ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನವಾದ ಶುಕ್ರವಾರಂದು ಉತ್ತರ ಪ್ರದೇಶದಲ್ಲಿ ದಲಿತ ಜನಪ್ರತಿನಿಧಿಯೊಬ್ಬರನ್ನು ಅಲ್ಲಿನ ‘ಮೇಲ್ಜಾತಿ’ ಠಾಕೂರರು ಬರ್ಬರವಾಗಿ ಹತ್ಯೆಗೈದಿದ್ದಾರೆ. ‘ಸತ್ಯಮೇವ್ ಜಯತೆ’ ಎಂಬ ಹೆಸರಿನ ದಲಿತ ಹಿನ್ನೆಲೆಯ ಪಂಚಾಯ್ತಿ ಅಧ್ಯಕ್ಷರು ಮೇಲ್ಜಾತಿಯವರು ಹೇಳಿದ ಮಾತನ್ನು ಕೇಳಲಿಲ್ಲ ಎಂಬ ಕಾರಣಕ್ಕಾಗಿ ಈ ಕೊಲೆ ನಡೆದಿದೆ ಎನ್ನಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಭಟನೆ ನಡೆಯುತ್ತಿದ್ದಾಗ ನೂಕುನುಗ್ಗಲಿನಲ್ಲಿ ಪೊಲೀಸ್ ವಾಹನವೊಂದಕ್ಕೆ ಸಿಲುಕಿ ಸೂರಜ್ ಎಂಬ ಮತ್ತೊಬ್ಬ ದಲಿತ ಬಾಲಕನೂ ಬಲಿಯಾಗಿದ್ದಾನೆ.
ಉತ್ತರ ಪ್ರದೇಶದ ಅಜಂಗಡ ಜಿಲ್ಲೆಯ ಬಾಣಸಗಾಂವ್ ಊರಿನಲ್ಲಿ ದಲಿತರೇ ಹೆಚ್ಚು. ಇದೇ ಮೊತ್ತ ಮೊದಲ ಬಾರಿಗೆ 42ರ ಹರೆಯದ ಸತ್ಯಮೇವ್ ಆರಿಸಿ ಬಂದಿದ್ದ. ಇದರಿಂದ ತಮ್ಮ ಜಾತಿ ಪೊಗರಿಗೆ ಪೆಟ್ಟು ಬಿದ್ದಿದ್ದನ್ನು ಸಹಿಸದ ಜಾತಿವಾದಿಗಳು ಈ ಕೊಲೆ ನಡೆಸಿದ್ದಾರೆನ್ನಲಾಗಿದೆ.
ಪೊಲೀಸರು ಈ ಕೊಲೆಗೆ ಸಂಬಂಧಿಸಿದಂತೆ ವಿವೇಕ್ ಸಿಂಗ್ ಆಲಿಯಾಸ್ ಭೋಲು, ಸೂರ್ಯಂಶ್ ಕುಮಾರ್ ದುಬೇ, ಬ್ರಜೇಂದ್ರ ಸಿಂಗ್ ಆಲಿಯಾಸ್ ಗಪ್ಪು ಮತ್ತು ವಸೀಂ ಎಂಬುವವ ಮೇಲೆ ಪ್ರಕರಣ ದಾಖಲಿಸಿದ್ದಾರೆ. ದುಬೆಯ ಮೇಲೆ ಈಗಾಗಲೇ ಕೊಲೆ ಯತ್ನ ಸೇರಿದಂತೆ ಐದು ಇತರೆ ಕೇಸುಗಳಿವೆ. ಪ್ರಕರಣದ ಕುರಿತು ಸುದ್ದಿಗಾರರೊಂದಿಗೆ ಮಾತಾಡಿರುವ ಅಜಮ್ಗಡದ ಡಿಐಜಿ ಸುಭಾಶ್ ಚಂದ್ರ ದುಬೆ ಅವರು ತಾವು ಸತ್ಯಮೇವ್ ಕುಟುಂಬದ ದೂರಿನ ಪ್ರಕಾರ ‘ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುವವರೆಗೂ, ಯಾವ ಉದ್ದೇಶಕ್ಕೆ ಕೊಲೆ ಮಾಡಿದ್ದಾರೆ ಎಂದು ತಲೆ ಕೆಡಿಸಿಕೊಳ್ಳುವುದಿಲ್ಲ. ಚುನಾಯಿತ ಪ್ರತಿನಿಧಿಯೊಬ್ಬನ ಕೊಲೆ ಗಂಭೀರ ಅಪರಾಧವಾಗಿದೆ’ ಎಂದಿದ್ದಾರೆ.
ಪೊಲೀಸರ ವಾಹನಕ್ಕೆ ಸಿಲುಕಿ ಪ್ರಾಣ ಬಿಟ್ಟಿದ್ದಾರೆ ಎನ್ನಲಾದ ಸೂರಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸುವುದಾಗಿ ಡಿಐಜಿ ತಿಳಿಸಿದ್ದಾರೆ.
ಸತ್ಯಮೇವ್ ಹತ್ಯೆಯ ವಿವರಗಳು:
ಸತ್ಯಮೇವ್ ಅವರ ಸೋದರಳಿಯ ಲಿಂಕನ್ (32) ಹೇಳುವಂತೆ, ಈ ಊರಿನಲ್ಲಿ ಈ ಕಗ್ಗೊಲೆ ನಡೆಯುವುದಕ್ಕೆ ಮೊದಲು ಹಲವು ಬಾರಿ ಮೇಲ್ಜಾತಿ ಠಾಕೂರರಿಗೂ ಮತ್ತು ಪಂಚಾಯ್ತಿ ಅಧ್ಯಕ್ಷರಿಗೂ ನಡುವೆ ಮಾತಿನ ಚಕಮಕಿ ನಡೆದಿತ್ತು. ‘ಸತ್ಯಮೇವ್ ಸಮಾಜದಲ್ಲಿ ಪಡೆದುಕೊಂಡಿದ್ದ ಮನ್ನಣೆಯ ಬಗ್ಗೆ ಅವರಲ್ಲಿ ಅಸೂಯೆ ತುಂಬಿತ್ತು. ಒಬ್ಬ ದಲಿತನಾಗಿ ಇವರೆದುರು ತಲೆ ಎತ್ತಿ ನಡೆಯುತ್ತಾನೆ ಎನ್ನುವುದೇ ಅವರ ಅಸಹನೆಗೆ ಕಾರಣವಾಗಿತ್ತು. ಒಬ್ಬ ದಲಿತನಾದವನು ಅವರ ಮಾತಿಗೆ “ಇಲ್ಲ” ಎಂದು ಹೇಳುವುದನ್ನು ಸಹಿಸಿಕೊಳ್ಳದ ಅವರು ಸತ್ಯಮೇವ್ ಅವರನ್ನು ಕೊಂದಿದ್ದಾರೆ”
ಬಾಣಸಗಾಂವ್ನಲ್ಲಿ 300 ಪರಿಶಿಷ್ಟ ಜಾತಿಯ ಮನೆಗಳು 30 ರಷ್ಟು ಬ್ರಾಹ್ಮಣ, ಠಾಕೂರರ ಮನೆಗಳೂ ಇವೆ. ಸಂಖ್ಯೆಯಲ್ಲಿ ಕಡಿಮೆ ಇರುವ ಮೇಲ್ಜಾತಿಗಳು ದೀರ್ಘ ಕಾಲದಿಂದ ಪಂಚಾಯ್ತಿಯ ಅಧ್ಯಕ್ಷನ ಹುದ್ದೆಯನ್ನು ಪಡೆಯಲು ಆಗಿರಲಿಲ್ಲ.
ಮೃತ ಸತ್ಯಮೇವ್ ಅವರ ಸೋದರಳಿಯ ಲಿಂಕನ್ ಹೇಳುವ ಪ್ರಕಾರ, ಈ ಪ್ರಕಣದಲ್ಲಿ ಸೂರ್ಯಾಂಶ್ ಕುಮಾರ್ ದುಬೆ ಸತ್ಯಮೇವ್ ಅವರ ಬಳಿ ಬಂದು ತಾನು ಊರಿನಲ್ಲೇ ಇದ್ದುದಾಗಿ ಸುಳ್ಳು ಪತ್ರವೊಂದನ್ನು ನೀಡುವಂತೆ ಒತ್ತಾಯಪಡಿಸಿದ್ದನು. “ಕಳೆದ ಕೆಲವು ವಾರಗಳಲ್ಲಿ ದುಬೇ ಮೂರು ಸಲ ಸತ್ಯಮೇವ್ ಬಳಿ ಬಂದಿದ್ದ. ಆದರೆ ನನ್ನ ಮಾವ ಅದಕ್ಕೆ ನಿರಾಕರಿಸಿದ್ದ. ಕೊನೆಗೆ ಯಾವುದೇ ತಕರಾರಿಲ್ಲ ಎಂಬಂತೆ ಹೋಗಿದ್ದರು. ಆದರೆ ತಮ್ಮ ಮಾತಿಗೆ ದಲಿತರು ನಿರಾಕರಣೆ ಮಾಡಿದ್ದು ಅವರಿಗೆ ಸಹಿಸಲಾಗಲಿಲ್ಲ. ನಮಗೆ ನಮ್ಮ ಸ್ಥಾನ ಯಾವುದು ಎಂದು ತೋರಿಸಬೇಕೆಂದೇ ಈ ಹೇಯ ಕೃತ್ಯ ಎಸಗಿದ್ದಾರೆ” ಎನ್ನುತ್ತಾರೆ ಲಿಂಕನ್.
ಕೊಲೆಗೈದ ಬಳಿಕ ನಾಲ್ಕು ಜನ ಆರೋಪಿಗಳೂ ಸತ್ಯಮೇವ್ ಅವರ ತಾಯಿಯ ಬಳಿ ಹೋಗಿ ಆಕೆಯನ್ನು ಕೆಟ್ಟಾಕೊಳಕಾ ನಿಂದಿಸಿದ್ದಲ್ಲದೇ ಜಾತಿ ಹೆಸರಿಡಿದು ನಿಂದಿಸಿದ್ದಾರೆ. ಹೋಗಿ ನಿನ್ನ ಮಗನ ದೇಹವನ್ನು ನೋಡಿಕೊ ಎಂದು ಹೇಳಿ ಹೋಗಿದ್ದಾರೆ ಎಂದು ಲಿಂಕನ್ ಮಾಹಿತಿ ನೀಡಿದ್ದಾರೆ.
ಸತ್ಯಮೇವ್ ಅವರ ಹೆಂಡತಿ ಮುನ್ನಿದೇವಿ ನೀಡಿದ ಪ್ರಥಮ ಮಾಹಿತಿ ವರದಿಯಲ್ಲಿ ತಿಳಿಸಿರುವಂತೆ ಶುಕ್ರವಾರ ಸಂಜೆ 5 ಗಂಟೆಯ ಹೊತ್ತಿಗೆ ವಿವೇಕ್ ಸಿಂಗ್ ಎಂಬಾತ ಅವರ ಮನೆ ಬಳಿ ಬಂದಿದ್ದ. “ಆತನೇ ನನ್ನ ಗಂಡನನ್ನು ಬೈಕಿನಲ್ಲಿ ಹತ್ತಿರದ ಕೊಳವೆ ಬಾಯಿಯತ್ತ ಕರೆದೊಯ್ದ. ತದನಂತರ ವಿವೇಕ್ ಸಿಂಗ್, ಸೂರ್ಯಾಂಶ್ ಕುಮಾರ್ ದುಬೇ, ಬೃಜೇಂದ್ರ ಸಿಂಗ್ ಮತ್ತು ವಸೀಂ ನನ್ನ ಗಂಡನನ್ನು ಸಿಂಗ್ ಅವರ ಮನೆಯ ಕೊಳದ ಕಡೆಗೆ ಕರೆದೊಯ್ದರು. ಅಲ್ಲಿ ನನ್ನ ಗಂಡನನ್ನು ಗುಂಡು ಹೊಡೆದು ಬರ್ಬರವಾಗಿ ಕೊಂದಿದ್ದಾರೆ” ಎಂದು ಅವರು ಮಾಹಿತಿ ನೀಡಿದ್ದಾರೆ.
ಸತ್ಯಮೇವ್ ಮತ್ತು ಮುನ್ನಿ ದಂಪತಿಗಳಿಗೆ ಮೂವರು ಮಕ್ಕಳು. ಹಿರಿಯ ಮಗ 12 ವರ್ಷದವನು. ಈ ದಂಪತಿಗಳು 30 ಮಂದಿಯ ಕೂಡು ಕುಟುಂಬದಲ್ಲಿ ಜೀವಿಸಿದ್ದರು. ತಿಂಗಳ ಹಿಂದೆ ಜಮೀನಿಗೆ ಸಂಬಂಧಿಸಿದ ವಿಷಯದಲ್ಲಿ ಬ್ರಜೇಂದ್ರ ಸಿಂಗ್ ಆಲಿಯಾಸ್ ಗಪ್ಪು ತಗಾದೆ ತೆಗೆದಿದ್ದ. ಸಾವರ್ಜನಿಕ ಬಳಕೆಗಾಗಿ ಮೀಸಲಾಗಿದ್ದ ರಸ್ತೆಯೊಂದರಲ್ಲಿ ಸ್ವಂತ ಕೊಳ ನಿರ್ಮಿಸಲು ಆತ ಆ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದ. ಈ ಕುರಿತು ಮಾತುಕತೆ ನಡೆಸಿದಾಗ್ಯೂ ಆತ ಜಮೀನು ಬಿಟ್ಟುಕೊಟ್ಟಿರಲಿಲ್ಲ. ಸತ್ಯಮೇವ್ ಅವರ ಸಂಬಂಧಿ, ಕೋಲ್ಕೊತಾದಲ್ಲಿ ಸರ್ಕಾರಿ ನೌಕರಿಯಲ್ಲಿರುವ ರಾಮು ರಾಮ್ ಹೇಳುವಂತೆ ಇಂದು ಹಳ್ಳಿಯ ಅನೇಕ ಯುವಕರು ಉತ್ತಮ ಶಿಕ್ಷಣ ಪಡೆದು ಒಳ್ಳೆ ನೌಕರಿ ಹೊಂದಿರುವುದು ಸಹ ಮೇಲ್ಜಾತಿ ಜನರ ಅಸಹನೆಗೆ ಕಾರಣವಾಗಿದೆ. “ಅತ್ಯಂತ ಕಠಿಣ ದುಡಿಮೆ ಮತ್ತು ಶಿಕ್ಷಣದ ಮೂಲಕವಷ್ಟೇ ಇಂದು ಕುಟುಂಬ ಹಳ್ಳಿಯಲ್ಲಿ 15 ಬಿಗಾಗಳಷ್ಟು ಜಮೀನು ಪಡೆಯಲು ಸಾಧ್ಯವಾಗಿದೆ. ನನ್ನಮಾವನನ್ನು ಮೇಲ್ಜಾತಿಯವರು ದ್ವೇಷಿಸಲು ಇದು ಮತ್ತೊಂದು ಕಾರಣವಾಗಿತ್ತು” ಎನ್ನುತ್ತಾರೆ ಲಿಂಕನ್.
ಶುಕ್ರವಾರ ಪ್ರತಿಭಟನೆಯ ವೇಳೆಗೆ ಬಲಿಯಾದ ಚಿಕ್ಕ ಬಾಲಕ ಸೂರಜ್ರ ಸೋದರ ಸಂಬಂಧಿ ದೀಪಕ್ (18) ಹೇಳುವಂತೆ “ಗ್ರಾಮದ ಅಧ್ಯಕ್ಷರ ಕೊಲೆ ನಡೆದಿದ್ದರಿಂದ ಜನರಲ್ಲಿ ಆಕ್ರೋಶದ ಕಟ್ಟೆಯೊಡೆದಿತ್ತು. ಕೊಲೆಗಾರರನ್ನು ಕೂಡಲೇ ಬಂಧಿಸಬೇಕು ಎಂದು ನಾವು ಪೊಲೀಸರನ್ನು ಒತ್ತಾಯಿಸುತ್ತಿದ್ದೆವು ಆದರೆ ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇದರಿಂದ ಬೇಸತ್ತ ಪ್ರತಿಭಟನಕಾರರು ಆರೋಪಿಗಳ ಮನೆಯ ಮೇಲ ಕಲ್ಲು ತೂರಿದರು. ಅವರು ಪೊಲೀಸ್ ಚೌಕಿ ಕಡೆಗೆ ದೌಡಾಯಿಸಿದಾಗ ಪೊಲೀಸರು ಲಾಠಿಚಾರ್ಜ್ ನಡೆಸಿದರು”. ಈ ಘರ್ಷಣೆಯಲ್ಲಿ ತಾನೂ ಏಟು ತಿಂದಿರುವ ದೀಪಕ್ ಹೇಳುವ ಪ್ರಕಾರ ಆ ಸಂದರ್ಭದಲ್ಲಿ ಉಂಟಾದ ನೂಕುನುಗ್ಗಲಿನ ಗೊಂದಲಮಯ ವಾತಾವರಣದಲ್ಲಿ ಚಿಕ್ಕ ಬಾಲಕ ಸೂರಜ್ ಪೊಲೀಸ್ ವಾಹನದ ಅಡಿಗೆ ಸಿಲುಕಿಕೊಂಡ. “ಅಲ್ಲಿದ್ದ ಎಲ್ಲರೂ ಇದನ್ನು ನೋಡಿದ್ದಾರೆ. ಆ ವಾಹನದ ಮೇಲೆ ಪೊಲೀಸ್ ಅಧಿಕಾರಿ ಎಂದು ಬರೆದಿತ್ತು” ಎನ್ನುತ್ತಾರೆ ದೀಪಕ್.
ದಲಿತ ಮುಖಂಡ ಸತ್ಯಮೇವ್ ಅವರ ಹತ್ಯೆಯ ಈ ಘಟನೆಯನ್ನು ಬಹುಜನ ಸಮಾಜವಾದಿ ಪಕ್ಷದ ಮಾಯಾವತಿ ಹಾಗೂ ಆಜಾದ್ ಸಮಾಜ್ ಪಕ್ಷದ ಅಧ್ಯಕ್ಷ ಚಂದ್ರಶೇಖರ್ ಆಜಾದ್ ತೀವ್ರವಾಗಿ ಖಂಡಿಸಿದ್ದಾರೆ. ಆರೋಪಿಗಳನ್ನು ಕೂಡಲೇ ಬಂಧಿಸಿ ಗೂಂಡಾ ಕಾಯ್ದೆ ಮತ್ತು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೃತರ ಕುಟುಂಬಗಳಿಗೆ ತಲಾ ಐದು ಲಕ್ಷ ಪರಿಹಾರ ಘೋಷಿಸಿದ್ದಾರೆ.
ಮಾಹಿತಿ ಆಕರ: ದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್