್ಯುತ್ತಮ ವಿನ್ಯಾಸಗಳ ಜುವೆಲರಿಗಳಿಂದ ಹಿಡಿದು ಮಕ್ಕಳ ಆಟಿಕೆವರೆಗೆ ಅಲ್ಲಿ ಇಂಥದ್ದು ಸಿಗೋದಿಲ್ಲ ಅನ್ನೋದೇ ಇಲ್ಲ. ವಿಶೇಷವೆಂದರೆ ಇಲ್ಲಿ ಬೇರೆ ದೇಶಗಳಿಗೆ ಹೋಲಿಸಿದರೆ ಮೂವತ್ತರಿಂದ ನಲವತ್ತು ಪರ್ಸೆಂಟ್ ಕಡಿಮೆ ಬೆಲೆಗೆ ಎಲ್ಲವೂ ಸಿಗುತ್ತವೆ. ಹೀಗಾಗಿಯೇ ಹಾಂಕಾಂಗ್ ಪ್ರವಾಸಿಗರ ಸ್ವರ್ಗ.
ಇಂಥ ಹಾಂಕಾಂಗ್ ಕಳೆದ ವರ್ಷ ಜೂನ್ ತಿಂಗಳಿನಲ್ಲಿ ಅಂತಾರಾಷ್ಟ್ರೀಯ ಮಾಧ್ಯಮಗಳ ಹೆಡ್ ಲೈನ್ ಆಗತೊಡಗಿತು. ಕಾರಣ ಅಲ್ಲಿ ಭುಗಿಲೆದ್ದ ಪ್ರತಿಭಟನೆ. ಈ ಜನಾಕ್ರೋಶದ ಹಿನ್ನೆಲೆಯನ್ನು ಅರಿಯಬೇಕಾದರೆ ಹಾಂಕಾಂಗ್ ಎಂದರೆ ಏನು ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಹಾಂಕಾಂಗ್ ಜಗತ್ತಿನ ಹಲವು ರಾಷ್ಟ್ರಗಳ ಹಾಗೆಯೇ ಬ್ರಿಟಿಷ್ ಆಡಳಿತಕ್ಕೆ ಒಳಪಟ್ಟಿತ್ತು. ತೀರಾ ಇತ್ತೀಚೆಗೆ ಅಂದರೆ 1997ರಲ್ಲಿ ಬ್ರಿಟಿಷ್ ಸರ್ಕಾರ, ಅದನ್ನು ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾಗೆ ಬಿಟ್ಟುಕೊಟ್ಟಿತು. ಹೀಗೆ ಅಧಿಕಾರ ಹಸ್ತಾಂತರವಾಗುವಾಗ ಒಪ್ಪಂದವೊಂದನ್ನು ಮಾಡಿಕೊಳ್ಳಲಾಗಿತ್ತು. ಒಪ್ಪಂದದ ಪ್ರಕಾರ ಹಾಂಕಾಂಗ್ ಮೇನ್ ಲ್ಯಾಂಡ್ ಚೀನಾದ ಆಡಳಿತಕ್ಕೆ ಒಳಪಟ್ಟರೂ ಸ್ವಾಯತ್ತ ಸ್ಥಾನಮಾನವನ್ನು ಹೊಂದಿತ್ತು. ಹಾಂಕಾಂಗ್ ತನ್ನದೇ ಆದ ಶಾಸನಸಭೆ, ನ್ಯಾಯಾಂಗ, ಪೊಲೀಸ್ ವ್ಯವಸ್ಥೆಯನ್ನು ಹೊಂದಿದೆ. ಇಲ್ಲದೇ ಇರುವುದು ಮಿಲಿಟರಿ ವ್ಯವಸ್ಥೆ ಒಂದೇ. ಅದನ್ನು ಚೀನಾ ನಿಭಾಯಿಸುತ್ತದೆ. ಇದನ್ನು ‘ಒಂದು ದೇಶ, ಎರಡು ವ್ಯವಸ್ಥೆ’ ಎಂದು ಸರಳವಾಗಿ ಹೇಳಬಹುದು.
ನಿಮಗೆ ಈಗ ಕಾಶ್ಮೀರ ನೆನಪಾಗಿರಬಹುದಲ್ಲವೇ? ಭಾರತ ವಿಭಜನೆಯ ಸಂದರ್ಭದಲ್ಲಿ ಕಾಶ್ಮೀರಕ್ಕಾಗಿ ಭಾರತ ಮತ್ತು ಪಾಕಿಸ್ತಾನಗಳೆರಡೂ ಹಕ್ಕು ಮಂಡಿಸಿದ್ದವು. ಅವತ್ತು ಕಾಶ್ಮೀರದ ದೊರೆಯಾಗಿದ್ದ ರಾಜಾ ಹರಿಸಿಂಗ್ ಒಂದು ತೀರ್ಮಾನಕ್ಕೆ ಬರುವ ಮುನ್ನವೇ ಪಾಕಿಸ್ತಾನ ರಜಾಕ್ ಸೈನ್ಯವನ್ನು ಕಾಶ್ಮೀರದೊಳಗೆ ನುಗ್ಗಿಸಿತು. ರಾಜಾ ಹರಿಸಿಂಗ್ ಬೇರೆ ವಿಧಿಯಿಲ್ಲದೆ ಭಾರತ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡು ಹಲವು ನಿಬಂಧನೆಗಳೊಂದಿಗೆ ಕಾಶ್ಮೀರವನ್ನು ಭಾರತದೊಂದಿಗೆ ವಿಲೀನಗೊಳಿಸಿದ. ಭಾರತ ಸಂವಿಧಾನ ಜಾರಿಯಾದಾಗ ಕಾಶ್ಮೀರಕ್ಕೆ ಇತರೆಲ್ಲ ರಾಜ್ಯಗಳಿಗೆ ಇಲ್ಲದ ಪ್ರತ್ಯೇಕ ಸ್ಥಾನಮಾನ ಲಭ್ಯವಾಯಿತು. ನರೇಂದ್ರ ಮೋದಿ 2.0 ಸರ್ಕಾರ ಸಂವಿಧಾನದ 370ನೇ ವಿಧಿಯನ್ನು ಕಿತ್ತುಹಾಕುವವರೆಗೆ ಈ ವಿಶೇಷ ಸ್ಥಾನಮಾನಗಳು ಕಾಶ್ಮೀರ ಜನತೆಗೆ ಲಭ್ಯವಾಗಿದ್ದವು. ಅದೂ ಕೂಡ ‘ಒಂದು ದೇಶ, ಎರಡು ವ್ಯವಸ್ಥೆ’ ಮಾದರಿಯೇ. ವ್ಯವಸ್ಥೆ ಒಂದೇ ಬಗೆಯದಾದರೂ ಕಾಶ್ಮೀರ ಮತ್ತು ಹಾಂಕಾಂಗ್ ಐತಿಹಾಸಿಕ, ರಾಜಕೀಯ ಹಿನ್ನೆಲೆಗಳೇ ಬೇರೆ.
ಹಾಂಕಾಂಗ್ ಆಡಳಿತಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ (2019) ಏಪ್ರಿಲ್ ನಲ್ಲಿ ಚೀನಾ ಸರ್ಕಾರ ಮಸೂದೆಯೊಂದನ್ನು ತರಲು ಹೊರಟಿತು. ಈ ಮಸೂದೆಯ ಪ್ರಕಾರ ಅಗತ್ಯವಿದ್ದರೆ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದ ಆರೋಪಿಗಳನ್ನು ಹಾಂಕಾಂಗ್ ನಿಂದ ಚೀನಾಗೆ ಹಸ್ತಾಂತರಗೊಳಿಸುವ ಅಧಿಕಾರವನ್ನು ಚೀನಾ ಸರ್ಕಾರ ಪಡೆಯಲಿತ್ತು. ಇದು ಹಾಂಕಾಂಗ್ ನಾಗರಿಕರಲ್ಲಿ ಭಯ, ಅನುಮಾನ ಮತ್ತು ಆಕ್ರೋಶವನ್ನು ಹುಟ್ಟುಹಾಕಿತು. ಹಾಂಕಾಂಗ್ ತನ್ನದೇ ಆದ ಪೊಲೀಸ್ ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ಹೊಂದಿರುವಾಗ ಈ ಹೊಸ ವ್ಯವಸ್ಥೆ ಯಾಕೆ ಎಂಬ ಪ್ರಶ್ನೆ ಉದ್ಭವಿಸಿತು. ಆರೋಪಿಗಳನ್ನು ಹಸ್ತಾಂತರಿಸಿಕೊಳ್ಳುವ ಮಸೂದೆಯ ಮೂಲಕ ಹಾಂಕಾಂಗ್ ನಾಗರಿಕರನ್ನು ಹದ್ದುಬಸ್ತಿನಲ್ಲಿ ಇಡಲು ಚೀನಾ ಬಯಸುತ್ತಿದೆ ಎಂದು ಆರೋಪಿಸಿದ ನಾಗರಿಕ ಸಂಘಟನೆಗಳು 2019ರ ಜೂನ್ ತಿಂಗಳಿನಿಂದ ದೊಡ್ಡಮಟ್ಟದ ಪ್ರತಿಭಟನೆಗಳನ್ನು ಆರಂಭಿಸಿದವು. ಅಮೆರಿಕ, ಬ್ರಿಟನ್ ಸೇರಿದಂತೆ ಜಗತ್ತಿನ ನಾನಾ ದೇಶಗಳು ಹಾಂಕಾಂಗ್ ಜತೆಗೆ ವಾಣಿಜ್ಯ ಸಂಬಂಧಗಳನ್ನು ಹೊಂದಿರುವುದರಿಂದ ಸಹಜವಾಗಿಯೇ ಈ ಪ್ರತಿಭಟನೆ ಅಂತಾರಾಷ್ಟ್ರೀಯ ಮಟ್ಟದ ಸುದ್ದಿಯಾಯಿತು.
ಚೀನಾದ ಈ ಮಸೂದೆಯ ಗುರಿ ಏನಾಗಿತ್ತು? ಹಾಂಕಾಂಗ್ ನ ಪ್ರಜಾಪ್ರಭುತ್ವವಾದಿಗಳ ಪ್ರಕಾರ ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರನ್ನು ಟಾರ್ಗೆಟ್ ಮಾಡಿಯೇ ಈ ಕಾಯ್ದೆ ತರಲಾಗಿತ್ತು. ಹಾಂಕಾಂಗ್ ಜನತೆಯನ್ನು ಯಾವುದೋ ಅಪರಾಧದ ಹೆಸರಿನಲ್ಲಿ ಚೀನಾಗೆ ಕರೆದೊಯ್ದು ಹಿಂಸಿಸಬಹುದು ಮತ್ತು ಅನ್ಯಾಯದ ತನಿಖೆ-ವಿಚಾರಣೆ-ತೀರ್ಪುಗಳಿಗೆ ಗುರಿ ಮಾಡಬಹುದು ಎಂಬುದು ಅವರ ಆತಂಕವಾಗಿತ್ತು. ಸಾವಿರಾರು ಜನತೆ ಬೀದಿಗೆ ಬಂದರು. ಪೊಲೀಸರ ಜತೆ ಘರ್ಷಣೆಗಳಾದವು. ಪ್ರತಿಭಟನೆ ಹಿಂಸೆಗೆ ತಿರುಗಿತು. ಚೀನಾ ಸರ್ಕಾರ ಈ ಕರಾಳ ಕಾಯ್ದೆಯನ್ನು ಹಿಂದಕ್ಕೆ ಪಡೆಯುವುದಾಗಿ ಘೋಷಿಸಿತು. ಆದರೆ ಅಷ್ಟು ಹೊತ್ತಿಗಾಗಲೇ ತಡವಾಗಿತ್ತು. ಹಾಂಕಾಂಗ್ ಜನತೆ ಸಂಪೂರ್ಣ ಸ್ವಾಯತ್ತತೆಯ ಹೋರಾಟವನ್ನು ಆರಂಭಿಸಿಬಿಟ್ಟಿದ್ದರು. ಪ್ರತಿಭಟನೆಗಳು ಹಾಂಕಾಂಗ್ ನ ಮಾಮೂಲಿ ಚಿತ್ರಗಳಾದವು.
ಇದೆಲ್ಲ ಮುಗಿಯುವಷ್ಟರಲ್ಲಿ ಕೋವಿಡ್-19 ಶುರುವಾಯಿತು. ಚೀನಾದಲ್ಲಿ ಆರಂಭಗೊಂಡ ಕರೋನಾವನ್ನು ಚೀನಾ ನಿಧಾನವಾಗಿ ನಿಯಂತ್ರಣಕ್ಕೆ ತಂದುಕೊಂಡಿತು. ಆದರೆ ಅದು ಚೀನಾದಿಂದ ಹೊರಗೆ ಹಬ್ಬಿದ ನಂತರ ಈ ವರ್ಷದ ಫೆಬ್ರವರಿ-ಮಾರ್ಚ್ ತಿಂಗಳಿನಿಂದ ಜಗತ್ತಿನ ಎಲ್ಲ ದೇಶಗಳು ಕರೋನಾ ಜತೆ ಬಡಿದಾಟಕ್ಕೆ ನಿಂತವು. ಇದೇ ಸಂದರ್ಭಕ್ಕೆ ಕಾಯುತ್ತಿದ್ದ ಚೀನಾ, ಹೊಸ ದಾಳ ಹೂಡಿತು. ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ಹೊಸ ಕಾನೂನೊಂದನ್ನು ಜಾರಿಗೆ ತಂದಿತು. ಜೂನ್ 30ಕ್ಕೆ ಚೀನಾದ ನ್ಯಾಷನಲ್ ಕಾಂಗ್ರೆಸ್ ಸರ್ವಾನುಮತದ ಅಂಗೀಕಾರವನ್ನೂ ನೀಡಿತು. ಈ ಕಾನೂನಿನ ಪ್ರಕಾರ ಹಾಂಕಾಂಗ್ ನಲ್ಲಿ ಚೀನಾ ಸರ್ಕಾರ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಕಚೇರಿಯೊಂದನ್ನು ತೆರೆಯಲಿದೆ. ಹಾಂಕಾಂಗ್ ನ ಚೀಫ್ ಎಕ್ಸಿಕ್ಯೂಟಿವ್ ( ನಮ್ಮಲ್ಲಿ ರಾಜ್ಯಪಾಲರಿದ್ದ ಹಾಗೆ. ಇವರ ಆಯ್ಕೆಯನ್ನು ಚೀನಾ ಸರ್ಕಾರವೇ ಮಾಡುತ್ತದೆ.) ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಗೆ ನ್ಯಾಯಾಧೀಶರನ್ನು ನೇಮಕ ಮಾಡುವ ಅಧಿಕಾರ ಹೊಂದುತ್ತಾರೆ. ವಿಶೇಷವೆಂದರೆ ಈ ಕಾನೂನು ಜಾರಿಯಾದ ಸಂದರ್ಭದಲ್ಲಿ ಉಂಟಾಗಬಹುದಾದ ಕಾನೂನಾತ್ಮಕ ಸಮಸ್ಯೆಗಳನ್ನು ಬೀಜಿಂಗ್ ಬಗೆಹರಿಸುತ್ತದೆ. ಅಂದರೆ ಹಾಂಕಾಂಗ್ ಕಾನೂನು ಮತ್ತು ರಾಷ್ಟ್ರೀಯ ಭದ್ರತೆಯ ಚೀನಾ ಕಾನೂನು ಮುಖಾಮುಖಿಯಾಗಿ ಗೊಂದಲಗಳು ಸೃಷ್ಟಿಯಾದರೆ, ಕಾನೂನಿನ ವ್ಯಾಖ್ಯಾನದ ಹಕ್ಕನ್ನು ಚೀನಾ ಸರ್ಕಾರವೇ ಹೊಂದಿರುತ್ತದೆ.
ಅದರಲ್ಲೇನು ತಪ್ಪು? ಚೀನಾಗೆ ‘ರಾಷ್ಟ್ರೀಯ ಭದ್ರತೆ’ಯಂಥ ವಿಷಯದಲ್ಲಿ ನಿಯಂತ್ರಣ ಬೇಡವೇ ಎಂದು ನೀವು ಪ್ರಶ್ನಿಸಬಹುದು. ಜಗತ್ತಿನಾದ್ಯಂತ ಈಗ ‘ರಾಷ್ಟ್ರೀಯ ಭದ್ರತೆ’ ಗೆ ಸಂಬಂಧಿಸಿದಂತೆ ಕರಾಳಕಾಯ್ದೆಗಳನ್ನು ಜಾರಿಗೆ ತರುವುದೇ ಒಂದು ಟ್ರೆಂಡ್ ಆಗಿಬಿಟ್ಟಿದೆ. ಕಾಯ್ದೆಯ ಗುರಿ ಅದು ಪೇಪರ್ ಮೇಲೆ ಇದ್ದಂತೆ ಭಯೋತ್ಪಾದಕ ಸಂಘಟನೆಗಳು, ಭಯೋತ್ಪಾದಕರು ಆಗಿದ್ದಲ್ಲಿ ಯಾವ ಸಮಸ್ಯೆ ಇಲ್ಲ. ಆದರೆ ಇಂಥ ಕರಾಳ ಕಾಯ್ದೆಗಳು ಸರ್ಕಾರದ ವಿರುದ್ಧ ಧ್ವನಿ ಎತ್ತುವ ವಿರೋಧಿಗಳು, ಪತ್ರಕರ್ತರು, ಮಾನವ ಹಕ್ಕು ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು ಕೊನೆಗೆ ಸಾಮಾನ್ಯ ನಾಗರಿಕರನ್ನು ಹಿಂಸಿಸುತ್ತವೆ. ಎಲ್ಲ ಬಗೆಯ ಫ್ಯಾಸಿಸ್ಟ್ ಸರ್ಕಾರಗಳೂ ಇಂಥ ಕಾನೂನನ್ನು ತಮಗ ಬೇಕಾದಂತೆ ಬಳಸಿಕೊಳ್ಳುವುದು ಎಲ್ಲ ದೇಶಗಳಲ್ಲೂ ನಡೆದೇ ಇದೆ. ನಮ್ಮಲ್ಲೂ ಇದೆಯಲ್ಲ ಇಂಥ ಕರಾಳ ಕಾಯ್ದೆಗಳು? ಮೊನ್ನೆಮೊನ್ನೆ ತಾನೇ ಸಿಎಎ ವಿರುದ್ಧ ಪ್ರತಿಭಟಿಸಿದ ತಪ್ಪಿಗೆ ಗರ್ಭಿಣಿ ಹೆಣ್ಣುಮಗಳನ್ನು UAPA (Unlawful Activities Prevention Act) ಅಡಿಯಲ್ಲಿ ಬಂಧಿಸಲಾಗಿರಲಿಲ್ಲವೇ?
ಹುಶ್, ಇಂಡಿಯಾದ ಕರಾಳ ಕಾಯ್ದೆಗಳ ಕುರಿತು ಬರೆಯಲು ಹೋದರೆ ನಾನು ಹಾಂಕಾಂಗ್ ವಿಷಯ ಕೈಬಿಟ್ಟು ಇಲ್ಲೇ ಉಳಿದುಬಿಡುತ್ತೇನೆ. ಹೀಗಾಗಿ ಮತ್ತೆ ಹಾಂಕಾಂಗ್ ವಿಷಯಕ್ಕೆ ಬರೋಣ. ಅತ್ಯಂತ ಸರಳವಾಗಿ ಹೇಳೋದಾದರೆ ಚೀನಾ ಸರ್ಕಾರ ಹೊಸ ಕಾಯ್ದೆಯ ಮೂಲಕ ಹಾಂಕಾಂಗ್ ನ ಇಡೀ ರಾಜಕಾರಣ, ಜುಡಿಷಿಯರಿಯನ್ನು ಹಿಂಬಾಗಿಲಿನಿಂದ ತನ್ನ ಅಂಕೆಗೆ ತೆಗೆದುಕೊಳ್ಳಲು ಯತ್ನಿಸುತ್ತಿದೆ. ಇದರಿಂದ ಕೇವಲ ಹಾಂಕಾಂಗ್ ನಾಗರಿಕರು ಮಾತ್ರವಲ್ಲ, ಅಲ್ಲಿ ವ್ಯವಹರಿಸುತ್ತಿರುವ ಜಾಗತಿಕ ಉದ್ಯಮಿಗಳೂ ಸಮಸ್ಯೆಗಳಿಗೆ ಸಿಲುಕಿಕೊಳ್ಳಲಿದ್ದಾರೆ.
ಈಗ ಮತ್ತೆ ಪ್ರತಿಭಟನೆಗಳ ಕಾವು ಹೊತ್ತಿಕೊಂಡಿದೆ. ಅಮೆರಿಕ ಬುಸುಗುಟ್ಟುತ್ತಿದೆ. ಜತೆಗೆ ಬ್ರಿಟನ್, ಫ್ರಾನ್ಸ್, ಆಸ್ಟ್ರೇಲಿಯಾ ದಂಥ ಮಿತ್ರ ರಾಷ್ಟ್ರಗಳೂ ಧ್ವನಿ ಎತ್ತಿವೆ. ಅಮೆರಿಕ ಮೊದಲಿನಿಂದಲೂ ಹಾಂಕಾಂಗ್ ಜತೆ ದೊಡ್ಡ ಪ್ರಮಾಣದಲ್ಲಿ ವ್ಯವಹರಿಸುತ್ತಿದೆ. ಹಾಂಕಾಂಗ್ ಗೆ ಅದು ವಿಶೇಷ ಸ್ಥಾನಮಾನವನ್ನು ನೀಡಿತ್ತು. ಅದನ್ನು ಈಗ ಟ್ರಂಪ್ ಕಿತ್ತುಕೊಂಡಿದ್ದಾನೆ. ನಿನ್ನೆ ಟ್ರಂಪ್ ನೀಡಿದ ಹೇಳಿಕೆಯ ಆರಂಭವೇ ಹೀಗಿತ್ತು: “No special privileges (for Hong Kong), No special economic treatment and no export of sensitive technologies…”
ಟ್ರಂಪ್ ಯಾವಾಗಲೂ ಹಾಗೆಯೇ, ವಾಚಾಳಿ. ಆದರೆ ಆತನಿಗೂ ಗೊತ್ತಿದೆ, ಹಾಂಕಾಂಗ್ ವಿಷಯದಲ್ಲಿ ವಾಷಿಂಗ್ಟನ್ ತೆಗೆದುಕೊಂಡಿರುವ ತೀರ್ಮಾನಗಳು ಸ್ವತಃ ಅಮೆರಿಕವನ್ನೂ ಬಾಧಿಸುತ್ತದೆ. 2018ರ ಅಂಕಿ ಅಂಶಗಳನ್ನು ಗಮನಿಸುವುದಾದರೆ ಒಟ್ಟು 85,000 ಅಮೆರಿಕ ನಾಗರಿಕರು ಹಾಂಕಾಂಗ್ ನಲ್ಲಿ ನೆಲೆಸಿದ್ದಾರೆ. 1300 ಅಮೆರಿಕನ್ ಕಂಪೆನಿಗಳು ಹಾಂಕಾಂಗ್ ನಲ್ಲಿ ಕಾರ್ಯಾಚರಣೆ ನಡೆಸುತ್ತವೆ. ಟ್ರಂಪ್ ತೀರ್ಮಾನದಿಂದ ಮೊದಲು ಕಂಗೆಟ್ಟಿರುವವರು ಇವರು. ಇನ್ನು ಚೀನಾಗೂ ಸಮಸ್ಯೆ ನಿಶ್ಚಿತ. ಹಾಂಕಾಂಗ್ ಒಂದು ಬಗೆಯಲ್ಲಿ ಚೀನಾ ಉತ್ಪನ್ನಗಳ ದೊಡ್ಡ ಮಂಡಿ ಮಾರ್ಕೆಟ್ ಇದ್ದ ಹಾಗೆ. ಚೀನಾದ ಸರಕುಗಳು ಹಾಂಕಾಂಗ್ ಮೂಲಕ ಬೇರೆ ಬೇರೆ ದೇಶಗಳಿಗೆ ರಫ್ತಾಗುತ್ತಿದ್ದವು. ಈಗ ಈ ವ್ಯವಹಾರವೂ ಅನಿಶ್ಚಿತತೆಯ ಭೀತಿಯಲ್ಲಿದೆ.
ಇತರ ದೇಶಗಳಿಗೂ ಸಮಸ್ಯೆ ಕಡಿಮೆ ಏನಿಲ್ಲ. ಜಗತ್ತಿನ ನಾನಾ ದೇಶಗಳ ಮಲ್ಟಿನ್ಯಾಷನಲ್ ಕಂಪೆನಿಗಳಿಗೆ ಹಾಂಕಾಂಗ್ ಸ್ವರ್ಗ. ಯಾಕೆಂದರೆ ಇಲ್ಲಿ ಅತ್ಯಂತ ಕಡಿಮೆ ತೆರಿಗೆ ವಿಧಿಸಲಾಗುತ್ತದೆ. ವ್ಯಾಪಾರಸ್ನೇಹಿ ಕಾನೂನುಗಳು. ನೂರೆಂಟು ಬಗೆಯ ಕಾನೂನು ರಗಳೆಗಳಿಲ್ಲ. ಕರೆನ್ಸಿಗಳನ್ನು ಬದಲಾಯಿಸುವುದು ಸುಲಭ. ಭೌಗೋಳಿಕವಾಗಿಯೂ ಇದು ಒಂದು ರೀತಿಯ ಕೇಂದ್ರಬಿಂದು. ಹಾಂಕಾಂಗ್ ಒಂದು ಬಗೆಯಲ್ಲಿ ಮುಕ್ತ ಮಾರುಕಟ್ಟೆಯ ಜಾಗತಿಕ ರಾಯಭಾರಿ ಇದ್ದಂತೆ. ಈಗ ಅಮೆರಿಕದ ನಿರ್ಬಂಧಗಳಿಂದಾಗಿ ಈ ಮಲ್ಟಿನ್ಯಾಷನಲ್ ಸಂಸ್ಥೆಗಳೂ ಸಮಸ್ಯೆಗೆ ಸಿಲುಕುತ್ತವೆ.
ಇದೆಲ್ಲಕ್ಕಿಂತ ಮಿಗಿಲಾಗಿ ಅಮೆರಿಕ ಮತ್ತು ಚೀನಾ ದೇಶಗಳ ಸಂಘರ್ಷದಲ್ಲಿ ಬಡವಾಗಲಿರುವ ಕೂಸು ಹಾಂಕಾಂಗ್! ಚೀನಾ ಕೂಡ ಸುಮ್ಮನೆ ಕುಳಿತಿಲ್ಲ. ಅಮೆರಿಕದ ದಿಗ್ಬಂಧನಗಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೇಳಿದೆ. ಬೀಜಿಂಗ್ ನ ಬತ್ತಳಿಕೆಯಲ್ಲಿ ಇನ್ಯಾವ ಬಾಣಗಳಿವೆಯೋ ಯಾರು ಬಲ್ಲರು?
ಅಮೆರಿಕದಲ್ಲಿ ನವೆಂಬರ್ ನಲ್ಲಿ ಅಧ್ಯಕ್ಷೀಯ ಚುನಾವಣೆ ಪ್ರಕ್ರಿಯೆ ಆರಂಭಗೊಳ್ಳುತ್ತದೆ. ಜೋ ಬಿಡನ್ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ, ಎದುರಾಳಿ ಈಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ವಿದೇಶಾಂಗ ನೀತಿಗಳಿಗೆ ಸಂಬಂಧಿಸಿದಂತೆ ಎರಡೂ ರಾಜಕೀಯ ಪಕ್ಷಗಳಿಗೆ ಅಂಥ ವ್ಯತ್ಯಾಸವೇನೂ ಇಲ್ಲ. ಮೊದಲೆಲ್ಲ ಅಲ್ಲಿನ ರಾಜಕಾರಣಿಗಳು ರಷ್ಯಾ (ಹಿಂದಿನ ಸೋವಿಯತ್ ಯೂನಿಯನ್) ವಿರುದ್ಧ ಮಾತನಾಡಿಯೇ ತಮ್ಮ ಮತಬ್ಯಾಂಕ್ ಭದ್ರಪಡಿಸಿಕೊಳ್ಳುತ್ತಿದ್ದರು. ಈಗ ರಷ್ಯಾ ಜಾಗಕ್ಕೆ ಚೀನಾ ಬಂದು ಕುಳಿತಿದೆಯಷ್ಟೆ. ಚೀನಾ ವಿಷಯದಲ್ಲಿ ಟ್ರಂಪ್ನನ್ನು ಜೋ ಬಿಡನ್, ಜೋ ಬಿಡನ್ ನನ್ನು ಟ್ರಂಪ್ ತಾರಾಮಾರ ಟೀಕಿಸುತ್ತಿದ್ದಾರೆ. ಕೊನೆಗೆ ಜಗತ್ತಿನ ಎಲ್ಲ ಸಂಘರ್ಷಗಳೂ ಕೂಡ ರಾಜಕಾರಣದ ಭಾಗವೇ ಅಲ್ಲವೇ?